ಅಕ್ರಮ ಗಣಿಗಾರಿಕೆ ವರದಿ: ಸರ್ಕಾರದ ತಿರುಗುಬಾಣ

7

ಅಕ್ರಮ ಗಣಿಗಾರಿಕೆ ವರದಿ: ಸರ್ಕಾರದ ತಿರುಗುಬಾಣ

Published:
Updated:

ಬೆಂಗಳೂರು: ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ತನಿಖಾ ವರದಿಗೆ ಸಂಬಂಧಿಸಿದಂತೆ ಮೂರು ತಾಂತ್ರಿಕ ಅಂಶಗಳ ಬಗ್ಗೆ ಲೋಕಾಯುಕ್ತ ಸಂಸ್ಥೆಯಿಂದಲೇ ಸಲಹೆ ಕೋರಲು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ವರದಿಯಲ್ಲಿ ಹೆಸರಿಸಿರುವ ಅಧಿಕಾರಿಗಳಿಗೆ ವಿವರಣೆ ನೀಡಲು ಒಂದು ಅವಕಾಶ ಕಲ್ಪಿಸಲೂ ತೀರ್ಮಾನಿಸಲಾಗಿದೆ.2000ನೇ ಇಸವಿ ಜನವರಿ 1ರಿಂದ 2010ರ ಜುಲೈ 19ರವರೆಗಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಇದೇ ಜುಲೈ 27ರಂದು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಮೊದಲ ಬಾರಿಗೆ ಲೋಕಾಯುಕ್ತ ವರದಿ ಕುರಿತು ಚರ್ಚೆ ನಡೆಯಿತು.

 

ಸಚಿವರ ಪದತ್ಯಾಗಕ್ಕೆ ಶಿಫಾರಸು ಮಾಡಿರುವುದು, ಶಿಫಾರಸಿನಲ್ಲಿ ಉಲ್ಲೇಖಿಸಿರುವ ಕಲಂ ಮತ್ತು ಆರೋಪಿಗಳಿಗೆ ವಿವರಣೆ ನೀಡಲು ಅವಕಾಶ ಕಲ್ಪಿಸದೇ ಶಿಫಾರಸು ಸಲ್ಲಿಸಿರುವುದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದಿಂದಲೇ ಸಲಹೆ ಪಡೆಯಲು ನಿರ್ಧರಿಸಲಾಗಿದೆ.ಸಚಿವ ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಸ್.ಸುರೇಶ್‌ಕುಮಾರ್, `ಲೋಕಾಯುಕ್ತ ವರದಿಯನ್ನು ಸರ್ಕಾರ ಪ್ರಶ್ನಿಸುತ್ತಿಲ್ಲ. ಆದರೆ, ವರದಿಯಲ್ಲಿ ಪ್ರಸ್ತಾಪಿಸಿರುವ ಹಲವು ವಿಷಯಗಳ ಬಗ್ಗೆ ರಾಜ್ಯದ ಅಡ್ವೊಕೇಟ್ ಜನರಲ್ ಮತ್ತು ಇತರೆ ಕಾನೂನು ತಜ್ಞರಿಂದ ಅಭಿಪ್ರಾಯ ಪಡೆಯಲಾಗಿದೆ.

 

ಲೋಕಾಯುಕ್ತರು ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ಮೂರು ತಾಂತ್ರಿಕ ಅಂಶಗಳ ಬಗ್ಗೆ ಸಲಹೆ ನೀಡುವಂತೆ ಕೋರಿ ಲೋಕಾಯುಕ್ತಕ್ಕೆ ಪತ್ರ ಬರೆಯಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ~ ಎಂದು ಪ್ರಕಟಿಸಿದರು.`ಸಂವಿಧಾನದ 164ನೇ ವಿಧಿಯ ಪ್ರಕಾರ ರಾಜ್ಯಪಾಲರು ಮುಖ್ಯಮಂತ್ರಿಯನ್ನು ನೇಮಕ ಮಾಡುತ್ತಾರೆ. ಮುಖ್ಯಮಂತ್ರಿಯ ಶಿಫಾರಸಿನಂತೆ ಮಂತ್ರಿಗಳನ್ನು ನೇಮಕ ಮಾಡುತ್ತಾರೆ. ಸಂವಿಧಾನದ 191ನೇ ವಿಧಿಯು ಒಬ್ಬ ವ್ಯಕ್ತಿ ವಿಧಾನಸಭೆ ಅಥವಾ ವಿಧಾನ ಪರಿಷತ್‌ನ ಸದಸ್ಯನಾಗಲು ಇರಬೇಕಾದ ಅರ್ಹತೆಗಳು ಮತ್ತು ಅನರ್ಹತೆಗೆ ಕಾರಣವಾಗುವ ಅಂಶಗಳ ಬಗ್ಗೆ ವಿವರಿಸಿದೆ. ಆದರೆ, ಲೋಕಾಯುಕ್ತರು ತಮ್ಮ ವರದಿಯಲ್ಲಿ ಸಚಿವರನ್ನು `ಸಾರ್ವಜನಿಕ ನೌಕರ~ ಎಂದು ಪರಿಗಣಿಸಿದ್ದಾರೆ. ಇದು ಸಮಂಜಸವೇ ಎಂಬ ಅಂಶದ ಬಗ್ಗೆ ಸಲಹೆ ಕೋರಲಾಗುವುದು~ ಎಂದರು.`ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇರುವ ನಿಯಮಗಳ ಅಡಿಯಲ್ಲಿ ಸಚಿವ ಸಂಪುಟದ ಸದಸ್ಯರ ವಿರುದ್ಧವೂ ಕ್ರಮ ಜರುಗಿಸಬಹುದೇ? ಎಂಬ ಪ್ರಶ್ನೆ ಉದ್ಭವಿಸಿದೆ. ಅಲ್ಲದೇ ಲೋಕಾಯುಕ್ತರು ತಮ್ಮ ವರದಿಯಲ್ಲಿ ಸಚಿವರ ಪದಚ್ಯುತಿಗೆ ಶಿಫಾರಸು ಮಾಡಿದ್ದಾರೆ. ಅವರು ಶಾಸಕರಾಗಿ ಉಳಿಯಬಹುದೇ? ಇಲ್ಲವೇ? ಎಂಬುದರ ಬಗ್ಗೆ ಏನನ್ನೂ ಪ್ರಸ್ತಾಪಿಸಿಲ್ಲ.ಸಂವಿಧಾನದ 164 ಮತ್ತು 191ನೇ ವಿಧಿಗಳಿಗೆ ವಿರುದ್ಧವಾಗಿ ಶಿಫಾರಸು ಮಾಡಲು ಲೋಕಾಯುಕ್ತರಿಗೆ ಅವಕಾಶ ಇದೆಯೇ? ಈ ವಿಷಯಗಳಲ್ಲಿ ತಮ್ಮ ವ್ಯಾಪ್ತಿ ಮೀರಿದ್ದಾರೆಯೇ ಎಂಬುದರ ಬಗ್ಗೆಯೂ ಸಲಹೆ ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗುವುದು~ ಎಂದು ವಿವರಿಸಿದರು.ಕಾಯ್ದೆ ಬಗ್ಗೆಯೂ ಸಂದೇಹ: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ತನಿಖಾ ವರದಿಯಲ್ಲಿ ಕರ್ನಾಟಕ ಲೋಕಾಯುಕ್ತ ಕಾಯ್ದೆ-1984ರ ಕಲಂ 13ರ ಅಡಿಯಲ್ಲಿ ಸಚಿವರ ವಿರುದ್ಧ ಶಿಫಾರಸು ಮಾಡಿರುವ ಬಗ್ಗೆಯೂ  ಲೋಕಾಯುಕ್ತದಿಂದಲೇ ಸಲಹೆ ಪಡೆಯಲು ನಿರ್ಧರಿಸಲಾಗಿದೆ.

 

ದೂರುಗಳನ್ನು ಆಧರಿಸಿ ನಡೆಯುವ ತನಿಖೆಯಲ್ಲಿ `ಸಾರ್ವಜನಿಕ ನೌಕರ~ನ ಪದಚ್ಯುತಿಗೆ ಶಿಫಾರಸು ಮಾಡಬಹುದು ಎಂದು ಈ ಕಲಂ ಹೇಳುತ್ತದೆ. ಆದರೆ, ಕಲಂ 7(2)(ಎ) ಅಡಿಯಲ್ಲಿ ಸರ್ಕಾರವೇ ಒಪ್ಪಿಸಿದ್ದ ತನಿಖೆಯಲ್ಲಿ ಕಲಂ 13ರ ಅಡಿಯಲ್ಲಿ ಶಿಫಾರಸು ಮಾಡಲು ಲೋಕಾಯುಕ್ತರಿಗೆ ಅಧಿಕಾರವಿದೆಯೇ? ಎಂಬ ಪ್ರಶ್ನೆಯನ್ನೂ ಲೋಕಾಯುಕ್ತದ ಮುಂದಿಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.`ದೂರನ್ನು ಆಧರಿಸಿ ನಡೆಯುವ ತನಿಖೆಯಲ್ಲಿ ಆರೋಪಿತ ಸಾರ್ವಜನಿಕ ನೌಕರನ ವಿರುದ್ಧದ ಆರೋಪಗಳಲ್ಲಿ ಹುರುಳಿದೆ ಎಂಬ ನಿರ್ಧಾರಕ್ಕೆ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ಬಂದಲ್ಲಿ, ಆತನನ್ನು ಹುದ್ದೆಯಿಂದ ತೆಗೆದುಹಾಕಲು ಶಿಫಾರಸು ಮಾಡಬಹುದು ಎಂದು ಕಲಂ 13 ಹೇಳುತ್ತದೆ.

 

ಆದರೆ, ಈ ಪ್ರಕರಣದಲ್ಲಿ ಕಲಂ 7(2)ರ ಅಡಿಯಲ್ಲಿ ಸರ್ಕಾರವೇ ಒಪ್ಪಿಸಿದ್ದ ತನಿಖೆಯ ನಂತರ ಇಂತಹ ಶಿಫಾರಸು ಮಾಡಲಾಗಿದೆ. ಇದು ಸಮಂಜಸವೇ ಎಂಬ ಪ್ರಶ್ನೆಗೆ ಸಲಹೆ ನೀಡುವಂತೆ ಲೋಕಾಯುಕ್ತವನ್ನು ಕೋರಲಾಗುವುದು~ ಎಂದು ಸುರೇಶ್‌ಕುಮಾರ್ ಹೇಳಿದರು.ಸಹಜ ನ್ಯಾಯದ ಬಗ್ಗೆಯೂ ಪ್ರಶ್ನೆ: ಯಾವುದೇ ತನಿಖೆ ಅಥವಾ ವಿಚಾರಣೆಯ ವೇಳೆ ಆರೋಪಿಗಳಿಂದ ವಿವರಣೆ ಪಡೆದ ನಂತರ ನಿರ್ಧಾರಕ್ಕೆ ಬರುವ `ಸಹಜ ನ್ಯಾಯ~ ಪದ್ಧತಿ ಜಗತ್ತಿನಾದ್ಯಂತ ಜಾರಿಯಲ್ಲಿದೆ. ಆದರೆ, ಅಕ್ರಮ ಗಣಿಗಾರಿಕೆ ಕುರಿತ ತನಿಖಾ ವರದಿಯಲ್ಲಿ 700ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.ಈ ಪ್ರಕ್ರಿಯೆಯಲ್ಲಿ ಆರೋಪ ಎದುರಿಸುತ್ತಿರುವವರ ಪ್ರತಿಕ್ರಿಯೆ, ವಿವರಣೆಯನ್ನೇ ಪಡೆಯದೇ ಅಂತಿಮ ತೀರ್ಮಾನಕ್ಕೆ ಬರಲಾಗಿದೆ. ಇಂತಹ ಕ್ರಮ ಸರಿಯೇ ಎಂಬ ಪ್ರಶ್ನೆಯನ್ನೂ ಲೋಕಾಯುಕ್ತಕ್ಕೆ ರವಾನಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.`ಸಚಿವರು ಮತ್ತು ಶಾಸಕರ ವಿಷಯದಲ್ಲಿ ಅಧಿಕಾರದಿಂದ ತೆಗೆದುಹಾಕಬೇಕೆಂಬ ಶಿಫಾರಸು ಅವರ ಪಾಲಿಗೆ `ಲೌಕಿಕ ಸಾವು~ (ಸಿವಿಲ್ ಡೆತ್) ಇದ್ದಂತೆ. ಈ ವಿಷಯ ರಾಜಕಾರಣಿಯ ಗೌರವ, ಮುಂದುವರಿಕೆ ಎಲ್ಲವನ್ನೂ ಒಳಗೊಂಡಿರುತ್ತದೆ. ಸಹಜ ನ್ಯಾಯ ಪಾಲಿಸದೇ ಇಂತಹ ಶಿಫಾರಸುಗಳನ್ನು ಮಾಡಬಹುದೇ ಎಂದು ಕಾನೂನು ತಜ್ಞರು ಪ್ರಶ್ನಿಸಿದ್ದಾರೆ. ಈ ಕಾರಣದಿಂದಾಗಿಯೇ ಸರ್ಕಾರ ಸಲಹೆ ಪಡೆಯುವ ನಿರ್ಧಾರ ಕೈಗೊಂಡಿದೆ~ ಎಂದು ವಿವರಣೆ ನೀಡಿದರು.`ಇದು ಒಂದು ಪ್ರಮುಖ ಪ್ರಕರಣ. ಲೋಕಾಯುಕ್ತ ಕಾಯ್ದೆ ಜಾರಿಯಾದ 26 ವರ್ಷಗಳ ಬಳಿಕ ಇಂತಹ ಪರಿಸ್ಥಿತಿ ಉದ್ಭವಿಸಿದೆ. ಈ ಸಂದರ್ಭದಲ್ಲಿ ಸರ್ಕಾರ ಕೈಗೊಳ್ಳುವ ನಿರ್ಣಯಗಳು `ಪರಂಪರೆ~ ಆಗಲಿವೆ. ಆದ್ದರಿಂದ ಸರ್ಕಾರಕ್ಕೆ ಇರುವ ಸಂದೇಹಗಳಿಗೆ ಲೋಕಾಯುಕ್ತದಿಂದಲೇ ಸಲಹೆ ಪಡೆದು, ಬಳಿಕ ತೀರ್ಮಾನ ಕೈಗೊಳ್ಳುವ ನಿರ್ಧಾರಕ್ಕೆ ಸಚಿವ ಸಂಪುಟ ಬಂದಿದೆ. ಈ ನೆಪದಲ್ಲಿ ರಕ್ಷಣೆ ಪಡೆಯುವ ಯಾವುದೇ ದುರುದ್ದೇಶ ಸರ್ಕಾರಕ್ಕೆ ಇಲ್ಲ~ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಅಧಿಕಾರಿಗಳಿಗೆ ಅವಕಾಶ: ಲೋಕಾಯುಕ್ತ ವರದಿಯಲ್ಲಿ 700ಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳ ವಿರುದ್ಧ ಇರುವ ಆಪಾದನೆಗಳ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ಪರಿಶೀಲನೆ ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ಈ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಸಮಿತಿಯ ವರದಿ ಕೈಸೇರಿದ ಬಳಿಕ, ಆಪಾದನೆ ಎದುರಿಸುತ್ತಿರುವ ಎಲ್ಲ ಅಧಿಕಾರಿಗಳು ಮತ್ತು ನೌಕರರಿಗೆ ವಿವರಣೆ ನೀಡಲು ಒಂದು ಅವಕಾಶ ನೀಡುವ ಬಗ್ಗೆಯೂ ಸಂಪುಟ ನಿರ್ಧರಿಸಿದೆ ಎಂದರು.`ಅಧಿಕಾರಿಗಳ ವಿರುದ್ಧ ಇನ್ನೂ ಕ್ರಮ ಜರುಗಿಸಿಲ್ಲ. ಕೆಲವರನ್ನು ಇಲಾಖಾವಾರು ವಿಚಾರಣೆ ವೇಳೆ ಅಮಾನತು ಮಾಡಿರಬಹುದು. ಆದರೆ, ಅಮಾನತು ಶಿಕ್ಷೆಯಲ್ಲ. ಪ್ರತಿಯೊಬ್ಬರಿಗೂ ತಮ್ಮ ವಿರುದ್ಧದ ಆರೋಪಗಳ ಬಗ್ಗೆ ವಿವರಣೆ ನೀಡುವ ಅವಕಾಶ ಕಲ್ಪಿಸಿದ ಬಳಿಕವೇ ಕ್ರಮ ಜರುಗಿಸುವ ಸಂಬಂಧ ಸರ್ಕಾರ ನಿರ್ಧಾರಕ್ಕೆ ಬರುತ್ತದೆ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.`ಲೋಕಾಯುಕ್ತರೇ ಇಲ್ಲದಿರುವಾಗ ಯಾರಿಂದ ಸಲಹೆ ಪಡೆಯುತ್ತೀರಿ~ ಎಂಬ ಪ್ರಶ್ನೆಗೆ, `ಲೋಕಾಯುಕ್ತ ಸಂಸ್ಥೆ ಇದೆ. ಸಂಸ್ಥೆಯ ಕಡೆಯಿಂದಲೇ ಸಲಹೆ ಪಡೆಯುತ್ತೇವೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry