ಸೋಮವಾರ, ಮೇ 17, 2021
26 °C

ಅಕ್ರಮ ಗಣಿ ಗುತ್ತಿಗೆ ಪ್ರಕರಣದಲ್ಲಿ ಜಾಮೀನು:ಕೋಡಾಗೆ ಇಲ್ಲ ಬಿಡುಗಡೆ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ (ಪಿಟಿಐ): ಅಕ್ರಮ ಹೂಡಿಕೆ ಮತ್ತು ಹವಾಲಾ ವ್ಯವಹಾರದಲ್ಲಿ ಭಾಗಿಯಾಗಿರುವ ಆರೋಪದ ಅಡಿ ಜೈಲಿನಲ್ಲಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ. ಆದರೆ ಬಿಡುಗಡೆ ಭಾಗ್ಯವಿಲ್ಲ.ಕಾರಣ ಅಕ್ರಮ ಗಣಿ ಗುತ್ತಿಗೆ ನೀಡಿಕೆ ಪ್ರಕರಣದಲ್ಲಿ ಮಾತ್ರ ಜಾಮೀನು ದೊರೆತಿದ್ದು, ಇತರ ಪ್ರಕರಣಗಳು ಬಾಕಿ ಇರುವುದರಿಂದ ಅವರ ಸೆರೆವಾಸ ಮುಂದುವರಿಯಲಿದೆ.2009ರ ನವೆಂಬರ್ 30ರಿಂದಲೂ ಕೋಡಾ ಜೈಲಿನಲ್ಲಿದ್ದು, ನ್ಯಾಯಮೂರ್ತಿ ಎಚ್. ಸಿ. ಮಿಶ್ರಾ ನೇತೃತ್ವದ ಏಕ ಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ.ಕೋಡಾ ಅಧಿಕಾರದ ಅವಧಿಯಲ್ಲಿ ಕೆಲವು ಕಂಪೆನಿಗಳಿಗೆ ಗಣಿ ಗುತ್ತಿಗೆ ನೀಡುವಲ್ಲಿ ಅಕ್ರಮ ಎಸಗಿದ್ದಾರೆ ಎಂದು ಸಿಬಿಐ ವಿಶೇಷ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.2006 ಮತ್ತು 2008ರವರೆಗೆ ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಕೋಡಾ ಅವರನ್ನು ಜಾರ್ಖಂಡ್ ಜಾಗೃತ ದಳದ ಅಧಿಕಾರಿಗಳು ಬಂಧಿಸಿದ್ದರು. ನಂತರ ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯದಿಂದ ಕೋಡಾಗೆ ಸೇರಿದ 69 ಸ್ಥಳಗಳಲ್ಲಿ ದಾಳಿ ನಡೆಸಲಾಗಿತ್ತು.ಅಕ್ರಮವಾಗಿ ಹಣ ಹೂಡಿಕೆ ಮತ್ತು ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೋಡಾ ಅವರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು 2,500 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ನಂತರ ಜಾರಿ ನಿರ್ದೇಶನಾಲಯದ ಸಹಯೋಗದೊಂದಿಗೆ ಪ್ರಕರಣ ಕೈಗೆತ್ತಿಕೊಂಡ ಸಿಬಿಐ, ಕೋಡಾ ವಿರುದ್ಧ ದೋಷಾರೋಪ ಸಿದ್ಧಪಡಿಸಿತ್ತು.ಪಕ್ಷೇತರ ಶಾಸಕರಾಗಿದ್ದ ಕೋಡಾ, ಜಾರ್ಖಂಡ್‌ನಲ್ಲಿ ಯುಪಿಎ ಸರ್ಕಾರದ ಸಾರಥ್ಯ ವಹಿಸಿದ್ದರು. ಅವರ ಬೆಂಬಲಿಗರಾದ ವಿನೋದ್ ಸಿನ್ಹಾ, ವಿಕಾಸ ಸಿನ್ಹಾ ಮತ್ತು ಇತರ ಮೂವರು ವಿವಿಧ ಪ್ರಕರಣಗಳಲ್ಲಿ  ಈಗ ಜೈಲಿನಲ್ಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.