ಬುಧವಾರ, ಏಪ್ರಿಲ್ 21, 2021
30 °C

ಅಕ್ರಮ ನಡೆದರೆ ಚುನಾವಣೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ):  ತಮಿಳುನಾಡಿನಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಹಣ ಹಂಚಿಕೆ ಪ್ರಕರಣಗಳು ನಡೆಯುತ್ತಲೇ ಇವೆ ಎಂದು ಒಪ್ಪಿಕೊಂಡಿರುವ ಚುನಾವಣಾ ಆಯೋಗ, ಅಕ್ರಮಗಳು ವರದಿಯಾಗುವ ಕ್ಷೇತ್ರಗಳಲ್ಲಿನ ಚುನಾವಣೆಯನ್ನು ಮುಂದೂಡುವುದಾಗಿ ಎಚ್ಚರಿಕೆ ನೀಡಿದೆ.

‘ರಾಜಕೀಯ ಪಕ್ಷಗಳ ನಡೆಯನ್ನು ಆಯೋಗ ತೀಕ್ಷ್ಣವಾಗಿ ವೀಕ್ಷಿಸುತ್ತಿದೆ. ಹಣ ಹಂಚಿಕೆಯಂತಹ ಅಕ್ರಮಗಳ ಬಗ್ಗೆ ಮಾಹಿತಿದಾರರು ಮತ್ತು ನಾಗರಿಕ ಸಮಾಜ ಸಂಘಟನೆಗಳು ವರದಿ ನೀಡುತ್ತಿದ್ದಾರೆ. ಒಂದ ವೇಳೆ ಅಂತಹ ಘಟನೆಗಳು ನಡೆದಿರುವುದು ದೃಢಪಟ್ಟರೆ ಅಂತಹ ಕ್ಷೇತ್ರದ ಚುನಾವಣೆ ಮುಂದೂಡಲು ಅಥವಾ ರದ್ದುಪಡಿಸುವ ನಿಟ್ಟಿನಲ್ಲಿ ಆಯೋಗ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಮುಖ್ಯ ಚುನಾವಣಾ ಆಯುಕ್ತ ಪ್ರವೀಣ್ ಕುಮಾರ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

‘ಕಠಿಣ ಕ್ರಮ  ತೆಗೆದುಕೊಂಡಿದ್ದರೂ ಹಣ ಹಂಚಿಕೆಯ ಹಲವು ಪ್ರಕರಣಗಳು ವರದಿಯಾಗಿದೆ. ಶೇ.100ರಷ್ಟು ಅಕ್ರಮ ತಡೆ ಸಾಧ್ಯವಾಗದಿದ್ದರೂ ಬಹಿರಂಗವಾಗಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕುವಲ್ಲಿ ಆಯೋಗ ಯಶಸ್ವಿಯಾಗಿದೆ. ಮುಂದಿನ ಕ್ರಮಗಳ ಬಗ್ಗೆ ಚಿಂತಿಸಲು ಸಾಕಷ್ಟು ಸಮಯವಿದೆ. ಮತದಾನ ಮುಗಿದ ಬಳಿಕವೂ ಅಕ್ರಮಗಳ ವರದಿ ಪರಿಗಣಿಸಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ’ ಎಂದರು.

ಪ್ರಜ್ಞಾಪೂರ್ವಕವಾಗಿ ಮತ್ತು ಯಾವುದೇ ಭಯವಿಲ್ಲದೆ ಮತದಾನ ಮಾಡಬೇಕೆಂದು ಅವರು ಜನರಲ್ಲಿ ಮನವಿ ಮಾಡಿದರು. ‘ಎಲ್ಲಾ 9,500 ಮತಕೇಂದ್ರಗಳಲ್ಲಿಯೂ ಚಟುವಟಿಕೆಗಳನ್ನು ವೀಕ್ಷಿಸಲು ವೆಬ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ರಾಜ್ಯದಾದ್ಯಂತ ಅರೆ ಸೇನಾ ಪಡೆಯ 240 ತುಕಡಿಗಳನ್ನು ಮತ್ತು 1.50 ಲಕ್ಷ ಪೊಲೀಸರನ್ನು ಮತಗಟ್ಟೆಗಳಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಹೇಳಿದರು.

‘ಇದುವರೆಗೆ 34 ಕೋಟಿ ಅನಧಿಕೃತ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಸೋಮವಾರ 30 ಲಕ್ಷ ರೂ ಹಣ ಮುಟ್ಟುಗೋಲು ಹಾಕಲಾಗಿದೆ. ಸೂಕ್ತ ದಾಖಲೆ ಒದಗಿಸುವ ಹಣದ ಮಾಲೀಕರಿಗೆ ಅದನ್ನು ಹಿಂದಿರುಗಿಸಲಾಗುತ್ತಿದೆ ಅವರು ತಿಳಿಸಿದರು.

 

ಶಾಸಕನಿಗೆ ಗಾಯ

ಕೊಯಮತ್ತೂರು (ಪಿಟಿಐ): ಮತದಾರರಿಗೆ ಹಣ ಹಂಚುತ್ತಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಐಎಡಿಎಂಕೆ ಮತ್ತು ಡಿಎಂಕೆ ಕಾರ್ಯಕರ್ತರ ನಡುವೆ ಸೋಮವಾರ ರಾತ್ರಿ ನಡೆದ ಘರ್ಷಣೆ ವೇಳೆ ಎಐಎಡಿಎಂಕೆ ಶಾಸಕರೊಬ್ಬರು ಗಾಯಗೊಂಡಿದ್ದಾರೆ.

ತಿರುಪುರ ಜಿಲ್ಲೆಯ ಮದಥುಕಲಮ್ ಕ್ಷೇತ್ರದ ಎಐಎಡಿಎಂಕೆ ಅಭ್ಯರ್ಥಿ ಷಣ್ಮುಗವೇಲು ಕಾರ್ಯಕರ್ತರ ಜೊತೆಗೂಡಿ ತಮ್ಮ ಪ್ರತಿಸ್ಪರ್ಧಿ ಮತ್ತು ಹೆದ್ದಾರಿ ಸಚಿವ ಡಿಎಂಕೆಯ ಸ್ವಾಮಿನಾಥನ್ ಮತ್ತವರ ಬೆಂಬಲಿಗರು ಸೇರಿದ್ದ ಮನೆಯೊಂದನ್ನು ಸುತ್ತುವರೆದು, ಜನರಿಗೆ ಹಣ ಹಂಚುತ್ತಿದ್ದಾರೆ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ನಡೆದು ಷಣ್ಮುಗವೇಲು ಸೇರಿದಂತೆ ಹಲವರು ಗಾಯಗೊಂಡರು. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.