ಅಕ್ರಮ ಮರಳು ಗಣಿಗಾರಿಕೆ: ಪ್ರತಿಭಟನೆ

ಸೋಮವಾರ, ಜೂಲೈ 22, 2019
24 °C

ಅಕ್ರಮ ಮರಳು ಗಣಿಗಾರಿಕೆ: ಪ್ರತಿಭಟನೆ

Published:
Updated:

ಇಂಡಿ: ತಾಲ್ಲೂಕಿನ ಬರಗುಡಿ, ಪಡನೂರ ಗ್ರಾಮಗಳ ಸಮೀಪದ ಭೀಮಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿರುವುದನ್ನು ತಡೆಯಬೇಕು ಎಂದು ಒತ್ತಾಯಿಸಿ ಎರಡೂ  ಗ್ರಾಮಗಳ  ರೈತರು ಹಾಗೂ ಜೆಡಿಎಸ್ ಕಾರ್ಯಕರ್ತರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭವಾದ ಮೆರವಣಿಗೆ ಟಿಪ್ರು ಸುಲ್ತಾನ್ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಕಚೇರಿ ರಸ್ತೆ ಮಾರ್ಗವಾಗಿ ಉಪ ವಿಭಾಗಾಧಿಕಾರಿಗಳ ಕಚೇರಿ ತಲುಪಿತು.ಜೆಡಿಎಸ್ ತಾಲ್ಲೂಕು ಘಟಕದ ಉಪಾಧ್ಯಕ್ಷ  ಶ್ರೆಪತಿಗೌಡ ಬಿರಾದಾರ ಮತ್ತು  ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಡಿ.ಪಾಟೀಲರ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿ ಡಾ, ಎಚ್. ಬಿ.ಬೂದೆಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಅಕ್ರಮ ಮರಳು ಗಣಿಗಾರಿಕೆ ಹೆಚ್ಚಾಗಿದೆ. ಮರಳು ತುಂಬಿದ ವಾಹನಗಳು ಬೇಕಾಬಿಟ್ಟಿಯಾಗಿ ಓಡಾಡುತ್ತಿರುವುದರಿಂದ ಪ್ರಮುಖ ರಸ್ತೆಗಳು ಹಾಳಾಗಿವೆ. ವಿದ್ಯಾರ್ಥಿಗಳು, ವೃದ್ಧರು ರಸ್ತೆಗಳಲ್ಲಿ ಸಂಚರಿಸುವುದು ಕಷ್ಟವಾಗಿದೆ ಎಂದು ಶ್ರೆಪತಿಗೌಡ ಬಿರಾದಾರ ದೂರಿದರು.ಭೀಮಾ ನದಿಯಲ್ಲಿ ಸುಮಾರು 20 ರಿಂದ 30 ಅಡಿ ಆಳ ಅಗೆದು ಮರಳು ಹೊರತೆಗೆಯಲಾಗುತ್ತಿದೆ. ಇದರಿಂದ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಬಾಂದಾರಗಳಿಗೆ, ಶಿವಲಿಂಗೇಶ್ವರ, ಗಡ್ಡಿಲಿಂಗೇಶ್ವರ ದೇವಸ್ಥಾನಗಳಿಗೆ ಅಪಾಯ    ಉಂಟಾಗುತ್ತಿದೆ.   ಆಳವಾಗಿ ತೋಡಿ ಮರಳು ತೆಗೆಯುವುದರಿಂದ ನದಿಯ ದಂಡೆಯ ಮೇಲಿರುವ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ ಎಂದು ಹೇಳಿದರು.ಮರಳು ಮಾಫಿಯಾದಲ್ಲಿ ರಾಜಕೀಯ ಮುಖಂಡರ ಕೈವಾಡವಿದೆ. ಕೆಲವು  ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಕೆಲವು ಅಧಿಕಾರಿಗಳು ಮರಳು ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿದ ಉಪ ಕಂದಾಯ ವಿಭಾಗಾಧಿಕಾರಿ ಡಾ.ಎಚ್.ಬಿ. ಬೂದೆಪ್ಪ ಮಾತನಾಡಿ, ಅಕ್ರಮ ಮರಳು ಮಾಫಿಯಾದ ಬಗ್ಗೆ ಸಾಕಷ್ಟು ತಕರಾರು ಅರ್ಜಿಗಳು ಬಂದಿವೆ. ಅದರ ಬಗ್ಗೆ ಹೆಚ್ಚಿನ ಗಮನ ನೀಡಿ ಅಕ್ರಮವಾಗಿ ಮರಳು ಮಾಫಿಯಾ ನಡೆಯದಂತೆ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.ಮಾಜಿ ಪುರಸಭೆಯ ಅಧ್ಯಕ್ಷ ಯಮುನಾಜಿ ಸಾಳುಂಕೆ, ಶ್ರೆಶೈಲಗೌಡ ಪಾಟೀಲ, ಸಿದ್ದು ಡಂಗಾ, ಮಲ್ಲನಗೌಡ ವಾಲೀಕಾರ, ಮಹಿಬೂಬ ಬೇನೂರ, ಇಸಾಕ್ ಸೌದಾಗರ, ಮದಪ್ಪಗೌಡ ಪಾಟೀಲ, ಸೋಮನಿಂಗ ಮಣ್ಣೂರ, ಸುರೇಶ ಗಿರಣಿವಡ್ಡರ, ತಮ್ಮನಗೌಡ ಪಾಟೀಲ, ಶರಣಪ್ಪ ಕುಂಬಾರ, ಸಿದ್ಧಲಿಂಗ ವಾಲೀಕಾರ, ಗುರುಪ್ಪಗೌಡ ಬಿರಾದಾರ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry