ಅಕ್ರಮ ಮರಳು ದಂಧೆ: ಇಬ್ಬರ ಬಂಧನ

7

ಅಕ್ರಮ ಮರಳು ದಂಧೆ: ಇಬ್ಬರ ಬಂಧನ

Published:
Updated:

ತಿ.ನರಸೀಪುರ: ತಾಲ್ಲೂಕಿನ ತಿರುಮಕೂಡಲು ಹಾಗೂ ಸೋಸಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆಯ ಮೇಲೆ ತಹಶೀಲ್ದಾರ್ ವಿ.ಆರ್.ಶೈಲಜಾ ಅವರ ನೇತೃತ್ವದಲ್ಲಿ ಬುಧವಾರ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ, ಕೊಪ್ಪರಿಕೆಗಳನ್ನು ವಶಪಡಿಸಿಕೊಂಡರು. ಪಟ್ಟಣಕ್ಕೆ ಹೊಂದಿಕೊಂಡಂತಿರುವ ಕಾವೇರಿ ಮತ್ತು ಕಪಿಲಾ ನದಿ ಸೇತುವೆಗಳ ಕೆಳಗೆ ಕೊಪ್ಪರಿಗೆಗಳ ಮೂಲಕ ಪ್ರತಿನಿತ್ಯ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿತ್ತು. ಅಕ್ರಮ ಮರಳು ದಂಧೆಯನ್ನು ತಡೆಗಟ್ಟಲು ತಹಶೀಲ್ದಾರ್ ವಿ.ಆರ್.ಶೈಲಜಾ ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಿ.ಜಗದೀಶ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಬುಧವಾರ ದಾಳಿ ನಡೆಸಿದರು.ಅಕ್ರಮ ಮರಳು ಸಾಗಾಣಿಕೆ ದಂಧೆಯ ವಿರುದ್ಧ ಹಳೇತಿರುಮಕೂಡಲಿನ ಕಾವೇರಿ ನದಿ ಸೇತುವೆಯಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದ್ದಂತೆ ನದಿಯಲ್ಲಿ ಮರಳು ತುಂಬುತ್ತಿದ್ದ ನೂರಾರು ಕೊಪ್ಪರಿಕೆಗಳನ್ನು ಮರಳು ಕೂಲಿ ಕಾರ್ಮಿಕರು ನೀರಲ್ಲಿ ಮುಳುಗಿಸಿಟ್ಟು ಈಜಿ ದಡ ಸೇರಿ ತಪ್ಪಿಸಿಕೊಂಡರೆ, ಇಬ್ಬರು ಸಿಕ್ಕಿ ಬಿದ್ದರು. ಕೆಲವರು ಸೋಸಲೆಯಲ್ಲಿ ನಡೆಯುತ್ತಿರುವ ಮರಳು ದಂಧೆಯ ಕಡೆಗೆ ಕೊಪ್ಪರಿಕೆಗಳನ್ನು ಕೊಂಡೊಯ್ದರು. ಇದನ್ನು ಕಂಡ ತಹಶೀಲ್ದಾರ್ ಮತ್ತು ಪೊಲೀಸರು ದೋಣಿಯ ಮೂಲಕ ಅಲ್ಲಿಗೆ ತೆರಳಿ ಪರಿಶೀಲಿಸಿದಾಗ ಅಕ್ರಮ ಮರಳು ದಂಧೆಗೆ ಬಳಸುವ ನೂರಕ್ಕೂ ಹೆಚ್ಚು ಕೊಪ್ಪರಿಕೆಗಳು ನದಿ ತೀರದಲ್ಲಿದ್ದವು.ಕೂಲಿ ಕಾರ್ಮಿಕರಿಂದ ಅಡ್ಡಿ;ಸೋಸಲೆಯಲ್ಲಿ ಜೀವನ ನಿರ್ವಹಣೆಗಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದೇವೆ ಎಂದು ನೂರಾರು ಮರಳು ಕೂಲಿ ಕಾರ್ಮಿಕರು ಅಧಿಕಾರಿಗಳ ದಾಳಿಗೆ ಅಡ್ಡಿಪಡಿಸಿ ಕೊಪ್ಪರಿಕೆಗಳನ್ನು ನಾಶಪಡಿಸಲು ತೆರಳುತ್ತಿದ್ದ ಇಟಾಚಿಗೆ ಅಡ್ಡ ಕುಳಿತು ಪ್ರತಿಭಟನೆ ನಡೆಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಪರಶಿವಮೂರ್ತಿ, ಮರಳು ಕೂಲಿ ಕಾರ್ಮಿಕರ ಸಂಘದ ಮರಿಸ್ವಾಮಿ ಇನ್ನಿತರರು ತಹಶೀಲ್ದಾರ ಅವರ ಕಾರ್ಯಾಚರಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ದೂರವಾಣಿ ಕರೆ ಬಂತು;ಸೋಸಲೆಯಲ್ಲಿ ಅಕ್ರಮ ಮರಳು ದಂಧೆಯ ಮೇಲೆ ಕಾರ್ಯಾಚರಣೆ ನಡೆಸುತ್ತಿದ್ದ ತಹಶೀಲ್ದಾರ್ ವಿ.ಆರ್.ಶೈಲಜಾ ಅವರಿಗೆ ಮೊಬೈಲ್ ದೂರವಾಣಿ ಕರೆಯೊಂದು ಬಂದಿತು. ಕೊಪ್ಪರಿಗೆಯನ್ನು ನಾಶಪಡಿಸಿ ವಶಪಡಿಸಿಕೊಳ್ಳಲು ಸಿದ್ಧವಿದ್ದವರು ಮೃದು ಧೋರಣೆ ಪ್ರದರ್ಶಿಸಿ ಕೊಪ್ಪರಿಗೆಗಳೆಲ್ಲವನ್ನೂ ಮನೆಗೆ ತೆಗೆದುಕೊಂಡು ಹೋಗುವಂತೆ ತಾಕೀತು ಮಾಡಿದರು. ಸರ್ಕಾರಿ ರಜಾ ದಿನವಾಗಿದ್ದರೂ ಬುಧವಾರ ಅಕ್ರಮ ಮರಳು ದಂಧೆ ವಿರುದ್ಧ ಉತ್ಸುಕತೆಯಿಂದ ಕಾರ್ಯಾಚರಣೆ ನಡೆಸಿದ ತಹಶೀಲ್ದಾರರಿಗೆ ಒತ್ತಡದ ದೂರವಾಣಿ ಕರೆ ನಿರಾಸೆಯನ್ನುಂಟು ಮಾಡಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry