ಗುರುವಾರ , ಅಕ್ಟೋಬರ್ 17, 2019
22 °C

ಅಕ್ರಮ ಮದ್ಯ: ಜನಸ್ಪಂದನದಲ್ಲಿ ಆಕ್ರೋಶ

Published:
Updated:

ತಿಪಟೂರು: ಗ್ರಾಮೀಣ ಪ್ರದೇಶಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಶಾಸಕರ ಸಮ್ಮುಖದಲ್ಲೇ ತಾಲ್ಲೂಕಿನ ಬಳುವನೇರಲು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.ಬಳುವನೇರಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಜನಸ್ಪಂದನದಲ್ಲಿ ಇಂಥದ್ದೊಂದು ಆಕ್ರೋಶ ಗ್ರಾಮಸ್ಥರಲ್ಲಿ ವ್ಯಕ್ತವಾಯಿತು. ಅಕ್ರಮ ಮದ್ಯ ಮಾರಾಟದಿಂದ ಗ್ರಾಮಗಳಲ್ಲಿ ಹಲವು ಸಮಸ್ಯೆ ಉದ್ಭವಿಸಿವೆ. ನಿತ್ಯ ಜಗಳ, ಹೊಡೆದಾಟ ನಡೆಯುತ್ತವೆ. ಗ್ರಾಮದ ಶಾಂತಿ, ನೆಮ್ಮದಿ, ಸಾಮರಸ್ಯಕ್ಕೆ ಭಂಗ ಉಂಟಾಗಿದೆ. ಈ ಅಕ್ರಮ ಮದ್ಯ ಮಾರಾಟ ತಡೆಯಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಈ ದಂಧೆಯಲ್ಲಿ ಅಬಕಾರಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ಇದೆ ಎಂದು ಕಿಡಿಕಾರಿದರು.ಜನರ ಅಹವಾಲು ಆಲಿಸಿದ ಶಾಸಕ ಬಿ.ಸಿ.ನಾಗೇಶ್, ಅಬಕಾರಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಅಕ್ರಮ ದಂಧೆ ಹತ್ತಿಕ್ಕಲು ನಿಮಗೆ ಸಮಸ್ಯೆ ಏನು ಎಂದು ಏರಿದ ದನಿಯಲ್ಲಿ ರೇಗಿದರು. ಅಕ್ರಮ ಮದ್ಯಕ್ಕೆ ಕಡಿವಾಣ ಹಾಕದಿದ್ದರೆ ಗ್ರಾಮೀಣ ಮಹಿಳೆಯರೇ ಇಲಾಖೆ ವಿರುದ್ಧ ತಿರುಗಿ ಬೀಳುತ್ತಾರೆ ಎಂದು ಎಚ್ಚರಿಸಿದರು.ವಿವಿಧ ಇಲಾಖೆ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು. ಗ್ರಾ.ಪಂ. ಸದಸ್ಯ ಶಂಕರಪ್ಪ ನಿರೂಪಿಸಿದರು. ಮರುಳಪ್ಪ ಸ್ವಾಗತಿಸಿದರು. ತಾ.ಪಂ.ಅಧ್ಯಕ್ಷೆ ವಸಂತಾ ಗಂಗಾಧರ್, ತಹಶೀಲ್ದಾರ್ ವಿಜಯಕುಮಾರ್ ಮತ್ತಿತರರು ಇದ್ದರು.

Post Comments (+)