ಬುಧವಾರ, ಏಪ್ರಿಲ್ 14, 2021
31 °C

ಅಕ್ರಮ ವಿಚಾರಣೆಗೆ ವಿಶೇಷ ನ್ಯಾಯಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ:  ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಗಣಿಗಾರಿಕೆ ಹೆಸರಿನಲ್ಲಿ ಅಕ್ರಮ ಲಾಭ ಮಾಡಿಕೊಂಡಿರುವವರ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.ಇಲ್ಲಿನ ಕಾಂಗ್ರೆಸ್ ಸೋಮವಾರ ಏರ್ಪಡಿಸಿದ್ದ `ಕಾಂಗ್ರೆಸ್‌ಗೆ ಬನ್ನಿ, ಬದಲಾವಣೆ ತನ್ನಿ~ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಕಳೆದ ನಾಲ್ಕು ವರ್ಷಗಳಲ್ಲಿ ಮಾಡಿರುವ ಪಾಪವನ್ನು ತೊಳೆಯಲು ಕನಿಷ್ಠ ಹತ್ತು ವರ್ಷ ಕಾಲಾವಕಾಶ ಬೇಕು ಎಂದು ಟೀಕಿಸಿದರು.ರಾಜಕಾರಣ ಮಾಡಲು ಹಣ ಬೇಕು ನಿಜ. ಆದರೆ, ಬಿಜೆಪಿಯವರು ಹಣ ಮಾಡಲೆಂದೆ ರಾಜಕಾರಣ ಮಾಡುತ್ತಿದ್ದಾರೆ. 60 ವರ್ಷಗಳಲ್ಲಿ ದೇಶದ ಯಾರೂ ಮಾಡದಷ್ಟು ದುಡ್ಡನ್ನು ರಾಜ್ಯದ ಬಿಜೆಪಿ ಮುಖಂಡರು ಮಾಡಿಕೊಂಡಿದ್ದಾರೆ. ಹಣದ ಹಿಂದೆ ಹೋಗಿ ಅವರು ಜನರಿಂದ ದೂರವಾಗಿದ್ದಾರೆ ಎಂದು ಲೇವಡಿ ಮಾಡಿದರು. ನಾಟಿ ಕೋಳಿ

ಸಿ.ಎಂ. ಇಬ್ರಾಹಿಂ ಅವರ ಭಾಷಣ ಎಂದರೆ ಅಲ್ಲಿ ಮೊನಚು ಹಾಸ್ಯ, ತೀಕ್ಷ್ಣ ವ್ಯಂಗ್ಯ, ನಡುವೆ ವಚನ, ಸಂಸ್ಕೃತ ಶ್ಲೋಕ ಇರಲೇಬೇಕು.  ಸಭೆಯಲ್ಲೂ ಇಂತಹ ಅನೇಕ ಹಾಸ್ಯದ ಚುಟುಕುಗಳೊಂದಿಗೆ ಇಬ್ರಾಹಿಂ ಪ್ರಸ್ತುತ ರಾಜಕಾರಣವನ್ನು ಅವಲೋಕಿಸಿದರು.ಕಾಗೋಡು ತಿಮ್ಮಪ್ಪ ಅವರನ್ನು `ನಾಟಿ ಕೋಳಿ~ಗೆ ಹೋಲಿಸಿದ ಅವರು, ಇಂದಿನ ರಾಜಕಾರಣದಲ್ಲಿ ಎಲ್ಲಿ ನೋಡಿದರೂ ಹೈಬ್ರಿಡ್ ಕೋಳಿಗಳದ್ದೆ ಕಾರುಬಾರು. ಆ ಕೋಳಿಗಳಿಗೆ ನೂರಾರು ಕಾಯಿಲೆಗಳು. ಇವು ರೆಸಾರ್ಟ್‌ನಲ್ಲೇ ಹೆಚ್ಚು ಕಾಣುತ್ತವೆ ಎಂದು ಟೀಕಿಸಿದರು.ತೀರ್ಥಹಳ್ಳಿ ಕ್ಷೇತ್ರದ ಶಾಸಕ ಕಿಮ್ಮನೆ ರತ್ನಾಕರ ಮಾತನಾಡಿ, ಎಲ್ಲಾ ಜಾತಿ ಧರ್ಮಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಶಕ್ತಿ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ಹೇಳಿದರು.ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ಮುಖಂಡ ಶಾಂತಾರಾಮ್ ಹೆಗಡೆ ಮಾತನಾಡಿ, ್ಙ 25 ಸಾವಿರ ವರೆಗಿನ ರೈತರ ಸಾಲ ಮನ್ನಾ ಮಾಡಲಾಗುವುದು ಎಂಬ ರಾಜ್ಯ ಸರ್ಕಾರದ ಯೋಜನೆ ಬೋಗಸ್ ಆಗಿದೆ. ರೈತರ ಮೂಗಿನ ಮೇಲೆ ಈಗಿನ ಸರ್ಕಾರ ತುಪ್ಪ ಹಚ್ಚಿದೆಯಷ್ಟೆ ಎಂದರು.ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಸಾಗರ ಕ್ಷೇತ್ರದ ಶಾಸಕರು ತಮ್ಮ ಜವಾಬ್ಧಾರಿ ಮರೆತು ಹಣ ಮಾಡುವುದರಲ್ಲಿ ನಿರತರಾಗಿರುವುದರಿಂದ ತಾಲ್ಲೂಕಿನ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ ಎಂದು ದೂರಿದರು.ಇದೇ ಸಂದರ್ಭದಲ್ಲಿ ಜೆಡಿಎಸ್‌ನ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾದರು.ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಘಟಕದ ಮುಖಂಡ ಭೀಮಾನಾಯ್ಕ, ಕಾಂಗ್ರೆಸ್ ಮುಖಂಡರಾದ ಮಹಿಮ ಪಟೇಲ್, ಪ್ರಫುಲ್ಲಾ ಮಧುಕರ್, ಅಬ್ದುಲ್ ಗಫೂರ್, ಅಹಮದ್ ಅಲಿಖಾನ್, ಎಂ.ಎ. ಸಲೀಂ, ಹೊಳಿಯಪ್ಪ, ಮಕ್ಬುಲ್ ಅಹಮದ್, ಐ.ಎನ್. ಸುರೇಶ್‌ಬಾಬು, ಲಲಿತಾ ನಾರಾಯಣ್, ಸುಮಂಗಲಾ ರಾಮಕೃಷ್ಣ, ಮಹಾಬಲೇಶ್ವರ ಕುಗ್ವೆ, ಗೌರಮ್ಮ, ಮಲ್ಲಿಕಾರ್ಜುನ ಹಕ್ರೆ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.