ಅಕ್ರಮ ಮದ್ಯ ಹಾವಳಿ ತಡೆಯಲು ಆಗ್ರಹ

7

ಅಕ್ರಮ ಮದ್ಯ ಹಾವಳಿ ತಡೆಯಲು ಆಗ್ರಹ

Published:
Updated:
ಅಕ್ರಮ ಮದ್ಯ ಹಾವಳಿ ತಡೆಯಲು ಆಗ್ರಹ

ಚಿಕ್ಕಮಗಳೂರು: ಖಾಂಡ್ಯ ಹೋಬಳಿ ಸಾರಗೋಡು ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಅಕ್ರಮ ಮದ್ಯ ಹಾವಳಿ ತಡೆಗಟ್ಟಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಅಬಕಾರಿ ಇಲಾಖೆ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.ಸಾರಗೋಡು, ನೊಜ್ಜೆಹಡ್ಲು, ಬೊಮ್ಮನಮಕ್ಕಿಯಲ್ಲಿ ಕಳ್ಳಬಟ್ಟಿ ಸಾರಾಯಿ ಮಾರಾಟ ಅವ್ಯಹತವಾಗಿ ನಡೆಯುತ್ತಿದೆ. ದಿನಸಿ ಅಂಗಡಿಗಳಲ್ಲಿ ಬ್ರಾಂದಿ ಮಾರಾಟ ನಡೆಯುತ್ತಿದ್ದರೂ ಇದನ್ನು ತಡೆಗಟ್ಟುವಲ್ಲಿ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.ಕೂಲಿ ಮಾಡಿ ಜೀವನ ಸಾಗಿಸುತ್ತಿರುವವರು ದುಡಿದ ಹಣ ಮದ್ಯಪಾನಕ್ಕೆ ವ್ಯಯಿಸುತ್ತಿದ್ದಾರೆ. ಸಂಸಾರ ಸಾಗಿಸುವುದೇ ಕಷ್ಟಕರವಾಗಿದೆ. ಗ್ರಾಮದ ಎಂಟು ಮಂದಿ ಕುಡಿತದ ಚಟದಿಂದಲೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ನೆಮ್ಮದಿ ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡ ಮಹಿಳೆಯರು, ಅಕ್ರಮ ಮದ್ಯ ಮಾರಾಟವನ್ನು ತಕ್ಷಣವೇ ತಡೆಗಟ್ಟಬೇಕೆಂದು ಮನವಿ ಮಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳಬಟ್ಟಿ ಮತ್ತು ದಿನಸಿ ಅಂಗಡಿಗಳಲ್ಲಿ ಬ್ರಾಂದಿ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಬಕಾರಿ ಮತ್ತು ಪೊಲೀಸ್ ಇಲಾಖೆ ಕ್ರಮ ಜರುಗಿಸಿಲ್ಲ ಎಂದು ದಲಿತ ಸಂಘರ್ಷ ಸಮಿತಿ ಮುಖಂಡರು ಕಿಡಿಕಾರಿದರು. ಹೊಳೆ ದಾಟಿ ಅಬಕಾರಿ ಇಲಾಖೆ ಅಧಿಕಾರಿ-ಸಿಬ್ಬಂದಿ ಬರುವುದಿಲ್ಲ. ದಾರಿಯಲ್ಲಿ ಸಿಕ್ಕಿದವರ ಬಳಿ ಮಾತನಾಡಿ ಹಿಂದಿರುಗುತ್ತಾರೆ. ಸಾರಗೋಡು, ಬೊಮ್ಮನಮಕ್ಕಿ, ನೊಜ್ಜೆಹಡ್ಲು ದಲಿತರ ಸಮಸ್ಯೆ ಹೇಳತೀರದಾಗಿದೆ ಎಂದು ಶಾರದಮ್ಮ ನೊಂದು ನುಡಿದರು.ವಾರಕ್ಕೊಮ್ಮೆ ದಾಳಿ ನಡೆಸಿ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕಬೇಕು. ಕಳ್ಳಬಟ್ಟಿ ಸೇವಿಸಿ ಮೃತಪಟ್ಟವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂಬ ಬೇಡಿಕೆಯನ್ನು ಗ್ರಾಮಸ್ಥರು ಮುಂದಿಟ್ಟರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಪಿ.ರಾಜರತ್ನಂ, ಜಿಲ್ಲಾ ಸಂಘಟನಾ ಸಂಚಾಲಕ ಯಲಗುಡಿಗೆ ಬಸವರಾಜ್, ನಾಗರಾಜ್, ತಾಲ್ಲೂಕು ಸಂಚಾಲಕರಾದ ಬೋಬಯ್ಯ, ಗಣೇಶ್, ಮಹಿಳಾ ಸಹಸಂಚಾಲಕಿ ವಿಶಾಲಾಕ್ಷಿ, ಲಕ್ಷ್ಮಮ್ಮ, ಮುಖಂಡ ತಡಗಸೆ ದಿವಾಕರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry