ಮಂಗಳವಾರ, ಜೂನ್ 15, 2021
27 °C

ಅಕ್ರಮ ಹಣದಿಂದ ತೃಪ್ತಿ ಸಿಗದು: ಹೆಗ್ಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಅಕ್ರಮ ರೂಪದಲ್ಲಿ ಗಳಿಸಿದ ಹಣದಿಂದ ಎಂದಿಗೂ ತೃಪ್ತಿ ಸಿಗದು. ಸಮಾಜಕ್ಕೆ ರೋಗವಾಗಿ ಅಂಟಿರುವ ಭ್ರಷ್ಟಾಚಾರವನ್ನು ಮುಕ್ತಗೊಳಿಸಬೇಕಾದರೆ ಯುವ ವೃತ್ತಿಪರರು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು~ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಭಾನುವಾರ ಇಲ್ಲಿ ಕರೆ ನೀಡಿದರು.



ಚಿಕಾಗೋದ ಇಲಿನಾಯ್ಸ ತಂತ್ರಜ್ಞಾನ ಸಂಸ್ಥೆಯು ನಗರದ ರಾಷ್ಟ್ರೀಯ ಉನ್ನತ ಅಧ್ಯಯನ ಸಂಸ್ಥೆಯ ಜೆ.ಆರ್.ಡಿ. ಟಾಟಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್, ಕಂಪ್ಯೂಟರ್ ಎಂಜಿನಿಯರಿಂಗ್ ಹಾಗೂ ನೆಟ್‌ವರ್ಕ್ ಎಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ ಹಾಗೂ ನಿರ್ವಹಣೆ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.



`1950ರ ದಶಕದಲ್ಲಿ ನೂರು ರೂಪಾಯಿಗಳ ಭ್ರಷ್ಟಾಚಾರವೇ ದೊಡ್ಡದೆನಿಸಿತ್ತು. ಆದರೆ, ದೇಶದಲ್ಲಿಯೇ ಅತಿ ದೊಡ್ಡ ಹಗರಣ ಎಂದು ಬಿಂಬಿಸಲಾಗುತ್ತಿರುವ `2-ಜಿ~ ಹಗರಣದ ಅವ್ಯವಹಾರದಲ್ಲಿ ಒಂದರ ಮುಂದೆ ಎಷ್ಟು ಸೊನ್ನೆಗಳನ್ನು ಸೇರಿಸುವ ಅಗತ್ಯವಿದೆ ಎಂಬುದನ್ನು ಗಣಿತ ತಜ್ಞರೇ ಬಿಡಿಸಿ ಹೇಳಬೇಕು. ಕಾಮನ್‌ವೆಲ್ತ್ ಗೇಮ್ಸ, ಕರ್ನಾಟಕದಲ್ಲಿನ ಕೃಷ್ಣಾ ಮೇಲ್ದಂಡೆ ಯೋಜನೆ, ಅಕ್ರಮ ಗಣಿಗಾರಿಕೆ ಮತ್ತಿತರ ಹಗರಣಗಳಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಊಹಿಸಲು ಕೂಡ ಕಷ್ಟ~ ಎಂದು ವಿಷಾದಿಸಿದರು.



`ಹೊಸದಾಗಿ ಪದವಿ ಪಡೆದಂತಹ ಪದವೀಧರರು ಸಮಾಜದ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ತಮ್ಮ ಪಾತ್ರವೇನು ಎಂಬುದರ ಬಗ್ಗೆ ಚಿಂತಿಸಬೇಕಾಗಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ~ ಎಂದು ಸಂತೋಷ್ ಹೆಗ್ಡೆ ಕಿವಿಮಾತು ಹೇಳಿದರು.



ಸೇವೆಯಲ್ಲಿ ತೃಪ್ತಿ ಮುಖ್ಯ: `ಯಾವುದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರೂ ಅದರಲ್ಲಿ ತೃಪ್ತಿ ಪಡೆಯುವುದು ಬಹಳ ಮುಖ್ಯ. ಅಕ್ರಮ ಹಣ ಗಳಿಕೆಯಿಂದ ಅಂತಹ ತೃಪ್ತಿ ಸಿಗಲು ಸಾಧ್ಯವೇ ಇಲ್ಲ. ಅಕ್ರಮ ರೂಪದಲ್ಲಿ ಸಂಪಾದಿಸಿದ ಹಣದಿಂದ ದೇವಸ್ಥಾನಗಳಿಗೆ 48 ಕೋಟಿ ರೂಪಾಯಿಗಳ ಚಿನ್ನದ ಕಿರೀಟ ನೀಡಿದವರು ಇಂದು ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ~ ಎಂದು ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಯಾರ ಹೆಸರನ್ನೂ ಪ್ರಸ್ತಾಪಿಸದೆ ಟೀಕಿಸಿದರು.



`ಭಾರತಕ್ಕೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದೆ. ಪೂರ್ವಜರ ಕಾಲದಿಂದಲೂ ಮೌಲ್ಯಗಳಿಗೆ ಒತ್ತು ನೀಡುತ್ತಾ ಬಂದ ನಾವು ಇದೀಗ ಅವುಗಳನ್ನು ಗಾಳಿಗೆ ತೂರುತ್ತಿದ್ದೇವೆ. ಮೌಲ್ಯಯುತ ಸಮಾಜದಿಂದ ಮಾತ್ರ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಸಾಧ್ಯ. ಏನಾದರೂ ಆಗು ಮೊದಲು ಮಾನವನಾಗಬೇಕು ಎಂಬ ಕವಿವಾಣಿಯಂತೆ ನಾವು ಮಾನವೀಯತೆಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು~ ಎಂದು ಕರೆ ನೀಡಿದರು.



ಎಂಸಿಎಫೀ ಸಾಫ್ಟ್‌ವೇರ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಜಯಂತಿ, ರುವಾಂಡದ ರೋಕಾ ಗಣಿ ಕಂಪೆನಿಯ ಸಿಇಒ ಎಮರಿ ರುಬಗೆಂಗ, ಸೈಬರ್ ಇಂಡಿಯಾ ಅಧ್ಯಕ್ಷ ವಿವೇಕ್ ಮಾರ್ಲ, ಇಲಿನಾಯ್ಸ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನ ಕಾಲೇಜಿನ ಡೀನ್ ಡಾ. ರಸೆಲ್ ಬೆಟ್ಸ್, ಸಂಸ್ಥೆಯ ಅಂತರರಾಷ್ಟ್ರೀಯ ವ್ಯವಹಾರಗಳ ಉಪಾಧ್ಯಕ್ಷ ಪ್ರೊ. ದಾರ್ಶ್ ಟಿ. ವಾಸನ್ ಮತ್ತಿತರರು ಮಾತನಾಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.