ಅಕ್ರಮ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಸೂಚನೆ

7

ಅಕ್ರಮ ಸಂಸ್ಥೆಗಳ ವಿರುದ್ಧ ಕ್ರಮಕ್ಕೆ ಸೂಚನೆ

Published:
Updated:

ಶಿವಮೊಗ್ಗ: ಜಿಲ್ಲೆಯಲ್ಲಿ ನೋಂದಣಿಗೊಂಡ ಖಾಸಗಿ ವೈದ್ಯಕೀಯ ಸಂಸ್ಥೆಗಳು 94 ಮಾತ್ರ! ಇದನ್ನು ಸ್ವತಃ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಬಹಿರಂಗಪಡಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಗ್ರಾಮೀಣಆರೋಗ್ಯ ಮಿಷನ್ ಅಡಿ ಮಾಸಿಕ ಪ್ರಗತಿ ಪರಿಶೀಲನೆಯಲ್ಲಿ ಅವರುಮಾತನಾಡಿದರು.ಜಿಲ್ಲೆಯಲ್ಲಿ ನೋಂದಣಿಗೆ ಒಟ್ಟು 594 ಖಾಸಗಿ ವೈದ್ಯಕೀಯ ಸಂಸ್ಥೆಗಳು ಅರ್ಜಿ ಸಲ್ಲಿಸಿವೆ. ಇದರಲ್ಲಿ 441 ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ ಅಡಿ ಕೇವಲ 94 ಸಂಸ್ಥೆಗಳು ನೋಂದಣಿಯಾಗಿವೆ. ಉಳಿದಂತೆ ಅರ್ಜಿ ಸಲ್ಲಿಸದೇ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳ ಪಟ್ಟಿಯನ್ನು ತಯಾರಿಸಿ, ಅವುಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚನ್ನಬಸಪ್ಪ ಅವರಿಗೆ ಸೂಚಿಸಿದರು.ಜಿಲ್ಲೆಯಲ್ಲಿ ಆಯುಷ್ ಮಂಡಳಿಯಡಿ ದೃಢೀಕೃತ ಪ್ರಮಾಣ ಪತ್ರ ಹೊಂದದೆ ಕಾರ್ಯ ನಿರ್ವಹಿಸುತ್ತಿರುವ ಹಾಗೂ ಆಯುಷ್ ಪದ್ಧತಿ ಜತೆಗೆ, ಅಲೋಪತಿ ಪದ್ಧತಿ ಅನುಸರಿಸುತ್ತಿರುವ ಆಯುಷ್ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದರು.ಭ್ರೂಣಲಿಂಗ ಪತ್ತೆ ತಡೆಗೆ ಸೂಚನೆ: ಭ್ರೂಣಲಿಂಗ ಪತ್ತೆ ತಡೆ ಕಾಯ್ದೆ ಕುರಿತು ಮಾಹಿತಿ ಪಡೆದು, ಭ್ರೂಣಲಿಂಗ ಪತ್ತೆ ತಡೆ ಜಿಲ್ಲಾ ಸಮಿತಿ, ಇನ್ನು ಹೆಚ್ಚು ಸಕ್ರಿಯಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.ಸಮಿತಿಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸೇರದ ಇತರೆ ಸದಸ್ಯರನ್ನು ಸೇರಿಸಿಕೊಂಡು ಅವರಿಗೆ ಕಾಯ್ದೆ ಕುರಿತ ಸಂಪೂರ್ಣ ತರಬೇತಿ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟ ಅವರು, ಮುಂದಿನ ಸಭೆಯಲ್ಲಿ ಸಮಿತಿ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದರು.ಪ್ರಸಕ್ತ ತಿಂಗಳಲ್ಲಿ ಭದ್ರಾವತಿ ಹಾಗೂ ಸಾಗರ ತಾಲ್ಲೂಕುಗಳಲ್ಲಿ ಕ್ರಮವಾಗಿ 870 ಹಾಗೂ 866 ಲಿಂಗಾನುಪಾತ (0-6ವರ್ಷಗಳು) ದಾಖಲಾಗಿದ್ದು, ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.27ಕ್ಕೆ ಪಲ್ಸ್ ಪೋಲಿಯೊ: ಜಿಲ್ಲೆಯಲ್ಲಿ ಮೊದಲನೇ ಸುತ್ತಿನ ಪಲ್ಸ್ ಪೋಲಿಯೊ ಲಸಿಕೆ ನೀಡುವ ಕಾರ್ಯವು ಎಲ್ಲಾ ಇಲಾಖೆಗಳ ಸಹಭಾಗಿತ್ವದಿಂದ ಉತ್ತಮವಾಗಿ ಜರುಗಿದ್ದು, ಫೆ. 27ರಂದು ಎರಡನೇ ಸುತ್ತಿನ ಕಾರ್ಯವನ್ನು ಜಿಲ್ಲೆಯ ಎಲ್ಲಾ ಇಲಾಖೆಗಳು ಒಗ್ಗಟ್ಟಿನಿಂದ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಕರೆನೀಡಿದರು. ಮೊದಲನೇ ಹಂತದ ಕಾರ್ಯದಲ್ಲಿ ಜಿಲ್ಲೆ ಶೇ. 98.9ರಷ್ಟು ಯಶಸ್ಸು ಕಂಡಿದ್ದು, ನಗರ ಪ್ರದೇಶದಲ್ಲಿ ಶೇ. 99.2ರಷ್ಟು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶೇ. 98.8ರಷ್ಟು ಲಸಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ಡಾ.ಚನ್ನಬಸಪ್ಪ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಜಿ.ಪಂ. ಉಪಕಾರ್ಯದರ್ಶಿ ರಾಜಗೋಪಾಲ್, ರಾಷ್ಟ್ರೀಯ ಪಲ್ಸ್ ಪೋಲಿಯೋ ಜಿಲ್ಲಾ ಸಮಿತಿ ಉಪಾಧ್ಯಕ್ಷ ಡಾ.ನಾರಾಯಣ್, ರೋಟರಿ ಅಧ್ಯಕ್ಷೆ ಭಾರತಿ ಚಂದ್ರಶೇಖರ್ ವಿವಿಧ ಇಲಾಖಾ ಅಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry