ಸೋಮವಾರ, ಮೇ 23, 2022
20 °C

ಅಕ್ರಮ ಪಂಪ್‌ಸೆಟ್: ರೈತರಿಗೆ ನೋಟಿಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ)ಯ ಎಂಟು ಜಿಲ್ಲೆಗಳ ವ್ಯಾಪ್ತಿಯಲ್ಲಿ 10 ಎಚ್.ಪಿ.ವರೆಗಿನ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವುದಕ್ಕಾಗಿ ಸರ್ಕಾರ ನಿಗದಿಪಡಿಸಿದ್ದ ಗಡುವು ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡಿದೆ. ಆದರೂ ಬಹಳಷ್ಟು ರೈತರು ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಇಂತಹ ರೈತರಿಗೆ ನೋಟಿಸ್ ಜಾರಿಗೊಳಿಸಲು `ಬೆಸ್ಕಾಂ~ ಸಿದ್ದತೆ ನಡೆಸಿದೆ.`ಬೆಸ್ಕಾಂ~ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ 10 ಎಚ್‌ಪಿವರೆಗಿನ ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ ಸೆಪ್ಟೆಂಬರ್ 30ರವರೆಗೆ ಗಡುವು ನೀಡಲಾಗಿತ್ತು.ರೈತರು ಜುಲೈ 31ರೊಳಗೆ `ಬೆಸ್ಕಾಂ~ ಕಚೇರಿಗಳಲ್ಲಿ ರೂ 50 ಶುಲ್ಕ ಸಲ್ಲಿಸಿ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಆನಂತರ ಸೆಪ್ಟೆಂಬರ್ 30ರೊಳಗಾಗಿ 10 ಸಾವಿರ ರೂಪಾಯಿ ದಂಡ ಶುಲ್ಕ, ಮೂರು ತಿಂಗಳ ಕನಿಷ್ಠ ಠೇವಣಿ (ಪ್ರತಿ ಅಶ್ವ ಶಕ್ತಿಗೆ ರೂ. 420), ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಜಲ ಹಕ್ಕು ಪ್ರಮಾಣ ಪತ್ರ, ಕಾರ್ಯ ಸಮಾಪನಾ ವರದಿ, ರೂ. 200 ಬೆಲೆಯ ವಿದ್ಯುತ್ ಸರಬರಾಜು ಕರಾರು ಪತ್ರ ಹಾಗೂ 100 ರೂಪಾಯಿ ಬೆಲೆಯ ನಷ್ಟ ಭರ್ತಿ ಮುಚ್ಚಳಿಕೆ ನೀಡಬೇಕಾಗಿತ್ತು.ಈ ರೀತಿ ನೋಂದಣಿ ಮಾಡಿದಂತಹ ರೈತರ ಅಕ್ರಮ ಪಂಪ್‌ಸೆಟ್‌ಗಳಿಗೆ `ಬೆಸ್ಕಾಂ~ ಉಪ ವಿಭಾಗ ಕಚೇರಿಯಲ್ಲಿ ಅಧಿಕೃತ ಜ್ಞಾಪನಾಪತ್ರ ಹೊರಡಿಸಿ ಆರ್.ಆರ್. ಸಂಖ್ಯೆ ನೀಡುವುದಾಗಿ ಕಂಪೆನಿ ಪ್ರಕಟಿಸಿತ್ತು.ಪ್ರತಿ ನೀರಾವರಿ ಪಂಪ್‌ಸೆಟ್ ಸಕ್ರಮಕ್ಕಾಗಿ ರೂ 70,000 ಖರ್ಚಾಗಬಹುದು ಎಂದು `ಬೆಸ್ಕಾಂ~ ಅಂದಾಜಿಸಿತ್ತು. ಈ ಪೈಕಿ ರೈತರು ರೂ 10,000  ಭರಿಸಿದರೆ, ಸರ್ಕಾರ 25 ಸಾವಿರ ರೂಪಾಯಿ ಹಾಗೂ ಉಳಿದ 35 ಸಾವಿರ ರೂಪಾಯಿ ಮೊತ್ತವನ್ನು ಆಯಾ ವಿತರಣಾ ಕಂಪೆನಿಗಳೇ ಭರಿಸಬೇಕಾಗಿತ್ತು.ಸಕ್ರಮಕ್ಕೆ 15,211 ರೈತರ ಆಸಕ್ತಿ: `ಬೆಸ್ಕಾಂ~ ವ್ಯಾಪ್ತಿಯಲ್ಲಿನ 55,583 ಅಕ್ರಮ ಪಂಪ್‌ಸೆಟ್‌ಗಳಿವೆ ಎಂಬ ಮಾಹಿತಿಯಿದೆ. ಈ ಪೈಕಿ 4061 ಹೊಸ ಅಕ್ರಮ ಪಂಪ್‌ಸೆಟ್‌ಗಳಿಗೆ ಕಂಬದಿಂದ ನೇರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಈ ಪಂಪ್‌ಸೆಟ್‌ಗಳಿಗೆ ಆರ್. ಆರ್ ಸಂಖ್ಯೆ ಕೂಡ ನೀಡಲಾಗಿದೆ. ಉಳಿದ 51,522 ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಬೇಕಿದೆ. ಆದರೆ, ಈ ಪೈಕಿ ಸೆಪ್ಟೆಂಬರ್ 30ರವರೆಗೆ ಕೇವಲ 15,211 ರೈತರು ಮಾತ್ರ ಹೆಸರು ನೋಂದಣಿ ಮಾಡಿಕೊಂಡು ರೂ 10,000 ದಂಡ ಪಾವತಿಸಿದ್ದಾರೆ.ನಿಗದಿತ ಗಡುವು ಮುಗಿದ ನಂತರವೂ ಸಾಕಷ್ಟು ಸಂಖ್ಯೆಯ ರೈತರು ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ ಆಸಕ್ತಿ ತೋರಿಲ್ಲ. ಇಂತಹ ರೈತರಿಗೆ ನೋಟಿಸ್ ನೀಡಿ ನಿರ್ದಿಷ್ಟ ಅವಧಿಯೊಳಗೆ 10 ಸಾವಿರ ರೂಪಾಯಿ ದಂಡ ಪಾವತಿಸಲು ಅವಕಾಶ ನೀಡಲು `ಬೆಸ್ಕಾಂ~ ಪರಿಶೀಲಿಸುತ್ತಿದೆ. ಇದರ ಜೊತೆಯಲ್ಲಿ ಸದ್ಯಕ್ಕೆ ಯಾವುದೇ ಅಕ್ರಮ ಪಂಪ್‌ಸೆಟ್‌ಗಳ ಸಂಪರ್ಕವನ್ನು ಕಡಿತಗೊಳಿಸುವುದಿಲ್ಲ ಎಂದು ಕಂಪೆನಿಯು ಭರವಸೆ ನೀಡಿದೆ.ಈ ನಡುವೆ, ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ ನಿಗದಿತ ಗಡುವು ಮುಗಿದಿರುವ ಹಿನ್ನೆಲೆಯಲ್ಲಿ ಅದನ್ನು ವಿಸ್ತರಿಸುವ ವಿಚಾರ ಸರ್ಕಾರಕ್ಕೆ ಬಿಟ್ಟದ್ದು ಎಂದು `ಬೆಸ್ಕಾಂ~ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಗದಿತ ದಿನದೊಳಗೆ ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ ರೈತರ ಮನವೊಲಿಸಲು ಪ್ರಯತ್ನಿಸಲಾಗುವುದು. ಇದಕ್ಕಾಗಿ ರೈತರಿಗೆ ಎರಡು-ಮೂರು ಬಾರಿ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.ದಾವಣಗೆರೆ ವಲಯ ವ್ಯಾಪ್ತಿಗೆ ಒಳಪಡುವ ತುಮಕೂರು, ಚಿತ್ರದುರ್ಗ ವೃತ್ತಗಳಲ್ಲಿ ಅತ್ಯಧಿಕ 30,354 ಅಕ್ರಮ ಕೃಷಿ ಪಂಪ್‌ಸೆಟ್‌ಗಳಿವೆ. ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ವೃತ್ತಗಳಲ್ಲಿ 24,369 ಹಾಗೂ ಬೆಂಗಳೂರು ಮಹಾನಗರ ವಲಯ ವ್ಯಾಪ್ತಿಯ, ದಕ್ಷಿಣ, ಉತ್ತರ ಹಾಗೂ ಪೂರ್ವ ವೃತ್ತಗಳಲ್ಲಿ 680 ಅಕ್ರಮ ಕೃಷಿ ಪಂಪ್‌ಸೆಟ್‌ಗಳಿವೆ `ಬೆಸ್ಕಾಂ~ ಅಂದಾಜು ಮಾಡಿದೆ.ಅಕ್ರಮ ಪಂಪ್‌ಸೆಟ್‌ಗಳು ಸಕ್ರಮಗೊಳ್ಳುವುದರಿಂದ ಸರ್ಕಾರಕ್ಕೆ ನಿರ್ದಿಷ್ಟ ಸಂಖ್ಯೆಯ ಪಂಪ್‌ಸೆಟ್‌ಗಳ ಲೆಕ್ಕ ಸಿಗಲಿದೆ. ಇದರಿಂದ ಕೃಷಿ ಪಂಪ್‌ಸೆಟ್‌ಗಳ ಆಧಾರದಲ್ಲಿ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಪೂರೈಸಲು ಸಹಕಾರಿಯಾಗಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯುತ್ ಪರಿವರ್ತಕಗಳು ಕೈಕೊಡುವುದನ್ನು ತಪ್ಪಿಸಬಹುದಾಗಿದೆ.

 

ಇದರ ಜತೆಗೆ, 10 ಎಚ್.ಪಿ.ವರೆಗಿನ ರೈತರ ಪಂಪ್‌ಸೆಟ್‌ಗಳಿಗೆ ಸರ್ಕಾರ ನೀಡುವ ಸಬ್ಸಿಡಿ ಪಡೆಯಲು ಕಂಪೆನಿಗೆ ಅನುಕೂಲವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.