ಅಕ್ರಮ ತಡೆಯುವಲ್ಲಿ ಪಾಲಿಕೆ ವಿಫಲ: ಆರೋಪ

ಬುಧವಾರ, ಜೂಲೈ 17, 2019
28 °C

ಅಕ್ರಮ ತಡೆಯುವಲ್ಲಿ ಪಾಲಿಕೆ ವಿಫಲ: ಆರೋಪ

Published:
Updated:

ಬೆಂಗಳೂರು: `ಭ್ರಷ್ಟಾಚಾರ, ಅವ್ಯವಹಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರದ ಪ್ರತಿಬಿಂಬದಂತೆ ಬಿಬಿಎಂಪಿಯ ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿದೆ. ಕೆಲ ಅಧಿಕಾರಿಗಳು ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರೂ ಕ್ರಮ ಜರುಗಿಸುವಲ್ಲಿ ಪಾಲಿಕೆ ವಿಫಲವಾಗಿದೆ~ ಎಂದು ಪಾಲಿಕೆ ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದರು.`ಬೊಮ್ಮನಹಳ್ಳಿ ವಲಯ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ 2010ರ ಏಪ್ರಿಲ್ 1ರಿಂದ 2011ರ ಫೆಬ್ರುವರಿ 28ರವರೆಗಿನ ಅವಧಿಯಲ್ಲಿ ನಕ್ಷೆ ಮಂಜೂರಾತಿ ನೀಡಿಕೆಯಿಂದ ಸಂಗ್ರಹವಾದ ಶುಲ್ಕದಲ್ಲಿ 57.91 ಲಕ್ಷ ರೂಪಾಯಿ ದುರುಪಯೋಗವಾಗಿದೆ. ಈ ಅವ್ಯವಹಾರವನ್ನು ಪತ್ತೆ ಹಚ್ಚಿದ ಲೆಕ್ಕ ಪರಿಶೋಧನಾ ವಿಭಾಗವು ಆಯುಕ್ತರಿಗೆ ವರದಿ ನೀಡಿದ್ದರೂ ಪಾಲಿಕೆ ಆಡಳಿತ ಯಾರೊಬ್ಬರ ವಿರುದ್ಧವೂ ಕ್ರಮ ಜರುಗಿಸದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ~ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.`ಕೆಲವು ಡಿ.ಡಿಗಳನ್ನು ರಸೀದಿ ಮತ್ತು ಕಿರ್ದಿ ಪುಸ್ತಕದಲ್ಲಿ ನಮೂದಿಸಲಾಗಿದ್ದರೂ ಆ ಡಿ.ಡಿ ಹಣವನ್ನು ಜಮಾ ಬಗ್ಗೆ ಮಾಹಿತಿ ಇಲ್ಲ. ಬ್ಯಾಂಕ್‌ನ ಪಾಸ್‌ಶೀಟ್‌ನಲ್ಲಿಯೂ ದಾಖಲಾಗಿಲ್ಲ. ಒಂದೇ ಡಿ.ಡಿಗೆ ಎರಡು ರಸೀದಿ ಹಾಕಿರುವುದು ಪತ್ತೆಯಾಗಿದೆ. ಇದರಿಂದ ಪಾಲಿಕೆಗೆ ಸುಮಾರು 22 ಲಕ್ಷ ರೂಪಾಯಿ ನಷ್ಟವಾಗಿದೆ~ ಎಂದು ಆರೋಪಿಸಿದರು.`ಬೊಮ್ಮನಹಳ್ಳಿ ವಲಯದ ನಗರ ಯೋಜನೆ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕ ಎ.ಆನಂದಮೂರ್ತಿ ಅವರು ಕೈತಪ್ಪಿನಿಂದಾಗಿ 30.79 ಲಕ್ಷ ರೂಪಾಯಿಯನ್ನು ಪಾಲಿಕೆ ನಿಧಿಗೆ ಜಮಾ ಮಾಡಿಲ್ಲ ಎಂದು ಲಿಖಿತ ಹೇಳಿಕೆ ನೀಡಿದ್ದಾರೆ. ಅಲ್ಲದೇ ಈ ಹಣ ಮರು ಪಾವತಿಗೆ ಕಾಲಾವಕಾಶ ನೀಡುವಂತೆ ಕೋರಿ 2011ರ ಫೆಬ್ರುವರಿ 23ರಂದು ಪತ್ರ ಬರೆದಿದ್ದರು~ ಎಂದು ಹೇಳಿದರು.`ಆದರೆ ಈವರೆಗೆ ಅವರು ಪಾಲಿಕೆ ನಿಧಿಗೆ ಹಣ ಭರಿಸಿಲ್ಲ. ಅವರ ವಿರುದ್ಧ ಇಲಾಖಾ ವಿಚಾರಣೆ ಕೂಡ ನಡೆಸಿಲ್ಲ. ಹಣ ದುರ್ಬಳಕೆ ಮಾಡಿಕೊಂಡ ದ್ವಿತೀಯ ದರ್ಜೆ ಸಹಾಯಕ ಎ.ಆನಂದಮೂರ್ತಿ ಹಾಗೂ ಈ ಅವ್ಯವಹಾರವನ್ನು ತಡೆಗಟ್ಟುವಲ್ಲಿ ವಿಫಲರಾದ ನಗರ ಯೋಜನೆ ವಿಭಾಗದ ಸಹಾಯಕ ನಿರ್ದೇಶಕರನ್ನು ಕೂಡಲೇ ಅಮಾನತುಪಡಿಸಬೇಕು. ಆನಂದಮೂರ್ತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು~ ಎಂದು ಪದ್ಮನಾಭರೆಡ್ಡಿ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry