ಮಂಗಳವಾರ, ಏಪ್ರಿಲ್ 20, 2021
25 °C

ಅಕ್ರಮ ಮರಳುಗಾರಿಕೆ: 11 ಬೋಟ್ ಧ್ವಂಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ತಾಲ್ಲೂಕಿನ ಮೈಗೂರ, ಮುತ್ತೂರ ಮತ್ತು ಶಿರಗುಪ್ಪಿ ಗ್ರಾಮಗಳ ಹತ್ತಿರ ಕೃಷ್ಣಾ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ 11 ಬೋಟ್‌ಗಳನ್ನು ತಾಲ್ಲೂಕು ಆಡಳಿತ ಸಂಪೂರ್ಣವಾಗಿ ಧ್ವಂಸ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.ಜಿಲ್ಲೆಯ ನದಿಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ತಡೆಗಟ್ಟುವ ಕುರಿತು ಚಿರ್ಚಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗುರುವಾರ ಬಾಗಲಕೋಟೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿದ ನಿರ್ದೇಶನದ ಮೇರೆಗೆ ಕಾರ್ಯಾಚರಣೆ ಕೈಕೊಂಡು ಬೋಟ್‌ಗಳನ್ನು ಧ್ವಂಸಗೊಳಿಸಲಾಗಿದೆ.ಮೈಗೂರಿನಲ್ಲಿ 5, ಮುತ್ತೂರಿನಲ್ಲಿ 2 ಮತ್ತು ಶಿರಗುಪ್ಪಿ ಗ್ರಾಮದಲ್ಲಿ 4 ಸೇರಿ ಒಟ್ಟು 11 ಬೋಟ್‌ಗಳನ್ನು ಜೆಸಿಬಿ ಸಹಾಯದಿಂದ ಜಜ್ಜಿ ಪುಡಿಮಾಡಿ ಹಾಕಲಾಗಿದೆ. ಬೋಟ್‌ಗಳಿಗೆ ಅಳವಡಿಸಿದ ಮಷಿನ್ ಸಹಿತ ಧ್ವಂಸ ಮಾಡಲಾಗಿದೆ. ಮರಳುಗಾರಿಕೆಗೆ ಬಳಸುತ್ತಿದ್ದ ಪೈಪ್‌ಗಳನ್ನು ಒಡೆದು ಹಾಕಲಾಗಿದೆ.ಕಂದಾಯ ಇಲಾಖೆ, ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆ, ರಸ್ತೆ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಚರಣೆ ಆಯೋಜಿಸಲಾಗಿತ್ತು. ಧ್ವಂಸ ಮಾಡಿದ ಬೋಟ್, ಯಂತ್ರ ಮತ್ತು ಪೈಪ್‌ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಈ ಕಾರ್ಯಾಚರಣೆಯು ತಹಸೀಲ್ದಾರ ಡಾ. ಸಿದ್ದು ಹುಲ್ಲೋಳಿ, ಡಿವೈಎಸ್ಪಿ ರವಿ ನಾರಾಯಣ, ಸಿಪಿಐ ಎಂ.ಬಿ. ಅಸೋದೆ, ನಗರ ಠಾಣೆಯ ಪಿಎಸ್‌ಐ ಎಂ.ಎನ್. ಶಿರಹಟ್ಟಿ, ಎಆರ್‌ಟಿಓ ಜಾಧವ, ಭೂವಿಜ್ಞಾನಿ ವಿಶ್ವನಾಥ ನಾಯಕ ಅವರ ಸಮ್ಮುಖದಲ್ಲಿ ನಡೆಯಿತು.ಕಾರ್ಯಾಚರಣೆ ಶನಿವಾರವೂ ಕೂಡ ಮುಂದುವರೆದಿದ್ದು, ತಾಲ್ಲೂಕಿನ ತಮದಡ್ಡಿ ಮತ್ತು ಹಳಿಂಗಳಿ ಹತ್ತಿರ ಕೃಷ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಬೋಟ್‌ಗಳನ್ನು ಧ್ವಂಸ ಮಾಡಲಾಗುತ್ತಿದೆ. ನಂತರ ಈ ಕಾರ್ಯಾಚರಣೆ ಜಂಬಗಿ ಬಿಕೆ ಗ್ರಾಮದ ವರೆಗೂ ವಿಸ್ತರಣೆಯಾಗಲಿದೆ.ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದಿಂದ ತಮದಡ್ಡಿ ಗ್ರಾಮದ ವರೆಗೆ ಕೃಷ್ಣಾ ನದಿ ತೀರದ ಬಹುತೇಕ ಎಲ್ಲಾ ಗ್ರಾಮಗಳ ಹತ್ತಿರ ನದಿಯಿಂದ ಮರಳು ತೆಗೆಯುವ ಕಾರ್ಯ ರಾಜಾರೋಷವಾಗಿ ಸಾಗುತ್ತಿತ್ತು. ಈ ಕಾರ್ಯಾಚರಣೆಯಲ್ಲಿ ಮರಳು ತುಂಬಿದ ಮೂರು ಲಾರಿ, ಎರಡು ಟ್ರ್ಯಾಕ್ಟರ್ಗಳನ್ನು ವಶಪಡಿಸಿ ಕೊಳ್ಳಲಾಗಿದೆ. 11 ಮಂದಿ ರೈತರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಮಷಿನ್‌ಗಳನ್ನು ಬಳಸಿ ಉಸುಕು ತೆಗೆಯಲಾಗುತ್ತಿತ್ತು. ಇಲ್ಲಿಂದ ತೆಗೆದ ಮರಳನ್ನು ನೆರೆ ರಾಜ್ಯವಾದ ಮಹಾರಾಷ್ಟ್ರಕ್ಕೂ ಸಹ ಸಾಗಿಸಲಾಗುತ್ತಿತ್ತು. ಆದರೆ ಮರಳು ಎತ್ತುವ ಕ್ರಿಯೆಯಿಂದಾಗಿ ನೀರು ಕಲುಷಿತಗೊಂಡು ಕುಡಿಯಲು ಅಯೋಗ್ಯವಾಗುತ್ತಿತ್ತು ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತುತ್ತು ಎನ್ನಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.