ಅಕ್ರಮ-ಸಕ್ರಮ ಜಾರಿ: ತಿದ್ದುಪಡಿ ಮರುಪರಿಶೀಲನೆಗೆ ಸೂಚನೆ

7

ಅಕ್ರಮ-ಸಕ್ರಮ ಜಾರಿ: ತಿದ್ದುಪಡಿ ಮರುಪರಿಶೀಲನೆಗೆ ಸೂಚನೆ

Published:
Updated:

ಬೆಂಗಳೂರು:  ‘ಅಕ್ರಮ-ಸಕ್ರಮ’ ಯೋಜನೆ ಜಾರಿಗಾಗಿ ಕರ್ನಾಟಕ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆಗೆ ತರಲು ಉದ್ದೇಶಿಸಿರುವ ತಿದ್ದುಪಡಿಗಳ ಬಗ್ಗೆ ಎರಡು ತಿಂಗಳಲ್ಲಿ ಮರು ಪರಿಶೀಲನೆ ನಡೆಸುವಂತೆ ಹೈಕೋರ್ಟ್ ಗುರುವಾರ ರಾಜ್ಯ ಸರ್ಕಾರಕ್ಕೆ ತಿಳಿಸಿದೆ.

2007ರಲ್ಲಿ ರಾಜ್ಯ ಸರ್ಕಾರ ಪ್ರಕಟಿಸಿದ್ದ ಅಕ್ರಮ-ಸಕ್ರಮ ಯೋಜನೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ವಿಭಾಗೀಯ ಪೀಠ, ಉದ್ದೇಶಿತ ಯೋಜನೆಯ ಬಗ್ಗೆ ಮರು ಪರಿಶೀಲನೆ ನಡೆಸಲು ಎರಡು ತಿಂಗಳ ಕಾಲಾವಕಾಶ ನೀಡಿತು.

‘ಅಕ್ರಮ ನಿರ್ಮಾಣಗಳನ್ನು ಸಕ್ರಮಗೊಳಿಸುವುದಕ್ಕಾಗಿ ನಗರಗಳನ್ನು ನಾಶ ಮಾಡಲು ಸಾಧ್ಯವಿಲ್ಲ. ನೀವು ವಿವೇಚನೆಯಿಂದ ನೀತಿ ರೂಪಿಸಬೇಕು ಮತ್ತು ಅದು ಪ್ರಾಯೋಗಿಕವಾಗಿಯೂ ಸರಿ ಇರಬೇಕು. ಮಿತಿ ಇಲ್ಲದೇ ನಿರ್ಧಾರಗಳನ್ನು ಕೈಗೊಳ್ಳುವಂತಿಲ್ಲ. ಅದಕ್ಕಾಗಿ ನಿಮಗೆ ಸಾಕಷ್ಟು ಕಾಲಾವಕಾಶವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2007ರ ಡಿಸೆಂಬರ್ 11ರಂದು ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶ ಆ ಸ್ವಾತಂತ್ರ್ಯವನ್ನು ಸರ್ಕಾರಕ್ಕೆ ನೀಡಿದೆ. ಅದನ್ನು ಬಳಸಿಕೊಂಡು ಉದ್ದೇಶಿತ ನೀತಿ ಬಗ್ಗೆ ಸಮಗ್ರ ಮರುಪರಿಶೀಲನೆ ನಡೆಸಿ’ ಎಂದು ನ್ಯಾ.ಕೇಹರ್  ಸೂಚಿಸಿದರು.

‘ಕರ್ನಾಟಕ ನಗರ ಮತ್ತು ಗ್ರಾಮ ಯೋಜನಾ ಕಾಯ್ದೆಗೆ ಉದ್ದೇಶಿತ ತಿದ್ದುಪಡಿಗಳಿಗೆ 2009ರಲ್ಲೇ ವಿಧಾನಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿವೆ. ಬಳಿಕ ಅದನ್ನು ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿತ್ತು. ಆದರೆ ತಿದ್ದುಪಡಿಗೆ ಒಪ್ಪಿಗೆ ನೀಡಲು ನಿರಾಕರಿಸಿರುವ ರಾಜ್ಯಪಾಲರು, ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ’ ಎಂದು ಸರ್ಕಾರದ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಹಿನ್ನೆಲೆಯಲ್ಲಿ ತಿದ್ದುಪಡಿ ಕುರಿತು ಮರುಪರಿಶೀಲನೆ ನಡೆಸಿ, ನ್ಯಾಯಾಲಯಕ್ಕೆತಿಳಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂಚಿಸಿದರು.ಅಕ್ರಮ-ಸಕ್ರಮ ಯೋಜನೆಯಲ್ಲಿ ಎಲ್ಲ ಬಗೆಯ ಅಕ್ರಮ ನಿರ್ಮಾಣಗಳನ್ನೂ ದಂಡಶುಲ್ಕ ಪಡೆದು ಸಕ್ರಮಗೊಳಿಸುವ ಉದ್ದೇಶವಿದೆ. ಮಿತಿಮೀರಿ ಬೆಳೆದಿರುವ ನಗರಗಳಲ್ಲಿ ಈ ಯೋಜನೆ ಸಮಸ್ಯೆ ಸೃಷ್ಟಿಸಲಿದೆ ಎಂದು ಅರ್ಜಿದಾರರು  ದೂರಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry