ಅಕ್ರಮ ಗಣಿ ಗುರುವಾರ ವಿಚಾರಣೆ: ಸುಪ್ರೀಂಗೆ ಉತ್ತರ- ಸರ್ಕಾರ ತರಾತುರಿ

7

ಅಕ್ರಮ ಗಣಿ ಗುರುವಾರ ವಿಚಾರಣೆ: ಸುಪ್ರೀಂಗೆ ಉತ್ತರ- ಸರ್ಕಾರ ತರಾತುರಿ

Published:
Updated:
ಅಕ್ರಮ ಗಣಿ ಗುರುವಾರ ವಿಚಾರಣೆ: ಸುಪ್ರೀಂಗೆ ಉತ್ತರ- ಸರ್ಕಾರ ತರಾತುರಿ

ಬೆಂಗಳೂರು: ಬಳ್ಳಾರಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬುಧವಾರ (ಏ.20) ಉತ್ತರ ಸಲ್ಲಿಸಲಿದೆ. ಉತ್ತರದ ಕರಡು ಪ್ರತಿ ಸಿದ್ಧಪಡಿಸುವ ಕೆಲಸದಲ್ಲಿ ಸರ್ಕಾರ ಮಗ್ನವಾಗಿದೆ.ಈ ನಡುವೆ ತೀವ್ರ ಕುತೂಹಲ ಕೆರಳಿಸಿರುವ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೆಗೆದುಕೊಳ್ಳಬಹುದಾದ ನಿಲುವಿನ ಬಗ್ಗೆ ರಾಜ್ಯ ಸರ್ಕಾರಕ್ಕೆ ನಡುಕ ಆರಂಭವಾಗಿದೆ.

ಸಿಇಸಿ ಸಲ್ಲಿಸಿರುವ ವರದಿ ಕುರಿತು ಗುರುವಾರ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಬುಧವಾರವೇ ಸರ್ಕಾರ ನ್ಯಾಯಾಲಯಕ್ಕೆ ಉತ್ತರ ಸಲ್ಲಿಸಬೇಕಿದೆ. ಈ ಸಂಬಂಧ ಶನಿವಾರ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಭಾನುವಾರವೂ ಮತ್ತೊಂದು ಸುತ್ತಿನ ಸಭೆ ನಡೆಸಿದರು. ಅಡ್ವೊಕೇಟ್ ಜನರಲ್ ಅಶೋಕ ಹಾರ್ನಹಳ್ಳಿ, ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.ಅಕ್ರಮ ಗಣಿಗಾರಿಕೆ ಪ್ರಶ್ನಿಸಿ ಧಾರವಾಡದ ಸಮಾಜ ಪರಿವರ್ತನ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ವಿಚಾರಣೆಯ ಭಾಗವಾಗಿ ಬಳ್ಳಾರಿ ಜಿಲ್ಲೆಯ ಗಣಿಗಾರಿಕೆ ಪ್ರದೇಶಕ್ಕೆ ಭೇಟಿನೀಡಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್ ಸಿಇಸಿಗೆ ಆದೇಶಿಸಿತ್ತು. ಈ ಸಂಬಂಧ ಶುಕ್ರವಾರ ಮಧ್ಯಂತರ ವರದಿ ಸಲ್ಲಿಸಿರುವ ಸಮಿತಿ, ಅಕ್ರಮ ಗಣಿಗಾರಿಕೆ ನಡೆಸಿದವರಿಗಿಂತಲೂ ಹೆಚ್ಚಾಗಿ ಅಕ್ರಮವನ್ನು ಪೋಷಿಸಿದ ಆರೋಪದ ಮೇಲೆ ರಾಜ್ಯ ಸರ್ಕಾರವನ್ನು ಪ್ರಮುಖ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಬಳ್ಳಾರಿಯ ಜಿಲ್ಲಾಡಳಿತದಿಂದ ಮುಖ್ಯಮಂತ್ರಿಯವರೆಗೆ ಸರ್ಕಾರದ ವಿವಿಧ ಹಂತಗಳಲ್ಲಿ ಇರುವವರ ಕಾರ್ಯವೈಖರಿಯ ಬಗ್ಗೆ ಸಿಇಸಿ ಅಸಮಾಧಾನ ವ್ಯಕ್ತಪಡಿಸಿದ್ದು, ಈ ವರದಿ ರಾಜ್ಯ ಸರ್ಕಾರದ ಪಾಲಿಗೆ ನುಂಗಲಾರದ ತುತ್ತಾಗಿದೆ.ದಿನವಿಡೀ ಕೆಲಸ:ಭಾನುವಾರ ಬೆಳಿಗ್ಗೆ 8 ಗಂಟೆಗೆ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಿಇಸಿ ವರದಿ ಸಂಬಂಧ ಉನ್ನತಮಟ್ಟದ ಸಭೆ ನಡೆಯಿತು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ, ಸುಪ್ರೀಂಕೋರ್ಟ್‌ಗೆ ಸಮರ್ಪಕ ಉತ್ತರ ಸಲ್ಲಿಸುವ ಬಗ್ಗೆ ಚರ್ಚೆ ನಡೆಯಿತು.ಸಭೆ ಬಳಿಕ ತಮ್ಮ ಕಚೇರಿಗಳಿಗೆ ದೌಡಾಯಿಸಿದ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ ಇಲಾಖೆ ಅಧಿಕಾರಿಗಳು ಸಂಜೆಯವರೆಗೂ ಸಿಇಸಿ ವರದಿಗೆ ಉತ್ತರ ಸಿದ್ಧಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದರು.   

ಉತ್ತರದ ಕರಡು ಪ್ರತಿ ಸಿದ್ಧಪಡಿಸುವ ಕೆಲಸ ಭರದಿಂದ ಸಾಗಿದ್ದು, ಸೋಮವಾರ ಅದನ್ನು ಪರಿಶೀಲನೆಗಾಗಿ ಅಡ್ವೊಕೇಟ್ ಜನರಲ್‌ಗೆ ರವಾನಿಸಲು ನಿರ್ಧರಿಸಿದ್ದಾರೆ.

‘ನ್ಯಾಯಾಲಯಕ್ಕೆ ಸರ್ಕಾರ ಸಲ್ಲಿಸುವ ಉತ್ತರದ ಕರಡು ಪ್ರತಿ ಸಿದ್ಧವಾಗುತ್ತಿದ್ದು, ಸೋಮವಾರ ಬೆಳಿಗ್ಗೆ ಅದನ್ನು ಎಜಿಯವರ ಪರಿಶೀಲನೆಗೆ ಕಳುಹಿಸಲಾಗುತ್ತದೆ. ಅವರು ಪರಿಶೀಲಿಸಿದ ಬಳಿಕ ಪ್ರಮಾಣ ಪತ್ರ ಸಿದ್ಧಪಡಿಸಿ ಮುಖ್ಯಮಂತ್ರಿಯವರ ಒಪ್ಪಿಗೆ ಪಡೆಯಲಾಗುವುದು. ಬುಧವಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಲಾಗುವುದು’ ಎಂದು ರಾಜ್ಯ ಸರ್ಕಾರದ  ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ಸರ್ಕಾರಕ್ಕೇ ನಡುಕ: ಈ ಪ್ರಕರಣದಲ್ಲಿ ನ್ಯಾಯಾಲಯ ತೆಗೆದುಕೊಳ್ಳಬಹುದಾದ ನಿಲುವಿನ ಬಗ್ಗೆ ಸರ್ಕಾರಕ್ಕೆ ಭಯ ಉಂಟಾಗಿದೆ. ಬಳ್ಳಾರಿಯಲ್ಲಿ ಕೆಲಸ ನಿರ್ವಹಿಸಿದ ಕಿರಿಯ ಅಧಿಕಾರಿಗಳಿಂದ ವಿಧಾನಸೌಧದಲ್ಲಿ ಕುಳಿತು ಅಧಿಕಾರ ನಡೆಸುವವರ ವಿರುದ್ಧವೂ ಸಿಇಸಿ ಬೆರಳು ತೋರಿದೆ. ಹೀಗಾಗಿ ನ್ಯಾಯಾಲಯ ಯಾರ ವಿರುದ್ಧ, ಎಂತಹ ಕ್ರಮಕ್ಕೆ ಆದೇಶ ನೀಡುತ್ತದೆಯೋ ಎಂಬ ನಡುಕ ಸರ್ಕಾರದ ಉನ್ನತ ಸ್ಥಾನದಲ್ಲಿ ಇರುವವರನ್ನು ಆವರಿಸಿಕೊಂಡಿದೆ.ಅದಿರು ರಫ್ತು ನಿಷೇಧ, ಅಕ್ರಮ ಅದಿರು ಸಾಗಣೆ ಮತ್ತು ಸಂಗ್ರಹ ನಿಯಂತ್ರಿಸಲು ಇತ್ತೀಚೆಗೆ ಹೊಸ ನಿಯಮ ಜಾರಿಗೊಳಿಸಿರುವುದು, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರಿಗೆ ಒಪ್ಪಿಸಿರುವುದೂ ಸೇರಿದಂತೆ ಕೆಲ ವಿಷಯಗಳ ಬಗ್ಗೆ ಪ್ರಮಾಣ ಪತ್ರದಲ್ಲಿ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಲು ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.ಒಂದು ಹಂತದಲ್ಲಿ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸುವ ಮುನ್ನವೇ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನ ಅಸ್ತ್ರ ಝಳಪಿಸಲು ಸರ್ಕಾರ ಮುಂದಾಗಿತ್ತು. ಆದರೆ ಅಂತಹ ಹೆಜ್ಜೆ ಇಟ್ಟಲ್ಲಿ ನ್ಯಾಯಾಲಯದಲ್ಲಿ ಇಕ್ಕಟ್ಟಿಗೆ ಸಿಲುಕಬಹುದು ಎಂಬ ಭಯ ಸರ್ಕಾರಕ್ಕೆ ಇದೆ. ಈ ಹಿನ್ನೆಲೆಯಲ್ಲಿ ಗುರುವಾರ ನ್ಯಾಯಾಲಯದ ವಿಚಾರಣೆ ಪೂರ್ಣಗೊಂಡ ಬಳಿಕ, ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಜರುಗಿಸುವ ಸಂಬಂಧ ಸೂಕ್ತ ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ.ಬಿಕ್ಕಟ್ಟು ತಂದ ವಿಷಯಗಳು: ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಕುರಿತು 2008ರ ಡಿಸೆಂಬರ್‌ನಲ್ಲಿ ಲೋಕಾಯುಕ್ತರು ಮಧ್ಯಂತರ ವರದಿ ಸಲ್ಲಿಸಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಿಇಸಿ ನೇರವಾಗಿ ಆರೋಪ ಹೊರಿಸಿದೆ. ಈ ವಿಷಯದಲ್ಲಿ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಸರ್ಕಾರ ಇದೆ. ಕೆಲ ಗಣಿ ಕಂಪೆನಿಗಳ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಬಿಟ್ಟರೆ ಬೇರೆ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ. ಒಮ್ಮೆ ಸ್ಥಗಿತಗೊಂಡಿದ್ದ ಗಣಿಗಾರಿಕೆ ಪುನರಾರಂಭಕ್ಕೆ ಪೂರಕವಾಗಿ ಹೈಕೋರ್ಟ್‌ನಲ್ಲಿ ಸರ್ಕಾರ ಹೇಳಿಕೆ ನೀಡಿತು ಎಂಬ ಆರೋಪವೂ ವರದಿಯಲ್ಲಿದೆ. ಈ ವಿಷಯಗಳ ಬಗ್ಗೆಯೂ ಸರ್ಕಾರ ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರದಲ್ಲಿ ಉತ್ತರಿಸಬೇಕಿದೆ.ಸಂಡೂರಿನ ರಾಮಗಢ ಮತ್ತು ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ 15 ಗಣಿ ಗುತ್ತಿಗೆಗಳನ್ನು ನೀಡಿರುವುದು, ರಾಮಗಢದ ಭರತರಾಯನ ಹರವು (ಬಿಆರ್‌ಎಚ್) ಪ್ರದೇಶದ ಗಣಿ ಗುತ್ತಿಗೆ ಸಂಖ್ಯೆ 2010ರ ಗಡಿಯೊಳಗೆ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಿರುವುದು, ಬಳ್ಳಾರಿ, ಸಂಡೂರು ಮತ್ತು ಹೊಸಪೇಟೆ ಗಣಿ ವಲಯದಲ್ಲಿ 1,081.40 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದು, ಲಕ್ಷ್ಮೀನಾರಾಯಣ ಮೈನಿಂಗ್ ಕಂಪೆನಿಗೆ ಅಕ್ರಮ ಗಣಿಗಾರಿಕೆಗೆ ಅವಕಾಶ ಕಲ್ಪಿಸಿರುವುದು ಮತ್ತಿತರ ಆರೋಪಗಳಿಗೂ ಸರ್ಕಾರ ಉತ್ತರ ನೀಡಬೇಕಿದೆ.2003-2009ರ ಅವಧಿಯಲ್ಲಿ 3.04 ಕೋಟಿ ಟನ್ ಅದಿರು ಅಕ್ರಮವಾಗಿ ರಫ್ತಾಗಿರುವುದು, ಗಣಿ ಗುತ್ತಿಗೆಗಳನ್ನು ಕಾನೂನಿಗೆ ವಿರುದ್ಧವಾಗಿ ಉಪ ಗುತ್ತಿಗೆಗೆ (ರೇಸಿಂಗ್ ಕಾಂಟ್ರಾಕ್ಟ್) ನೀಡಿದವರ ವಿರುದ್ಧ ಕ್ರಮ ಜರುಗಿಸದಿರುವುದು, ನೋಂದಣಿಯಾಗದ ಕಂಪೆನಿಗಳಿಗೂ ಅದಿರು ವ್ಯಾಪಾರಕ್ಕೆ ಅವಕಾಶ ನೀಡಿರುವುದು, ಬೇಲೆಕೇರಿ ಬಂದರಿನಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರು ನಾಪತ್ತೆಯಾಗಿರುವುದು, ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಹಾದುಹೋಗಿರುವ ಕರ್ನಾಟಕ- ಆಂಧ್ರಪ್ರದೇಶ ಅಂತರರಾಜ್ಯ ಗಡಿಯಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆಯೂ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಬೇಕಿದೆ.

ತಾನು ಪರಿಶೀಲನೆ ನಡೆಸಿರುವ ಗಣಿ ಪ್ರದೇಶಗಳಲ್ಲಿ ಬಳ್ಳಾರಿಯ ಸ್ಥಿತಿ ಅತ್ಯಂತ ಭೀಕರವಾಗಿದೆ ಎಂದು ಸಿಇಸಿ ವರದಿಯಲ್ಲಿ ಹೇಳಿದೆ.2009ರಲ್ಲಿ ಮುಖ್ಯಮಂತ್ರಿ ಮತ್ತು ಬಳ್ಳಾರಿ ರೆಡ್ಡಿ ಸಹೋದರರ ನಡುವಣ ಭಿನ್ನಮತದ ಸಂದರ್ಭದಲ್ಲಿ ನಡೆದ ಅಧಿಕಾರಿಗಳ ವರ್ಗಾವಣೆ ಮತ್ತು ಪುನರ್‌ನಿಯೋಜನೆ, ಬಳ್ಳಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಹುತೇಕ ಅಧಿಕಾರಿಗಳು ಅಕ್ರಮ ಗಣಿಗಾರಿಕೆ ಜೊತೆ ಕೈಜೋಡಿಸಿದ್ದರೆಂಬ ವಿಷಯವೂ ಸುಪ್ರೀಂಕೋರ್ಟ್ ವಿಚಾರಣೆ ವ್ಯಾಪ್ತಿಯಲ್ಲಿದೆ.

 

 ‘ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿಲ್ಲ’

ಮೈಸೂರು:
  ‘ನಾನು ಮುಖ್ಯಮಂತ್ರಿ ಆದ ದಿನದಿಂದ ಈವರೆಗೆ ಯಾವುದೇ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡಿಲ್ಲ. ರಾಜ್ಯದ ಸಂಪತ್ತನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಇಲ್ಲಿಗೆ ಸಮೀಪದ ನಂಜನಗೂಡು ತಾಲ್ಲೂಕು ಸುತ್ತೂರಿನಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಮಹಾಸಭಾದ 22ನೇ ಮಹಾ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದಿನ ಸರ್ಕಾರಗಳು ನೀಡಿದ ಅನುಮತಿಯಿಂದ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗಳು ನಡೆದಿವೆ. ಸುಪ್ರೀಂಕೋರ್ಟ್ ತೀರ್ಪು ಬಂದ ನಂತರ ಎಲ್ಲವೂ ಬಹಿರಂಗವಾಗಲಿದೆ ಎಂದು ಅವರು ಹೇಳಿದರು.

ಸಿಇಸಿ ವರದಿ ಅಂತಿಮ ಅಲ್ಲ: ಶ್ರೀರಾಮುಲು

ಗದಗ:
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ನೀಡಿರುವ ವರದಿಯೇ ಅಂತಿಮ ತೀರ್ಮಾನವಲ್ಲ ಎಂದು ಸಚಿವ ಬಿ. ಶ್ರೀರಾಮುಲು ತಿಳಿಸಿದರು.ಸಿಇಸಿ ವರದಿ ಕುರಿತು ವಿರೋಧ ಪಕ್ಷಗಳು ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿವೆ. ವರದಿಯನ್ನು ಆಧಾರವಾಗಿ ಇಟ್ಟುಕೊಂಡು ಸುಪ್ರೀಂ ಕೋರ್ಟ್ ಯಾವ ತೀರ್ಮಾನ ತೆಗೆದುಕೊಂಡರು ಅದನ್ನು ಸ್ವಾಗತಿಸುವುದಾಗಿ ಅವರು ಭಾನುವಾರ ಮಾಧ್ಯಮದವರಿಗೆ ತಿಳಿಸಿದರು.‘ಸಿಇಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಬಳ್ಳಾರಿಯಲ್ಲಿಯೇ ಅತ್ಯಂತ ಹೆಚ್ಚಿನ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ ಎನ್ನುವುದು ಕೇವಲ ವದಂತಿಯಾಗಿದೆ ಅಷ್ಟೆ. ವರದಿಯನ್ನು ತಾವು  ಗಮನಿಸಿದ್ದು, ನೀವುಗಳು ಸಹ (ಮಾಧ್ಯಮದವರು) ಪರಿಶೀಲಿಸಿದರೆ ಸತ್ಯ ಏನು ಎಂದು ತಿಳಿಯುತ್ತದೆ’ ಎಂದರು.‘ಸಿಇಸಿ ವರದಿ ಕುರಿತು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದಿಂದ ವಿವರಣೆ ಕೇಳಿರುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗಾಗಲೇ ಹೇಳಿಕೆ ನೀಡಿದ್ದಾರೆ. ಅದರ ಬಗ್ಗೆ ತಾವೇನು ಮಾತನಾಡುವುದಿಲ್ಲ’ ಎಂದು ಶ್ರೀರಾಮುಲು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry