ಗುರುವಾರ , ಜೂನ್ 24, 2021
24 °C
ಜಲಮಂಡಳಿ ಆಡಳಿತ ತಿರ್ಮಾನ

ಅಕ್ರಮ ಪತ್ತೆಗೆ ವಿಚಕ್ಷಣಾ ದಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಅನಧಿಕೃತ ನೀರಿನ ಸಂಪರ್ಕ ಹಾಗೂ ನೀರಿನ ಕಳವಿನಿಂದಾಗಿ ಜಲಮಂಡಳಿಯ ಆದಾಯಕ್ಕೆ ದೊಡ್ಡ ಹೊಡೆತ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ಇಂತಹ ಚಟುವಟಿಕೆಗಳ ನಿಯಂತ್ರಣಕ್ಕೆ ಎರಡು ವಿಚಕ್ಷಣಾ ದಳಗಳನ್ನು ಸ್ಥಾಪಿಸಲು ಜಲಮಂಡಳಿಯ ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಮಂಡಳಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ವಿಚಕ್ಷಣಾ ದಳ (ತಾಂತ್ರಿಕ) ಹಾಗೂ ವಿಚಕ್ಷಣಾ ದಳ (ಪೊಲೀಸ್‌) ಆರಂಭಿಸಲು ಒಪ್ಪಿಗೆ ನೀಡಲಾಯಿತು.ತಾಂತ್ರಿಕ ದಳದಲ್ಲಿ ಮುಖ್ಯ ಎಂಜಿನಿಯರ್‌ ದರ್ಜೆಯ ಅಧಿಕಾರಿಗಳು ಹಾಗೂ ಪೊಲೀಸ್‌ ದಳದಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ದರ್ಜೆಯ ಅಧಿಕಾರಿಗಳನ್ನು ನಿಯೋಜಿಸಲಾಗು­ವುದು. ಮುಂದಿನ ದಿನಗಳಲ್ಲಿ ಸಮಿತಿಗೆ ಅರ್ಹ ಸದಸ್ಯರ ಹೆಸರನ್ನು ಕಳುಹಿಸು­ವಂತೆ ಸದಸ್ಯರಿಗೆ ಮಂಡಳಿ ವಿನಂತಿಸಿದೆ. ನೀರಿನ ಕಳವು, ಅನಧಿಕೃತ ನೀರಿನ ಸಂಪರ್ಕ, ಮೀಟರ್‌ ಟ್ಯಾಂಪರ್‌ ಮಾಡುವುದು ಸೇರಿದಂತೆ ವಿವಿಧ ಅಕ್ರಮ ಚಟುವಟಿಕೆಗಳ ಬಗ್ಗೆ ದಳ ದೂರು ಸ್ವೀಕರಿಸಲಿದೆ. ನೀರಿನ ಕಳವು ಮಾಡಿದವರ ವಿರುದ್ಧ ಪೊಲೀಸ್‌ ದಳವು ಕ್ರಿಮಿನಲ್‌ ಪ್ರಕರಣ ದಾಖಲಿಸಲಿದೆ ಹಾಗೂ ಜಲಮಂಡಳಿ ಕಾಯ್ದೆಯ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ.ಜಲಮಂಡಳಿಯು 2005ರಲ್ಲಿ ಬೃಹತ್‌ ಬೆಂಗಳೂರು ಕುಡಿಯುವ ನೀರು ಹಾಗೂ ಒಳಚರಂಡಿ ಯೋಜನೆ ಅಡಿಯಲ್ಲಿ ಯೋಜನಾ ವೆಚ್ಚಕ್ಕೆ ಫಲಾನುಭವಿಗಳಿಂದ ಪಾಲು (ಬಿಸಿಸಿ) ಸ್ವೀಕರಿಸಲು ಆರಂಭಿಸಿತ್ತು. ಇದರಲ್ಲೂ ಅಕ್ರಮ ನಡೆದಿತ್ತು. ಫಲಾನುಭವಿಗಳಿಂದ ಪಾಲು ಸ್ವೀಕರಿಸಿದ ಬಳಿಕವೂ ಸಮಗ್ರವಾಗಿ ಹೊಸ ಸಂಪರ್ಕ ಕಲ್ಪಿಸುವಲ್ಲಿ ಮಂಡಳಿ ಯಶಸ್ಸು ಗಳಿಸಿರಲಿಲ್ಲ. ಬ್ಯಾಂಕಿನ ನಕಲಿ ಹಿಂಬರಹಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಸಂಸ್ಥೆಯ ಇಬ್ಬರು ಸಿಬ್ಬಂದಿ ರೂ. 10 ಲಕ್ಷ ಅವ್ಯವಹಾರ ನಡೆಸಿದ್ದರು.ಕೆ.ಆರ್‌.ಪುರದಲ್ಲಿ ನಡೆದ ಈ ಪ್ರಕರಣ ಜನವರಿಯಲ್ಲಿ ಬೆಳಕಿಗೆ ಬಂದಿತ್ತು. ಇತರ ಕಡೆಗಳಲ್ಲೂ ಇಂತಹ ಪ್ರಕರಣಗಳು ನಡೆದಿರುವ ಸಾಧ್ಯತೆ ಇದೆ ಎಂದು ಮಂಡಳಿಯ ಲೆಕ್ಕಪರಿಶೋಧನಾ ವಿಭಾಗ ಅನುಮಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ  2005ರಿಂದ ಈ ವರೆಗೆ ಸ್ವೀಕರಿಸಿದ ಫಲಾನುಭವಿಗಳ ಪಾಲಿನ ಲೆಕ್ಕಪರಿಶೋಧನೆ ನಡೆಸಲು ಮಂಡಳಿ ನಿರ್ಧರಿಸಿದೆ.ಸಜಲ ಅರ್ಜಿ ನಮೂನೆ ಸೇರಿದಂತೆ ಈ ವರೆಗೆ ಫಲಾನುಭವಿಗಳ ಪಾಲು ರೂಪದಲ್ಲಿ ಮಂಡಳಿಯು ರೂ. 687 ಕೋಟಿ ಸಂಗ್ರಹಿಸಿದೆ. ಮಂಡಳಿಯ ಮೇಲ್ವಿಚಾರಣಾ ವ್ಯವಸ್ಥೆಯಲ್ಲಿ ಲೋಪದೋಷಗಳು ಇರುವುದರಿಂದ ಹೊಸ ನೀರಿನ ಸಂಪರ್ಕ ಒದಗಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.‘ಲೆಕ್ಕಕ್ಕೆ ಸಿಗದ ನೀರಿನ ರೂಪದಲ್ಲೇ ಶೇ 50ರಷ್ಟು ಕಾವೇರಿ ನೀರು ಚರಂಡಿ ಪಾಲಾಗುತ್ತಿದೆ. ಇದನ್ನು ತಡೆಗಟ್ಟಲು ಮಂಡಳಿ ಯೋಜನೆ ರೂಪಿಸಿ ಜಾರಿಗೆ ತಂದಿದೆ. ಬಿಬಿಎಂಪಿಗೆ ಸೇರ್ಪಡೆಯಾದ ಹೊಸ ಪ್ರದೇಶಗಳಿಗೆ ಮಂಡಳಿಯು ಕಾವೇರಿ ನೀರು ಪೂರೈಕೆ ಮಾಡುತ್ತಿದೆ. ಇದರಲ್ಲಿ ಶೇ 60 ಕಾವೇರಿ ನೀರು ಲೆಕ್ಕಕ್ಕೆ ಸಿಗುತ್ತಿಲ್ಲ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.