ಬುಧವಾರ, ಜನವರಿ 29, 2020
27 °C
ಮಾದಕ ವಸ್ತು ಎಗ್ಗಿಲ್ಲದೇ ಮಾರಾಟ– ಜಿಲ್ಲಾ ಬಿಜೆಪಿ ದೂರು

ಅಕ್ರಮ ಚಟುವಟಿಕೆ: ಪೊಲೀಸರ ನಿರ್ಲಕ್ಷ್ಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ನಗರದಲ್ಲಿ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ ಪೊಲೀಸ್ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಅವರ ನಿರ್ಲಕ್ಷ್ಯದಿಂದ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಧ್ಯಮ ಪ್ರಮುಖ ಎನ್‌.ರಾಜಶೇಖರ್‌ ಗಂಭೀರ ಆರೋಪ ಮಾಡಿದರು.ನಗರದ ಹೃದಯ ಭಾಗದಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಹಾಗೂ ಹಲ್ಲೆ ನಡೆದಿರುವುದು ಖಂಡನೀಯ. ಇದಕ್ಕೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.ದೆಹಲಿ, ಮಣಿಪಾಲದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳು ಜನಮಾನಸದಲ್ಲಿ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಅಂಥ ಘಟನೆ ನಡೆದಿದೆ. ಇಂಥ ದುರ್ಘಟನೆಗಳನ್ನು ಪಕ್ಷ ಖಂಡಿಸುತ್ತದೆ. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯ ಬೇಜವಾಬ್ದಾರಿ ಕಾಣಿಸುತ್ತಿದೆ. ಹೊರವಲಯದ ಬಡಾವಣೆಗಳಲ್ಲಿ ಕಳವು ಪ್ರಕರಣಗಳು ಸಾಮಾನ್ಯವಾಗಿ ಬಿಟ್ಟಿವೆ ಎಂದು ಹೇಳಿದರು.ಪ್ರತಿಷ್ಠಿತ ಕಾಲೇಜುಗಳ ಸುತ್ತಮುತ್ತ, ಕೆಲ ಬಡಾವಣೆಗಳಲ್ಲಿ ಮಾದಕ ವಸ್ತುಗಳ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಹಾಡಹಗಲೇ ರಾಜಾರೋಷವಾಗಿ ಮಟ್ಕಾ, ಇಸ್ಪೀಟ್‌ ಜೂಜಾಟ ನಡೆಯುವುದು ಕಂಡುಬರುತ್ತಿದೆ. ಹಿರಿಯ ಅಧಿಕಾರಿಗಳು ಇದು ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದು ಆಪಾದಿಸಿದರು.‘ಜಿಲ್ಲಾಡಳಿತ ಸಮಾಜ ಕಡೆಗಣಿಸಿ, ರಾಜಕೀಯ ಪಟ್ಟುಗಳ ಆಟ ಆಡುತ್ತಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಇತರ ಅಧಿಕಾರಿಗಳು ಇಲಾಖೆಯಲ್ಲಿ ಇರಲು ಲಾಯಕ್ಕಿಲ್ಲ. ಕಾನೂನು ಸುವ್ಯವಸ್ಥೆ ನಿರ್ವಹಿಸುವ ಧೈರ್ಯವಿಲ್ಲ. ಹೀಗಾಗಿ, ಅವರು ಲಾಟರಿ ನಿಷೇಧ ದಳಕ್ಕೋ, ಅಬಕಾರಿ ಇಲಾಖೆಗೋ ಹೋಗಲಿ’ ಎಂದು ಟೀಕಿಸಿದರು.ನಗರದಲ್ಲಿ ಮಹಿಳೆಯರು, ಯುವತಿಯರು ಹಾಗೂ ಎಲ್ಲರೂ ನಿರ್ಭಿತಿಯಿಂದ ಓಡಾಡುವಂಥ ಪರಿಸ್ಥಿತಿ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ, ಬಿಜೆಪಿ ತೀವ್ರ ಹೋರಾಟ ನಡೆಸಲಿದೆ ಎಂದರು.ಯುವ ಮೋರ್ಚಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಮಹೇಶ್‌, ನಾಗರತ್ನಾ ಆರ್‌.ನಾಯಕ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)