ಅಕ್ರಮ ಬಡಾವಣೆಗಳ ತೆರವು

7

ಅಕ್ರಮ ಬಡಾವಣೆಗಳ ತೆರವು

Published:
Updated:
ಅಕ್ರಮ ಬಡಾವಣೆಗಳ ತೆರವು

ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕು ವ್ಯಾಪ್ತಿಯಲ್ಲಿ ಹಸಿರು ಪಟ್ಟಿ ಮತ್ತು ಕೃಷಿ ಜಮೀನುಗಳಲ್ಲಿ ಭೂಕಂದಾಯ ಕಾಯಿದೆ ಉಲ್ಲಂಘಿಸಿ ಅನಧಿಕೃತವಾಗಿ ಪಂಚಾಯಿತಿ ಖಾತೆಗಳನ್ನು ಮಾಡಿಸಿಕೊಂಡು ಕಾನೂನುಬಾಹಿರವಾಗಿ ನಿರ್ಮಿಸಿದ್ದ ಬಡಾವಣೆಗಳ ಒತ್ತುವರಿ ಜಾಗವನ್ನು ಬೆಂಗಳೂರು ಉತ್ತರ (ಹೆಚ್ಚುವರಿ) ತಹಸೀಲ್ದಾರ್ ಬಿ.ವೆಂಕಟೇಶ್ ನೇತೃತ್ವದ ತಂಡ ತೆರವುಗೊಳಿಸಿ ಜಮೀನನ್ನು ಸರ್ಕಾರದ ವಶಕ್ಕೆ ಪಡೆದಿದೆ.ವಿಶೇಷ ಪೊಲೀಸ್ ಪಡೆ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ, ಹೆಸರಘಟ್ಟ ಹೋಬಳಿ ಹುರುಳಿಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಹಳ್ಳಿ, ತರಬನಹಳ್ಳಿ ಹಾಗೂ ಸಾಸಿವೆಘಟ್ಟ ಪ್ರದೇಶಗಳಲ್ಲಿ ಶುಕ್ರವಾರ ಕಾರ್ಯಾಚರಣೆ ನಡೆಸಿ ಸುಮಾರು 50 ಎಕರೆ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ 20 ಬಡಾವಣೆಗಳ ಒತ್ತುವರಿ ಜಾಗವನ್ನು ತೆರವುಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ವೆಂಕಟೇಶ್, ಅಕ್ರಮವಾಗಿ ಬಡಾವಣೆ ನಿರ್ಮಿಸಿರುವ 12 ಜನರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿಕೊಂಡು ಈಗಾಗಲೆ ನೋಟಿಸ್ ಜಾರಿಗೊಳಿಸಲಾಗಿದೆ. ಕಂದಾಯ ದಾಖಲೆಗಳಾದ ಆರ್‌ಟಿಸಿ, ಮ್ಯುಟೇಶನ್‌ನಲ್ಲಿ ಖಾತೆಯಿದ್ದರೂ ಸಹ ಪಂಚಾಯಿತಿಯಲ್ಲಿ ಈ ಜಮೀನಿಗೆ ಖಾತೆ ಮಾಡಿಸಿರುವುದು ಕಂಡು ಬಂದಿದ್ದು, ಇದು ಕರ್ನಾಟಕ ಭೂಕಂದಾಯ ಕಾಯಿದೆ ಕಲಂ-127, 128, 129 ರ ಉಲ್ಲಂಘನೆಯಾಗಿದೆ ಎಂದು ಹೇಳಿದರು.ನಿವೇಶನಗಳ ಕ್ರಯ ಮಾಡಿರುವವರ ವಿರುದ್ಧ ಕಲಂ-192ಎ (5) ಅಡಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದ್ದು, ಯಾವುದೇ ಭೂ ಪರಿವರ್ತನೆ ಆದೇಶವಿಲ್ಲದೆ ಕೃಷಿ ಜಮೀನನ್ನು ಕೃಷಿಯೇತರ ಚಟುವಟಿಕೆಗೆ ಬಳಸಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಇದರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಈ ಬಗ್ಗೆ ಪಂಚಾಯಿತಿಯವರು ಯಾವುದೇ ಅಕ್ರಮ ಖಾತೆ ಮಾಡಿಲ್ಲ ಎಂದು ಲಿಖಿತ ರೂಪದಲ್ಲಿ ತಿಳಿಸಿದ್ದಾರೆ. ಆದರೆ, ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೀಡಿರುವ ದಸ್ತಾವೇಜಿನಲ್ಲಿ ನಮೂನೆ-9, 10, 11, 12 ಅನ್ನು ಲಗತ್ತಿಸಿರುವುದು ಕಂಡು ಬಂದಿದೆ.ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆಯಲಾಗಿದೆ.  ಖಾತೆ ನೀಡಿರುವುದು ಸಾಬೀತಾದಲ್ಲಿ ಪಂಚಾಯಿತಿ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಯಶವಂತಪುರ ಉಪ ವಿಭಾಗದ ಎಸಿಪಿ ಹನುಮಂತಯ್ಯ, ಸೋಲದೇವನಹಳ್ಳಿ ಠಾಣೆಯ ಇನ್ಸ್‌ಪೆಕ್ಟರ್ ರಂಗಸ್ವಾಮಿ, ಉಪ ತಹಸೀಲ್ದಾರ್ ನಾಗಪ್ಪ, ರಾಜಸ್ವ ನಿರೀಕ್ಷಕ ಗೂಳಿಗೌಡ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry