ಅಕ್ರಮ ಗಣಿಗಾರಿಕೆ: ಶೀಘ್ರವೇ ಕ್ರಮ

7

ಅಕ್ರಮ ಗಣಿಗಾರಿಕೆ: ಶೀಘ್ರವೇ ಕ್ರಮ

Published:
Updated:

ಬೆಂಗಳೂರು: ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಲೋಕಾಯುಕ್ತರು ಸಲ್ಲಿಸಿದ್ದ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ವರದಿಯಲ್ಲಿನ ಶಿಫಾರಸುಗಳನ್ನು ಜಾರಿಗೊಳಿಸುವ ಸಂಬಂಧ ಶೀಘ್ರದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ.ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಲೋಕಾಯುಕ್ತ ವರದಿ ಕುರಿತು ಚರ್ಚೆ ನಡೆದಿದೆ. ವರದಿ ಶಿಫಾರಸುಗಳ ಜಾರಿ ಕುರಿತು ತೀರ್ಮಾನಕ್ಕೆ ಬರುವ ಮುನ್ನ ಮತ್ತಷ್ಟು ಚರ್ಚೆ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ. ಈ ಕಾರಣದಿಂದ ಸಚಿವ ಸಂಪುಟದ ಮುಂದಿನ ಸಭೆಯ ವೇಳೆ ಈ ವಿಚಾರದ ಕುರಿತು ವಿಸ್ತೃತ ಚರ್ಚೆ ನಡೆಸಿ ನಿರ್ಣಯಕ್ಕೆ ಬರಲು ತೀರ್ಮಾನಿಸಲಾಗಿದೆ.ಸಂಪುಟ ಸಭೆಯ ಬಳಿಕ ಪತ್ರಕರ್ತರಿಗೆ ವಿವರ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, `ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರು ಸಲ್ಲಿಸಿರುವ ವರದಿಯ ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ಅಕ್ರಮ ಗಣಿಗಾರಿಕೆ ನಡೆಸಿರುವವರಿಂದ ನಷ್ಟ ವಸೂಲಿ ಕುರಿತು ಶೀಘ್ರದಲ್ಲೇ ಸ್ಪಷ್ಟ ನಿರ್ಧಾರಕ್ಕೆ ಬರಲಾಯಿತು' ಎಂದರು.ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲಾದ 700ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ತಮ್ಮ ವರದಿಯಲ್ಲಿ ಶಿಫಾರಸು ಮಾಡಿದ್ದರು. ಅಕ್ರಮ ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ 16 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಿದ್ದ ಅವರು, ನಷ್ಟಕ್ಕೆ ಕಾರಣವಾಗಿರುವವರಿಂದ ಐದು ಪಟ್ಟು ದಂಡ ವಸೂಲಿ ಮಾಡುವಂತೆ ಶಿಫಾರಸು ಮಾಡಿದ್ದರು.ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳ ಕುರಿತು ಮುಂದಿನ ತನಿಖೆಗೆ ಐಜಿಪಿ ಶ್ರೇಣಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಲೋಕಾಯುಕ್ತರು ಶಿಫಾರಸು ಮಾಡಿದ್ದರು. ಆದರೆ, ಹಿರಿಯ ಐಎಫ್‌ಎಸ್ ಅಧಿಕಾರಿ ದೀಪಕ್ ಶರ್ಮ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲು ಹಿಂದಿನ ಸರ್ಕಾರ ತೀರ್ಮಾನಿಸಿತ್ತು. ಈ ತೀರ್ಮಾನಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.ಸಂಪುಟ ಉಪ ಸಮಿತಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಲಾಗಿದೆ.     ಈ ವರ್ಗಕ್ಕೆ ಮೀಸಲಾದ 3,566 ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಪರಿಶಿಷ್ಟ ಜಾತಿಗೆ ಮೀಸಲಾದ 2,520 ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾದ 1,046 ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಈ ಕುರಿತು ಪರಿಶೀಲನೆ ನಡೆಸಿ ಉಪ ಸಮಿತಿ ಸೂಕ್ತ ಶಿಫಾರಸುಗಳನ್ನು ಮಾಡಲಿದೆ ಎಂದು ಕಾನೂನು ಸಚಿವರು ವಿವರಿಸಿದರು.   ಆಹಾರ ಭದ್ರತೆ ಕಾಯ್ದೆ ಜಾರಿ: ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆಯನ್ನು ನವೆಂಬರ್ 2ರಿಂದ ರಾಜ್ಯದಲ್ಲೂ ಜಾರಿಗೊಳಿಸುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಪಡಿತರ ಚೀಟಿಗಳನ್ನು ಕಡ್ಡಾಯವಾಗಿ ಮನೆಯೊಡತಿ ಹೆಸರಿಗೆ ವರ್ಗಾವಣೆ ಮಾಡುವುದು, ಆಹಾರ ಧಾನ್ಯ ವಿತರಿಸಲು ವಿಫಲವಾದರೆ ಪಡಿತರ ಚೀಟಿದಾರರಿಗೆ ಪರಿಹಾರ ವಿತರಿಸುವುದು ಸೇರಿದಂತೆ ಕಾಯ್ದೆಯಲ್ಲಿನ ಎಲ್ಲಾ ಅಂಶಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.ರೈತರಿಗೆ ಸಹಾಯಧನ: ಐದು ಅಶ್ವಶಕ್ತಿವರೆಗಿನ ಸೌರಶಕ್ತಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳುವ ರೈತರಿಗೆ ಶೇಕಡ 50ರಷ್ಟು ಸಹಾಯಧನ ನೀಡುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಬಾಗಲಕೋಟೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬರಲಿದೆ. ಕೃಷಿ, ತೋಟಗಾರಿಕೆ ಮತ್ತು ಪಶು ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯಗಳಿಗೂ ಈ ಯೋಜನೆ ವಿಸ್ತರಣೆ ಆಗಲಿದೆ. ಈ ಯೋಜನೆಗೆ ಆರಂಭದಲ್ಲಿ ಐದು ಕೋಟಿ ರೂಪಾಯಿ ಬಿಡುಗಡೆಗೆ ಒಪ್ಪಿಗೆ ಸೂಚಿಸಲಾಗಿದೆ.ಕೃಷಿ ಉತ್ಪನ್ನ ಮಾರುಕಟ್ಟೆಗಳ ವ್ಯಾಪ್ತಿಯಲ್ಲಿ ಉಗ್ರಾಣ ಮತ್ತು ಶೀತಲ ಸಂಗ್ರಹಾಗಾರಗಳನ್ನು ನಿರ್ಮಿಸುವ ರೈತರಿಗೆ ಸರ್ಕಾರದಿಂದ ಬಡ್ಡಿ ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಸಂಕಷ್ಟದಲ್ಲಿದ್ದ ದಾಳಿಂಬೆ ಬೆಳೆಗಾರರ ನೆರವಿಗೆ ಹಿಂದೆ ಜಾರಿಗೊಳಿಸಿದ್ದ ವಿಶೇಷ ಪ್ಯಾಕೇಜ್‌ನಲ್ಲಿ ರಾಜ್ಯ ಸರ್ಕಾರದ ಪಾಲು ಇನ್ನೂ ಬಿಡುಗಡೆ ಆಗಿರಲಿಲ್ಲ. 10,366 ಹೆಕ್ಟೇರ್ ವಿಸ್ತೀರ್ಣಕ್ಕೆ 13 ಕೋಟಿ ರೂಪಾಯಿ ಬಿಡುಗಡೆ ಮಾಡಲು ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಪ್ರದೇಶದ ದಾಳಿಂಬೆ ಬೆಳೆಗಾರರ ಸಾಲ ಮನ್ನಾ ಕುರಿತು ಕೇಂದ್ರ ಯೋಜನಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸುವುದಕ್ಕೂ ತೀರ್ಮಾನಿಸಲಾಗಿದೆ ಎಂದು ಸಚಿವರು ವಿವರಿಸಿದರು. ಭೂ ಕಂದಾಯ ಪಾವತಿಸುವಲ್ಲಿ ವಿಫಲರಾದ ಹಿಡುವಳಿದಾರರು ಬಾಕಿಯನ್ನು ಪಾವತಿಸಿ ಜಮೀನಿನ ಮೇಲಿನ ಹಕ್ಕನ್ನು ಮತ್ತೆ ಪಡೆಯಲು 2014ರ ಜೂನ್ 6ರವರೆಗೆ ಅವಕಾಶ ನೀಡಲು ಸಂಪುಟ ತೀರ್ಮಾನಿಸಿದೆ.ದರ ಚೌಕಾಸಿಗೆ ತೀರ್ಮಾನ

ಎಂಟನೇ ತರಗತಿಯ ಮಕ್ಕಳಿಗೆ ಬೈಸಿಕಲ್ ವಿತರಿಸುವ ಯೋಜನೆಗೆ ಬೈಸಿಕಲ್ ಪೂರೈಸುವ ಕಂಪೆನಿಗಳ ಜೊತೆ ಮತ್ತೊಮ್ಮೆ ದರ ಚೌಕಾಸಿ ನಡೆಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಹೊಣೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ನೀಡಲಾಗಿದೆ.

`ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ದರಕ್ಕೆ ಬೈಸಿಕಲ್ ಪೂರೈಸುವಂತೆ ಕಂಪೆನಿಗಳನ್ನು ಮನವೊಲಿಸುವ ಪ್ರಯತ್ನ ನಡೆಸಲಾಗುವುದು. ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಕಂಪೆನಿಗಳ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸುವರು' ಎಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry