ಅಕ್ರಮ ಗುಡಿಸಲು ತೆರವು; ನಿವಾಸಿಗಳ ಪ್ರತಿಭಟನೆ

7

ಅಕ್ರಮ ಗುಡಿಸಲು ತೆರವು; ನಿವಾಸಿಗಳ ಪ್ರತಿಭಟನೆ

Published:
Updated:

 


ಗೌರಿಬಿದನೂರು: ತಾಲ್ಲೂಕಿನ ಕಾದಲವೇಣಿ ಗ್ರಾಮದ ಹೊರವಲಯದಲ್ಲಿ ಸಿಪಿಎಂ ಪಕ್ಷದ ಮುಖಂಡರ ಬೆಂಬಲದಿಂದ ಸರ್ಕಾರಿ ಜಮೀನಿನಲ್ಲಿ ನಿವೇಶನ ರಹಿತರು ಹಾಕಿಕೊಂಡಿದ್ದ ಗುಡಿಸಿಲುಗಳನ್ನು ಗುರುವಾರ ತಹಶೀಲ್ದಾರ್ ಆರ್.ನಾಗರಾಜಶೆಟ್ಟಿ ಅವರು ಪೊಲೀಸ್ ಸಿಬ್ಬಂದಿ ನೆರವು ಪಡೆದು ತೆರವುಗೊಳಿಸಿದರು.    ಸರ್ಕಾರಿ ಜಮೀನಿನಲ್ಲಿ ಗುಡಿಸಲು ಹಾಕಿರುವುದು ಅಕ್ರಮ. ನಿವೇಶನಗಳನ್ನು ಗ್ರಾಮ ಪಂಚಾಯಿತಿ ಇಲ್ಲವೇ ತಾಲ್ಲೂಕು ಪಂಚಾಯಿತಿ ಮೂಲಕ ಕಾನೂನು ಪ್ರಕಾರ ಪಡೆಯಬೇಕು. ಸರ್ಕಾರಿ ಜಮೀನಿನಲ್ಲಿ ಅತಿಕ್ರಮಣ ಮಾಡಿರುವುದು ಕಾನೂನು ಬಾಹಿರ. ದಿಢೀರನೆ ಗುಡಿಸಲು ನಿರ್ಮಾಣಮಾಡಿರುವುದು ಸರಿಯಲ್ಲ ಎಂದು ತಹಶೀಲ್ದಾರ್ ಹೇಳಿದರು. ಗುಡಿಸಲುಗಳಿಂದ ಎಲ್ಲರು ಹೊರಬರುವಂತೆ ಪೊಲೀಸರು ಆದೇಶ ನೀಡಿದರು. ಗುಡಿಸಲುಗಳಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆಯರು ಆಹಾರ ಪದಾರ್ಥಗಳಾದ ಅಕ್ಕಿ, ಪಾತ್ರೆ, ಬಟ್ಟೆ ಇನ್ನಿತರೆ  ವಸ್ತುಗಳನ್ನು ಅಲ್ಲಿಯೇ ಬಿಟ್ಟು ಹೊರ ನಡೆದರು.  ಗುಡಿಸಲುಗಳನ್ನು ನಿರ್ಮಾಣಮಾಡಿ ಕೊಂಡಿದ್ದ ನೂರಾರು ಮಹಿಳೆಯರು ಅಲ್ಲಿಂದ ನಡೆದುಕೊಂಡು ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಧರಣಿ ನಡೆಸಿದರು. ತಹಶೀಲ್ದಾರ್ ವಿರುದ್ಧ ಘೋಷಣೆ ಕೂಗಿ, ನಮ್ಮ ಬದುಕನ್ನು ಕಸಿದುಕೊಂಡಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದರು. ಪ್ರಾಂತ ರೈತ ಸಂಘದ ಜೊತೆಗೆ ಸಿಪಿಎಂ ಹಾಗೂ ಸಿಐಟಿಯು ಸಂಘಟನೆಗಳು ಒಂದಾಗಿ ಕಾದಲವೇಣಿ ಗ್ರಾಮದ ನಿವೇಶನ ರಹಿತರಿಗೆ ನಿವೇಶನಗಳು ದೊರೆಯುವವರಗೂ ತಾಲ್ಲೂಕು ಕಚೇರಿಯಿಂದ ಕದಲುವುದಿಲ್ಲ ಎಂದು ಸಿಪಿಎಂ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಗಂಗಪ್ಪ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ತಾಲ್ಲೂಕು ಕೃಷಿ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಸಿ.ಸಿ.ಅಶ್ವತ್ಥಪ್ಪ, ಪ್ರಾಂತ ರೈತ ಸಂಘ ಅಧ್ಯಕ್ಷ ರವಿಚಂದ್ರರೆಡ್ಡಿ, ನಾಗರತ್ನಮ್ಮ, ಸಿದ್ದಗಂಗಮ್ಮ, ಮಂಜಮ್ಮ ಮತ್ತಿತರರು ಪಾಲ್ಗೊಂಡಿದ್ದರು.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry