ಬುಧವಾರ, ಅಕ್ಟೋಬರ್ 16, 2019
26 °C

ಅಕ್ರಮ ಗಣಿಗಾರಿಕೆ: ಶ್ರೀಲಕ್ಷ್ಮಿ ಜಾಮೀನು ರದ್ದು

Published:
Updated:

 

ಹೈದಾರಾಬಾದ್ (ಐಎಎನ್ಎಸ್ ): ಅಕ್ರಮ ಗಣಿಗಾರಿಕೆಯ ಲೋಕಾಯುಕ್ತ ವರದಿಯಲ್ಲಿ ಹೆಸರು ಪ್ರಸ್ತಾಪವಾದ ಕಾರಣ ರಾಜೀನಾಮೆ ಸಲ್ಲಿಸಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದ ಜನಾರ್ದನ ರೆಡ್ಡಿ ಮಾಲೀಕತ್ವದ ಕಂಪೆನಿಯ ಗಣಿಗಾರಿಕೆಗೆ ಪರವಾನಗಿ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿ, ಸೇವೆಯಿಂದ ಅಮಾನತು ಗೊಂಡು ಈಚೆಗೆ ಜಾಮೀನು ಪಡೆದಿದ್ದ  ಐಎಎಸ್ ಅಧಿಕಾರಿ ವೈ. ಶ್ರೀಲಕ್ಷ್ಮಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ನೀಡಿದ್ದ  ಜಾಮೀನನ್ನು ಇಲ್ಲಿನ ಆಂಧ್ರಪ್ರದೇಶದ ಹೈಕೋರ್ಟ್ ಸೋಮವಾರ ರದ್ದುಪಡಿಸಿದೆ.ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಸಿಬಿಐನ ವಿಶೇಷ ನ್ಯಾಯಾಲಯದ ಮುಂದೆ ಇದೆ ಶುಕ್ರವಾರದೊಳಗೆ (ಜನವರಿ 6) ಹಾಜರಾಗುವಂತೆಯೂ ಹೈಕೋರ್ಟ್ ನಿರ್ದೇಶಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯವು ಶ್ರೀಲಕ್ಷ್ಮಿ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಪುರಸ್ಕರಿಸಿ, ರೂ 25 ಸಾವಿರ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇಬ್ಬರು ವ್ಯಕ್ತಿಗಳ ಖಾತರಿ ಆಧಾರದಲ್ಲಿ ಅವರಿಗೆ ಡಿಸೆಂಬರ್ 2 ರಂದು ಜಾಮೀನು ನೀಡಿತ್ತು. ಸಿಬಿಐನ ವಿಶೇಷ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತನಿಖಾ ಸಂಸ್ಥೆ ಹೈಕೋರ್ಟಿನಲ್ಲಿ ಪ್ರಕರಣ ದಾಖಲಿಸಿತ್ತು.ಪ್ರಕರಣದ ತನಿಖೆ ಇನ್ನೂ ವಿಚಾರಣೆಯ ಹಂತದಲ್ಲಿದ್ದು, ಜಾಮೀನು ಪಡೆದಿರುವ ಐಎಎಸ್ ಅಧಿಕಾರಿ ವಿಚಾರಣೆಯಲ್ಲಿ ತಮ್ಮ ಪ್ರಭಾವ ಬೀರಬಹುದು, ಇದಲ್ಲದೇ ಇತರೆ ಆಪಾದಿತರೂ ಇನ್ನೂ ಜೈಲಿನಲ್ಲಿದ್ದಾರೆ ಎಂಬ ಸಿಬಿಐನ ವಾದವನ್ನು ಎತ್ತಿ ಹಿಡಿದ ಹೈಕೋರ್ಟ್, ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರ ಜಾಮೀನನ್ನು ರದ್ದುಪಡಿಸಿದೆ.

ಆಂಧ್ರ ಪ್ರದೇಶ ಮಿನಿರಲ್ ಡೆವಲಪ್ಮೆಂಟ್ ಕಾರ್ಪೋರೇಷನ್ ನ ಆಡಳಿತ ನಿರ್ದೇದೇಶಕ ವಿ.ಡಿ.ರಾಜಗೋಪಾಲ್ ಅವರ ಜಾಮೀನುನ್ನು ಸಹ ಹೈಕೋರ್ಟ್ ಕಳೆದ ತಿಂಗಳು ಡಿಸೆಂಬರ್ 16 ರಂದು ರದ್ದುಪಡಿಸಿತ್ತು. ರಾಜಗೋಪಾಲ ಅವರು,  ಅಕ್ರಮ ಗಣಿಗಾರಿಕೆಯ ಪ್ರಕರಣದ ಆರೋಪದ ಮೇಲೆ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಭಾವ ಬಿ.ವಿ.ಶ್ರೀನಿವಾಸ ರೆಡ್ಡಿ ಅವರೊಂದಿಗೆ ಇಲ್ಲಿನ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿದ್ದಾರೆ.

Post Comments (+)