ಗುರುವಾರ , ನವೆಂಬರ್ 21, 2019
24 °C

ಅಕ್ರಮ ತಡೆಗೆ ಸಿಸಿಟಿವಿ: ವೀಕ್ಷಕರ ಸಲಹೆ

Published:
Updated:

ವಿಜಾಪುರ: `ಹಣ ಸಾಗಾಣಿಕೆ, ಮದ್ಯ ಸರಬರಾಜು ಸೇರಿದಂತೆ ಚುನಾವಣಾ ಅಕ್ರಮಗಳ ಬಗ್ಗೆ ತೀವ್ರ ನಿಗಾ ವಹಿಸಬೇಕು. ಸಾಧ್ಯವಾದರೆ ಗಡಿ ಭಾಗಗಳಲ್ಲಿ ಸಿಸಿ ಕ್ಯಾವೆುರಾಗಳನ್ನು ಅಳವಡಿಸಬೇಕು' ಎಂದು ಜಿಲ್ಲೆಯ ವಿವಿಧ ಕ್ಷೇತ್ರಗಳ ಚುನಾವಣಾ ವೀಕ್ಷಕರು ಜಿಲ್ಲಾ ಆಡಳಿತಕ್ಕೆ ಸಲಹೆ ನೀಡಿದರು.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಸಿದ್ಧತೆ ಕುರಿತಂತೆ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ನಡೆದ ಸಭೆಯಲ್ಲಿ ಅವರು ಈ ಸಲಹೆ ನೀಡಿದರು.ಮತದಾನ ಹೆಚ್ಚಳಕ್ಕೆ ವಿಶೇಷ ಆದ್ಯತೆ ನೀಡಬೇಕು. ವಿಶೇಷ ಮತದಾರರು ಇರುವ ಪ್ರದೇಶಗಳಲ್ಲಿ ಮುಂಜಾಗ್ರತೆ ವಹಿಸಿ ನಿರ್ಭಯವಾಗಿ ಮತದಾನ ಮಾಡುವಂತೆ ಮಾಡಬೇಕು. ಮತಗಟ್ಟೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದ ಅವರು, ಜಿಲ್ಲೆಯಲ್ಲಿ ನಡೆದ ಚುನಾವಣಾ ಸಿದ್ಧತೆ ಕುರಿತು ತೃಪ್ತಿ ವ್ಯಕ್ತಪಡಿಸಿದರು.ವಿಧಾನಸಭಾ ಕ್ಷೇತ್ರಗಳ ಭೌಗೋಳಿಕ ಪರಿಸರ, ಆರ್ಥಿಕ-ಸಾಮಾಜಿಕ ಸ್ಥಿತಿಗತಿ, ಚುನಾವಣಾ ಸಿದ್ಧತೆ, ಮುಕ್ತ ಪಾರದರ್ಶಕ ಚುನಾವಣೆ ನಡೆಸಲು ಕೈಗೊಂಡಿರುವ ಕ್ರಮಗಳ ಕುರಿತು ಜಿಲ್ಲಾ ಚುನಾವಣಾಧಿಕಾರಿ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಮಾಹಿತಿ ನೀಡಿದರು.ಅಬಕಾರಿ ಅಕ್ರಮಗಳಿಗೆ ಅವಕಾಶವಿಲ್ಲದಂತೆ ಗಡಿ ಭಾಗ ಸೇರಿದಂತೆ ಜಿಲ್ಲೆಯ 18 ಕಡೆ ಚೆಕ್‌ಪೋಸ್ಟ್ ಆರಂಭಿಸಲಾಗಿದೆ. ಮತಗಟ್ಟೆ ವಾರು ಸೆಕ್ಟರ್ ಆಫೀಸರ್, ಚುನಾವಣಾ ಸ್ಥಿರ ಕಣ್ಗಾವಲು ತಂಡ, ಫ್ಲಾಯಿಂಗ್ ಸ್ಕ್ವಾಡ್, ವಿಡಿಯೊ ವಿವಿಂಗ್ ಟೀಂ, ಎಂಸಿಎಂಸಿ ತಂಡ ರಚಿಸಿ ಚುನಾವಣಾ ಅಕ್ರಮ ತಡೆಗೆ ತೀವ್ರ ನಿಗಾ ವಹಿಸಲಾಗಿದೆ ಎಂದರು.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 14,83,329 ಮತದಾರರಿದ್ದು, ಶೇ 97.80 ರಷ್ಟು ಮತದಾರರ ಗುರುತಿನ ಚೀಟಿ ವಿತರಿಸಲಾಗಿದೆಎಸ್ಪಿ ಅಜಯ್ ಹಿಲೋರಿ ಮಾತನಾಡಿ, `ಮಹಾರಾಷ್ಟ್ರದ ಗಡಿಯ ಇಂಡಿ ಮತ್ತು ಸಿಂದಗಿ ಭಾಗದಲ್ಲಿ ಹೆಚ್ಚು ನಿಗಾ ವಹಿಸಲಾಗಿದ್ದು,  ಬಿಗಿ ಕಾವಲುಗಳನ್ನು ಹಾಕಲಾಗಿದೆ. ತಪಾಸಣಾ ತಂಡಗಳನ್ನು ರಚಿಸಿ ತೀವ್ರ ನಿಗಾ ವಹಿಸಲಾಗಿದೆ' ಎಂದರು.ವಿಜಾಪುರ ವಿಧಾನಸಭಾ ಕ್ಷೇತ್ರದ ನಿರ್ವಾಚಣಾಧಿಕಾರಿ ಡಾ.ಬೂದೆಪ್ಪ ವಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದ ವಿವರ, ಚುನಾವಣಾ ಸಿದ್ಧತೆ ಕುರಿತಂತೆ ಮಾಹಿತಿ ಒದಗಿಸಿದರು.ಕೇಂದ್ರ ಚುನಾವಣಾ ವೀಕ್ಷಕರಾದ ವಿಜಾಪುರ ಕ್ಷೇತ್ರದ ರಾಮಕೃಷ್ಣನ್, ನಾಗಠಾಣ ಕ್ಷೇತ್ರದ ಶಾಹಿದ್ ಇನಾಯತುಲ್ಲಾ, ಸಿಂದಗಿ ಕ್ಷೇತ್ರದ ಕೆ.ಡಿ. ಕುಂಜಮ, ದೇವರ ಹಿಪ್ಪರಗಿ ಕ್ಷೇತ್ರದ ನಾಯೋಲ್ ಥಾಮಸ್, ಬಸವನ ಬಾಗೇವಾಡಿ ಕ್ಷೇತ್ರದ ಉಪೇಂದ್ರನಾಥ ಬೋರಾ, ಬಬಲೇಶ್ವರ ಕ್ಷೇತ್ರದ ರಾಜೀವಕುಮಾರ, ಇಂಡಿ ಕ್ಷೇತ್ರದ  ಅನ್ಬಲಗಂ ಪಿ., ಎಂಟು ವಿಧಾನಸಭಾ ಕ್ಷೇತ್ರದ ಪೊಲೀಸ್ ವೀಕ್ಷಕ ವಿನಯಕುಮಾರ ಪಾಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಜೆ.ಸಿದ್ದಪ್ಪ, ಹೆಚ್ಚುವರಿ ಎಸ್ಪಿ ಎಫ್.ಎ. ಟ್ರಾಸ್ಗರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ್ ಸಭೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)