ಶುಕ್ರವಾರ, ಜೂನ್ 25, 2021
21 °C

ಅಕ್ರಮ ಡಿನೋಟಿಫಿಕೇಷನ್ ಹಗರಣ: ಡಿಕೆಶಿ ವಿರುದ್ಧ ಇನ್ನೊಂದು ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಅಕ್ರಮವಾಗಿ ಕೈಬಿಟ್ಟಿರುವ (ಡಿನೋಟಿಫಿಕೇಷನ್) ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಇನ್ನೊಂದು ದೂರು ದಾಖಲಾಗಿದೆ. ಕೃಷ್ಣರಾಜಪುರ ತಾಲ್ಲೂಕಿನ ಬೆನ್ನಿಗಾನಹಳ್ಳಿಯ ಸರ್ವೆ ನಂಬರ್ 20ರಲ್ಲಿ 4.2 ಎಕರೆ ಭೂಮಿಯನ್ನು 2010ರ ಮೇ ತಿಂಗಳಲ್ಲಿ ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದ ಈ ಅಕ್ರಮದಲ್ಲಿ ಶಿವಕುಮಾರ್ ಅವರು ಲಾಭ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಭ್ರಷ್ಟಾಚಾರ ವಿರೋಧಿ ಮತ್ತು ಪರಿಸರ ವೇದಿಕೆಯ ಟಿ.ಜೆ. ಅಬ್ರಹಾಂ ಅವರು ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಶಿವ ಕುಮಾರ್‌ರ ವಿರುದ್ಧ ಸೋಮವಾರ ದೂರು ದಾಖಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾತನೂರಿನ ಕಬ್ಬಾಳೆಗೌಡ ಎನ್ನುವವರು ಶಿವಕುಮಾರ್ ವಿರುದ್ಧ ಬುಧವಾರ ದೂರು ದಾಖಲಿಸಿದರು.   ಕಬ್ಬಾಳೆಗೌಡ ಅವರು ತಮ್ಮ ದೂರಿನಲ್ಲಿ, ಶಿವಕುಮಾರ್, ಯಡಿಯೂರಪ್ಪ ಅವರ ಜೊತೆ ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಪುತ್ರ ಮತ್ತಿತರರ ವಿರುದ್ಧ ಆರೋಪ ಹೊರಿಸಿದ್ದಾರೆ.ಪ್ರಮಾಣಪತ್ರ ಸಲ್ಲಿಕೆ: ಇದೇ ವೇಳೆ ಸೋಮವಾರ ತಾವು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿದ ಅಬ್ರಹಾಂ ಅವರು,  `ಯಡಿಯೂರಪ್ಪ ಅವರು ಬೆನ್ನಿಗಾನ   ಹಳ್ಳಿಯಲ್ಲಿ 4.2 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ್ದಾರೆ.ಬೆಂಗಳೂರು ನಗರ ಜಿಲ್ಲೆಯ ಹಿಂದಿನ ವಿಶೇಷ ಅಧಿಕಾರಿ ಡಾ. ರಾಮೇಗೌಡ ಅವರು ಭೂ ಪರಿವರ್ತನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮೇಗೌಡರನ್ನೂ ಆರೋಪಿಯಾಗಿ ಪರಿಗಣಿಸ   ಬೇಕು~ ಎಂದು ಮನವಿ ಮಾಡಿದರು.ಅಲ್ಲದೆ, ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರಿ ಸಂಘ, ಎನ್‌ಟಿಐ ಗೃಹ ನಿರ್ಮಾಣ ಸಹಕಾರಿ ಸಂಘ, ಜಯನಗರ, ಶಾಂತಿನಗರ ಮತ್ತು ಭವಾನಿನಗರ ಗೃಹ ನಿರ್ಮಾಣ ಸಹಕಾರಿ ಸಂಘಗಳಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ. ಈ ಅವ್ಯವಹಾರಗಳಲ್ಲಿ ಶಿವಕುಮಾರ್ ಅವರದೂ ಪಾಲಿದೆ. ಈ     ಬಗ್ಗೆಯೂ ತನಿಖೆಗೆ ಆದೇಶಿಸಬೇಕೆಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.ಅಬ್ರಹಾಂ ಅವರ ಮನವಿ ಮತ್ತು ಕಬ್ಬಾಳೆಗೌಡ ಅವರ ದೂರನ್ನು ಸ್ವೀಕರಿಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ. ಸುಧೀಂದ್ರ ರಾವ್ ಅವರು, ಈ ಕುರಿತು ತನಿಖೆ ನಡೆಸಿ ಏಪ್ರಿಲ್ 17ರೊಳಗೆ ವರದಿ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.