ಶನಿವಾರ, ಆಗಸ್ಟ್ 24, 2019
23 °C
ರಾಷ್ಟ್ರೀಯ ಹಸಿರು ಪೀಠ ಆದೇಶ: ಇಡೀ ದೇಶಕ್ಕೆ ಅನ್ವಯ

ಅಕ್ರಮ ಮರಳು ಗಣಿಗಾರಿಕೆ ನಿಷೇಧ

Published:
Updated:
ಅಕ್ರಮ ಮರಳು ಗಣಿಗಾರಿಕೆ ನಿಷೇಧ

ನವದೆಹಲಿ (ಪಿಟಿಐ): ಪರಿಸರ ಇಲಾಖೆಯ ನಿರಾಕ್ಷೇಪಣೆ (ಎನ್‌ಒಸಿ) ಪತ್ರ ಅಥವಾ ಲೈಸೆನ್ಸ್ ಇಲ್ಲದೇ ನಡೆಸುವ ಮರಳು ಗಣಿಗಾರಿಕೆ ಹಾಗೂ ಸಾಗಣೆ  ನಿರ್ಬಂಧಿಸಿ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಸೋಮವಾರ ಮಹತ್ವದ ಆದೇಶ ನೀಡಿದೆ. ಎಲ್ಲ ರಾಜ್ಯಗಳ ಅಧಿಕಾರಿಗಳೂ ಈ ನಿರ್ದೇಶನವನ್ನು ಪಾಲಿಸಲು ಕ್ರಮ ಕೈಗೊಳ್ಳುವಂತೆ ನ್ಯಾಯಪೀಠ ತಾಕೀತು ಮಾಡಿದೆ.ಉತ್ತರ ಪ್ರದೇಶದಲ್ಲಿ ಸರ್ಕಾರದ ನೆರವಿನೊಂದಿಗೆ ಮರಳು ಸಾಗಣೆ ನಡೆಯುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ಹಸಿರು ಪೀಠ ವಕೀಲರ ಸಂಘವು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವತಂತ್ರಕುಮಾರ್ ಅಧ್ಯಕ್ಷತೆಯ ಪೀಠ ಈ ನಿರ್ದೇಶನ ಜಾರಿ ಮಾಡಿತು.ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದವರ ವಿರುದ್ಧ ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕಾನೂನುಕ್ರಮ ಜರುಗಿಸುತ್ತಿಲ್ಲ. ಇದು ಪರಿಸರ ಹಾಗೂ ಇತರ ಕಾಯ್ದೆಗಳ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ವಕೀಲರ ಸಂಘದ ಪರವಾಗಿ ಹಿರಿಯ ವಕೀಲ ರಾಜ್ ಪಂಜ್ವಾನಿ ಹಾಗೂ ರಿತ್ವಿಕ್ ದತ್ತಾ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಹಿಂದಿರುವ ಕಳಕಳಿ  ಗ್ರಹಿಸಿದ ನ್ಯಾಯಮೂರ್ತಿಗಳು, ಮರಳು ಸಾಗಣೆಯು ಪರಿಸರ ಸಂಬಂಧಿ ಸಮಸ್ಯೆ ಸೃಷ್ಟಿಸುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆಯುವ ಈ ಅಕ್ರಮಕ್ಕೆ  ಈ ಆದೇಶ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದರು.ರಾಷ್ಟ್ರವ್ಯಾಪಿ ವಿಸ್ತರಣೆ: ಯಮುನಾ, ಗಂಗಾ, ಚಂಬಲ್, ಗೋಮತಿ ಮತ್ತಿತರ ನದಿ ಪಾತ್ರಗಳಲ್ಲಿ ಮರಳು ಸಾಗಣೆ ನಿರ್ಬಂಧಿಸಿ ಮೊದಲು ಹೊರಡಿಸಿದ್ದ ಆದೇಶವನ್ನು ನ್ಯಾಯಪೀಠ ಪರಿಷ್ಕರಿಸಿ, ರಾಷ್ಟ್ರವ್ಯಾಪಿ ಅನ್ವಯವಾಗುವಂತೆ ನಿರ್ದೇಶನ ನೀಡಿತು. ತನ್ನ ಆದೇಶ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠವು ಎಲ್ಲ ರಾಜ್ಯಗಳ ಗಣಿ ಅಧಿಕಾರಿಗಳು ಹಾಗೂ ಪೊಲೀಸರಿಗೆ ಸೂಚಿಸಿತು. ಈ ಸಂಬಂಧ ಆ. 14ರೊಳಗೆ ತಮ್ಮ ಪ್ರತಿಕ್ರಿಯೆ ನೀಡುವಂತೆಯೂ ಎಲ್ಲ ಪ್ರತಿವಾದಿಗಳಿಗೆ ಸೂಚಿಸಿತು.ವ್ಯವಸ್ಥೆಯ ಬಲಿಪಶು: ಅಮಾನತುಗೊಂಡಿರುವ ಉತ್ತರ ಪ್ರದೇಶದ ಐಎಎಸ್ ಅಧಿಕಾರಿ ದುರ್ಗಾ ಶಕ್ತಿ ನಾಗಪಾಲ್ ಅವರೂ ಸೇರಿದಂತೆ ಮರಳು ಗಣಿಗಾರಿಕೆ ವಿರೋಧಿಸಿದ ಎಲ್ಲ ಅಧಿಕಾರಿಗಳು ಈ ವ್ಯವಸ್ಥೆಗೆ ಬಲಿಪಶುಗಳಾಗಿದ್ದಾರೆ. `ಪ್ರಬಲ ಮರಳು ಮಾಫಿಯಾ'ದ ವಿರುದ್ಧ ದನಿಯೆತ್ತಿದ ವ್ಯಕ್ತಿಯೊಬ್ಬನನ್ನು ಅವನ ನಿವಾಸದಲ್ಲೇ ಕೆಲವು ಗೂಂಡಾಗಳು ಕೆಲ ದಿನಗಳ ಹಿಂದೆ ಹಾಡಹಗಲೇ ಹತ್ಯೆ ಮಾಡಿದ್ದರು ಎಂದು ಅರ್ಜಿದಾರರು ಆರೋಪಿಸಿದ್ದರು.ಅಕ್ರಮವಾಗಿ ಮರಳು ತೆಗೆದು ಸಾಗಣೆ ಮಾಡಲಾಗುತ್ತಿದ್ದು, ಪ್ರತಿ ವರ್ಷ ಸರ್ಕಾರದ ಬೊಕ್ಕಸಕ್ಕೆ ಅಪಾರ ವರಮಾನ ನಷ್ಟವಾಗುತ್ತಿದೆ. ಇದರ ಜತೆಗೆ ಪರಿಸರ ಹಾಗೂ ಜೀವಸಂಕುಲವನ್ನೂ ಬಾಧಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.ಐದು ಹೆಕ್ಟೇರ್‌ಗಿಂತ ಕಡಿಮೆ ವ್ಯಾಪ್ತಿಯ ಪ್ರದೇಶದಲ್ಲಿ ಮರಳು ತೆಗೆಯಲು ಪರಿಸರ ಹಾಗೂ ಅರಣ್ಯ ಸಚಿವಾಲಯ ಅಥವಾ ರಾಜ್ಯ ಪರಿಸರ ಪರಿಣಾಮ ಅಧ್ಯಯನ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕು ಎಂದು ಸುಪ್ರೀಂಕೋರ್ಟ್ ಈಗಾಗಲೇ ತಾಕೀತು ಮಾಡಿದೆ.

Post Comments (+)