ಮಂಗಳವಾರ, ಏಪ್ರಿಲ್ 20, 2021
29 °C

ಅಕ್ಷಯ ಪಾತ್ರೆಗೆ ಸಂಗೀತದ ಛತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಪ್ರಿಯ ಗಾಯಕ ಶಂಕರ್ ಮಹಾದೇವನ್ ಜನಾಕರ್ಷಕ ವ್ಯಕ್ತಿಯಾದರೂ ನಿಜ ಜೀವನದ್ಲ್ಲಲಿ ತುಂಬಾ ಸರಳ. ಸ್ವಲ್ಪವೂ ಹಮ್ಮು ಬಿಮ್ಮು ಇಲ್ಲದ ಅವರು ಭಾನುವಾರ ಇಸ್ಕಾನ್ ಫೌಂಡೇಷನ್ ನಡೆಸುತ್ತಿರುವ `ಅಕ್ಷಯ ಪಾತ್ರೆ ಬಿಲಿಯಂತ್ ಮೀಲ್~ ಕಾರ್ಯಕ್ರಮಕ್ಕೆ ಬಂದಿದ್ದರು.

 

ಶಂಕರ್ ಆವತ್ತು ಪಂಚತಾರಾ ಹೋಟೆಲ್‌ನ ಊಟ ಬಿಟ್ಟು ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಸವಿದರು. ಸಾಂಬಾರ್ ತುಂಬಾ ರುಚಿಯಾಗಿದೆ ಅನ್ನುತ್ತಾ ಮತ್ತೊಮ್ಮೆ ಅನ್ನ-ಸಾರು ಬಡಿಸಿಕೊಂಡು ಬಾಯಿ ಚಪ್ಪರಿಸಿದರು.ಸ್ಯಾಂಡಲ್‌ವುಡ್ ಬಗ್ಗೆ ಕೇಳಿದರೆ, ನಂಗೇನೂ ಗೊತ್ತಿಲ್ಲ ಅಂತ ಹುಬ್ಬುಹಾರಿಸಿದರು. ಮತ್ತೇ ನೀವು ಕನ್ನಡದಲ್ಲಿ ಸಾಕಷ್ಟು ಗೀತೆಗಳಿಗೆ ದನಿಯಾಗಿದ್ದೀರಲ್ಲಾ ಅಂದರೆ, `ಓ! ಸಾರಿ, ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಸ್ಯಾಂಡಲ್‌ವುಡ್ ಅನ್ನುತ್ತಾರೆ ಅಂತ ಖಂಡಿತಾ ಗೊತ್ತಿರಲಿಲ್ಲ.ನನಗೆ ಕಾಲಿವುಡ್, ಟಾಲಿವುಡ್ ಗೊತ್ತಿತ್ತು. ಸ್ಯಾಂಡಲ್‌ವುಡ್ ಗೊತ್ತಿರಲಿಲ್ಲ. ಸ್ಯಾಂಡಲ್‌ವುಡ್! ಹೆಸರು ತುಂಬಾ ಚೆನ್ನಾಗಿದೆ~ ಎನ್ನುತ್ತಾ, `ಕನ್ನಡ ನಂಗೆ ತುಂಬಾ ಕಂಫರ್ಟಬಲ್ ಭಾಷೆ. ಸಾಕಷ್ಟು ಚಲನಚಿತ್ರ ಗೀತೆಗಳನ್ನು ಹಾಡಿದ್ದೇನೆ~ ಎಂದು ನಕ್ಕರು.ಅಂದಹಾಗೆ, `ಅಕ್ಷಯ ಪಾತ್ರೆಯ ಬಿಲಿಯಂತ್ ಮೀಲ್~ ಸಂಭ್ರಮಾಚರಣೆಯ ಸವಿನೆನಪಿಗಾಗಿ ಶಂಕರ್ ಮಹಾದೇವನ್ ಮತ್ತು ಜಾವೆದ್ ಅಖ್ತರ್ ಸೇರಿ ಟ್ರ್ಯಾಕ್ ಒಂದನ್ನು ಸಿದ್ಧಪಡಿಸಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಮಾತಿಗೆ ಸಿಕ್ಕ ಶಂಕರ್ ಅವರನ್ನು ಕೇಳಿದ ಪ್ರಶ್ನೆಗಳಿಗೆ ಸಿಕ್ಕ ಉತ್ತರಗಳಿವು...`ಅಕ್ಷಯ ಪಾತ್ರೆ~ಯೊಂದಿಗೆ ಕೈ ಜೋಡಿಸಲು ಕಾರಣ?

ನನ್ನ ಜೀವನದ ಅತಿ ದೊಡ್ಡ ಕನಸಿದು. ಸಂಗೀತದಷ್ಟೇ ನನ್ನನ್ನು ಬಹುವಾಗಿ ಕಾಡಿದ್ದು ಅಕ್ಷಯ ಪಾತ್ರೆ. ಮಕ್ಕಳ ಬದುಕಿಗೆ ಅತ್ಯವಶ್ಯಕವಾಗಿ ಬೇಕಾದ ಆಹಾರ ಮತ್ತು ಶಿಕ್ಷಣವನ್ನು ನೀಡುವ ಈ ಕಾರ್ಯಕ್ರಮ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಯ್ತು.ಬಹುಕಾಲದಿಂದ ನನ್ನ ಮನಸ್ಸಿನಲ್ಲಿ ಸಮಾಜಕ್ಕೆ ಏನನ್ನಾದರೂ ನೀಡಬೇಕು ಎಂಬ ತುಡಿತ ಕಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ಇಸ್ಕಾನ್ ನನ್ನನ್ನು ಸಂಪರ್ಕಿಸಿ, ಅಕ್ಷಯ ಪಾತ್ರೆ ಬಿಲಿಯಂತ್ ಮೀಲ್ ಕಾರ್ಯಕ್ರಮಕ್ಕೆ ರಾಯಭಾರಿಯಾಗುವಂತೆ ಕೇಳಿಕೊಂಡರು. ಖುಷಿಯಿಂದ ಒಪ್ಪಿಕೊಂಡೆ. ಏನಿದು `ಮ್ಯೂಸಿಕ್ ಫಾರ್ ಹಂಗರ್~ ಪರಿಕಲ್ಪನೆ?

ಈಗಾಗಲೇ ಒಂಬತ್ತು ರಾಜ್ಯಗಳಲ್ಲಿ ತನ್ನ ಹರವು ವಿಸ್ತರಿಸಿಕೊಂಡಿರುವ ಮಧ್ಯಾಹ್ನ ಊಟದ ಯೋಜನೆ ಅಕ್ಷಯ ಪಾತ್ರೆ 2020ರ ವೇಳೆಗೆ 50 ಲಕ್ಷ ಮಕ್ಕಳನ್ನು ತಲುಪುವ ಗುರಿ ಹೊಂದಿದೆ. `ಹಸಿವು ಮುಕ್ತ ಭಾರತ~ ಈ ಪರಿಕಲ್ಪನೆಯ ಹಿಂದಿನ ಉದ್ದೇಶ. ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಫೌಂಡೇಷನ್ ಹಲವು ಮಾಧ್ಯಮಗಳನ್ನು ಬಳಸಿಕೊಳ್ಳುತ್ತಿದೆ. ಅದರಲ್ಲಿ ಸಂಗೀತ ಕೂಡ ಒಂದು.

 

ಬಿಲಿಯಂತ್ ಮೀಲ್ ಸವಿ ನೆನಪಿಗಾಗಿ ನಾನು ಮತ್ತು ಜಾವೆದ್‌ಜೀ ಸೇರಿ ಟ್ರ್ಯಾಕ್ ಸಿದ್ಧಪಡಿಸಿದ್ದೇವೆ. ಈ ಆಲ್ಬಂ ಸಂಗೀತ ಪ್ರಿಯರಿಗೆ ಇಷ್ಟವಾಗುವುದಷ್ಟೇ ಅಲ್ಲ; ಸಮಾಜಕ್ಕೆ ಸಂದೇಶ ಕೂಡ ನೀಡಲಿದೆ.ಮೇಕಿಂಗ್ ಆಫ್ ಮ್ಯೂಸಿಕ್ ಟ್ರ್ಯಾಕ್ ಅನುಭವ?

ಅಕ್ಷಯ ಪಾತ್ರೆಗಾಗಿ ವಿಶೇಷವಾಗಿ ತಯಾರಿಸಿರುವ ಈ ಆಲ್ಬಂ ರಾಜಸ್ತಾನದಲ್ಲಿ ಚಿತ್ರೀಕರಣಗೊಂಡಿದೆ. ಅಕ್ಷಯಪಾತ್ರೆಯ ಅತಿ ಹೆಚ್ಚು ಫಲಾನುಭವಿಗಳು ಅಲ್ಲಿದ್ದಿದ್ದರಿಂದ ಆಲ್ಬಂನ್ನು ಅಲ್ಲೇ ಚಿತ್ರೀಕರಿಸಲಾಯ್ತು. ಅಕ್ಷಯ ಪಾತ್ರೆಯ ಬಿಲಿಯಂತ್ ಮೀಲ್ ಕಾರ್ಯಕ್ರಮಕ್ಕಾಗಿ ಈ ಟ್ರ್ಯಾಕ್ ಸಿದ್ದಪಡಿಸುವಾಗ ಆದ ಖುಷಿ ಅಷ್ಟಿಷ್ಟಲ್ಲ.

 

ಯಾಕಂದ್ರೆ ನಾನು ಈ ಗೀತೆಯನ್ನು ಹಾಡುವಾಗ, ಸಂಗೀತ ಸಂಯೋಜನೆ ಮಾಡುವಾಗ ಸಾಮಾಜಿಕ ಕಳಕಳಿ ಒಂದಕ್ಕಾಗಿ ನನ್ನನ್ನು ತೊಡಗಿಸಿಕೊಂಡಿದ್ದೇನೆ ಎಂಬ ಖುಷಿ ಆವರಿಸಿಕೊಂಡಿತ್ತು. ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ಅವರೂ ಕೂಡ ಈ ಹಾಡಿಗೆ ದನಿಯಾಗಿದ್ದಾರೆ. ಮಕ್ಕಳ ಹಸಿವು ನೀಗಿಸಿ ಶಿಕ್ಷಣ ಕೊಡುವ ಕಾರ್ಯವೊಂದಕ್ಕೆ ನಮ್ಮನ್ನು ತೊಡಗಿಸಿಕೊಂಡಾಗ ಸಿಕ್ಕುವ ಸಾರ್ಥಕ ಭಾವವೇ ಬೇರೆ.ಸಂಗೀತ ಅಂದ್ರೆ...

ಕಿವಿಗೆ ಇಂಪು ನೀಡುವ, ಭಾವ ಪರವಶಗೊಳಿಸುವ ಸಂಗೀತ ಬೇರೆಲ್ಲಕ್ಕಿಂತ ಪ್ರಬಲ ಮಾಧ್ಯಮ. ಸಂಗೀತದ ಮೂಲಕ ನಾವು ಎಲ್ಲರನ್ನೂ ತಲುಪಬಹುದು. ಅದು ನನ್ನ ಎರಡನೇ ಉಸಿರು. ನೀವು ಎಂಜಿನಿಯರಿಂಗ್ ಓದಿಕೊಂಡವರು. ಆದರೂ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದಿರಿ. ನಿಮ್ಮನ್ನು ಸಂಗೀತದೆಡೆಗೆ ಸೆಳೆದ ಅಂಶ ಯಾವುದು?

ಚಿಕ್ಕವರಿದ್ದಾಗ ಎಂಜಿನಿಯರ್, ಡಾಕ್ಟರ್ ಆಗಬೇಕು ಎಂಬ ಬಯಕೆ ಎಲ್ಲರಲ್ಲೂ ಇರುತ್ತದೆ. ಅಂತಹ ಕನಸು ಇಟ್ಟುಕೊಂಡು ಓಡಾಡುವ ನೂರಾರು ಮಕ್ಕಳಿದ್ದಾರೆ. ಓದುವುದು ಜೀವನದ ಒಂದು ಭಾಗ. ಹಾಗಾಗಿ ನಾನೂ ಎಂಜಿನಿಯರಿಂಗ್ ಮುಗಿಸಿದೆ.ಒರಾಕಲ್‌ನ್ಲ್ಲಲಿ ಕೆಲಸವನ್ನೂ ಮಾಡಿದೆ. ಕೆಲಸದ ನಡುವೆ ಒಂದು ದಿನ ನನ್ನೊಳಗೆ ಹಲವು ಪ್ರಶ್ನೆಗಳು ಎದ್ದವು. ಇಷ್ಟವಿಲ್ಲದ ಕೆಲಸ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಅನಿಸಿತು. ಆಗ ನನಗೆ ಉತ್ತರ ರೂಪದಲ್ಲಿ ಕಂಡಿದ್ದು ಸಂಗೀತ. ಆಗಲೇ ನಿಶ್ಚಯಿಸಿದೆ, ಗಾಯಕನಾಗಿಯೇ ಮುಂದುವರಿಯಬೇಕು ಅಂತ. ಕೆಲಸ ಬಿಟ್ಟು ಸಂಗೀತ ಕ್ಷೇತ್ರಕ್ಕೆ ಧುಮುಕಿದ ನಾನು ಈಗ ಒಬ್ಬ ಗಾಯಕ. ಈ ಬಗ್ಗೆ ಹೆಮ್ಮೆ ಎನಿಸುತ್ತಿದೆ.ನಿಮ್ಮನ್ನು ಅಗಾಧವಾಗಿ ಸೆಳೆಯುವುದು ಸಂಗೀತವಾ? ಸಂಯೋಜನೆಯಾ?


ಎರಡೂ ಇಷ್ಟ. ಬೇರೆ ಸಂಗೀತಗಾರರು ಸಂಯೋಜಿಸಿದ ಸಂಗೀತಕ್ಕೆ ನಾನು ಧ್ವನಿಯಾಗುವುದು ಹಾಗೂ ನಾನು ಸಂಯೋಜಿಸಿದ ಸಂಗೀತಕ್ಕೆ ಬೇರೆ ಗಾಯಕ ಧ್ವನಿಯಾಗುವುದು- ಇವೆರಡರ ನಡುವೆ ಅಷ್ಟೇನೂ ವ್ಯತ್ಯಾಸವಿಲ್ಲ. ಒಟ್ಟಾರೆ ಸಂಗೀತದೊಂದಿಗಿನ ಒಡನಾಟ ನಂಗಿಷ್ಟ.  ನಿಮಗೆ ತುಂಬಾ ಇಷ್ಟವಾದ ಸಂಯೋಜನೆ ಯಾವುದು?

ಮಕ್ಕಳಲ್ಲಿ ಯಾವ ಮಕ್ಕಳು ಇಷ್ಟ ಎಂದರೆ, ಆ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ನನ್ನ ಸಂಯೋಜನೆಯ ಎಲ್ಲಾ ಹಾಡುಗಳೂ ಇಷ್ಟ. ಅದರಲ್ಲಿ `ಮಿಥುವಾ~ ತುಂಬಾನೇ ಇಷ್ಟ.ಅಭಿಮಾನಿಗಳಿಗೆ ನಿಮ್ಮ ಸಂದೇಶ?

ಸಕಾರಾತ್ಮಕವಾಗಿ ಯೋಚಿಸಿ. ಯಾವಾಗಲೂ ಒಳ್ಳೆಯ ಕೆಲಸ ಮಾಡಿ. ಚಿಕ್ಕ ಚಿಕ್ಕ ಸಂಗತಿಗಳನ್ನು ಅನುಭವಿಸಿ, ಆನಂದಿಸಿ. ಸದಾ ಖುಷಿಯಿಂದಿರಿ. ಆಮೇಲೆ ಸದಾ ಸಂಗೀತ ಕೇಳಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.