ಅಕ್ರಮ ಮದ್ಯ: ಅಂಗಡಿಗಳಿಗೆ ಗ್ರಾಮಸ್ಥರಿಂದ ಬೆಂಕಿ

7

ಅಕ್ರಮ ಮದ್ಯ: ಅಂಗಡಿಗಳಿಗೆ ಗ್ರಾಮಸ್ಥರಿಂದ ಬೆಂಕಿ

Published:
Updated:
ಅಕ್ರಮ ಮದ್ಯ: ಅಂಗಡಿಗಳಿಗೆ ಗ್ರಾಮಸ್ಥರಿಂದ ಬೆಂಕಿ

ಲಕ್ಷ್ಮೇಶ್ವರ (ಗದಗ ಜಿಲ್ಲೆ): ಅಕ್ರಮ ಮದ್ಯ ಮಾರಾಟ ವಿರೋಧಿಸಿ ಸಮೀಪದ ಸೂರಣಗಿ ಗ್ರಾಮದ ಮಹಿಳೆಯರು ಹಾಗೂ ಸಾರ್ವಜನಿಕರು ಭಾನುವಾರ ಪ್ರತಿಭಟನೆ ನಡೆಸಿ, ಅಂಗಡಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಗ್ರಾಮದಲ್ಲಿ ಅನೇಕ ದಿನಗಳಿಂದ ಅಕ್ರಮ ಮದ್ಯ ಮಾರಾಟ ರಾಜಾರೋಷವಾಗಿ ನಡೆಯುತ್ತಿದ್ದು, ಅದನ್ನು ತಡೆಗಟ್ಟುವಂತೆ ಬಹಳಷ್ಟು ಸಲ ಪೊಲೀಸರಿಗೆ ಮೌಖಿಕವಾಗಿ ಹಾಗೂ ಲಿಖಿತವಾಗಿ ತಿಳಿಸಿದರೂ ಅವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಗ್ರಾಮದಲ್ಲಿ 20ಕ್ಕೂ ಹೆಚ್ಚು ಅಕ್ರಮ ಮದ್ಯದ ಅಂಗಡಿಗಳು ಇವೆ ಎಂದು ಹೇಳಲಾಗಿದೆ. ಮೊದಲು ಪ್ರತಿಭಟನಾಕಾರರು ಗ್ರಾಮದ ಹೊಸ ಬಸ್ ನಿಲ್ದಾಣದ ಹತ್ತಿರದ ಪೆಟ್ಟಿಗೆ ಅಂಗಡಿಗಳನ್ನು  ಉರುಳಿಸಿದರು. ಈ ಸಮಯದಲ್ಲಿ ಕೆಲ ಮಹಿಳೆಯರು ಸೀರೆ ಹಾಗೂ ಕಾಳುಕಡಿಗಳಿಗೂ ಸಹ ಅಂಗಡಿಯವರು ಮದ್ಯ ಪೂರೈಸುತ್ತಿದ್ದಾರೆ ಎಂದು ದೂರಿದರು. ಅಂಗಡಿಯಲ್ಲಿದ್ದ ಸೀರೆ ಹಾಗೂ ಕಾಳುಕಡಿಗಳನ್ನು ಹೊರ ತೆಗೆದು ಸುದ್ದಿಗಾರರಿಗೆ ತೋರಿಸಿದರು.ನಂತರ ಗ್ರಾಮದ ಪ್ರತಿ ಓಣಿಯಲ್ಲಿ ಸಂಚರಿಸಿದ ಪ್ರತಿಭಟನಾಕಾರರು ಮದ್ಯ ಮಾರಾಟ ಮಾಡುತ್ತಿದ್ದ ಪ್ರತಿಯೊಂದು ಅಂಗಡಿಯನ್ನೂ ಧ್ವಂಸ ಮಾಡಿದರು. ನಂತರ ಗ್ರಾಮದ ಹೊರವಲಯದಲ್ಲಿದ್ದ ಢಾಬಾ ಮತ್ತು ಪೆಟ್ಟಿಗೆ ಅಂಗಡಿಗಳಿಗೆ ಬೆಂಕಿ ಹಚ್ಚಿದರು.ಹಳೆ ಬಸ್ ನಿಲ್ದಾಣದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಯುವ ಮುಖಂಡ ವಿಜಯ ಹಳ್ಳಿ ಮಾತನಾಡಿ, ಗ್ರಾಮದಲ್ಲಿ ಅಕ್ರಮ ಮದ್ಯದ ಅಂಗಡಿಗಳ ಹಾವಳಿ ಹೆಚ್ಚಾಗಿದ್ದು, ಇದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry