ಗುರುವಾರ , ಮೇ 13, 2021
39 °C

ಅಕ್ಷಯ ಪಾತ್ರೆಯ ಅಡುಗೆ ಕಾರ್ಖಾನೆ

ಶಶಿಕಾಂತ ಎಸ್. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ವಸಂತಪುರದ ಅಕ್ಷಯಪಾತ್ರೆಯ ಹೈಟೆಕ್ ಅಡುಗೆ ಮನೆಯಲ್ಲಿ ಮಧ್ಯರಾತ್ರಿ ಕಳೆದು 2 ಗಂಟೆಗೇ ಬೆಳಗಾಗುತ್ತದೆ. ಅಕ್ಕಿ, ಬೇಳೆ ಸುರಿಯುವ, ಅನ್ನ ಬೇಯಿಸುವ, ಸಾಂಬಾರ್ ತಯಾರಿಸುವ ಕಾರ್ಯ ನಡೆಯುತ್ತದೆ. ಅದೂ ಒಬ್ಬಿಬ್ಬರಿಗಲ್ಲ; ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗಾಗಿ. ಬೆಳಿಗ್ಗೆ 8 ಗಂಟೆ ಎನ್ನುವಷ್ಟರಲ್ಲಿ ಬಿಸಿಬಿಸಿ ಊಟ ಹೊತ್ತ ಮಿನಿ ಲಾರಿಗಳು ವಿವಿಧ ಶಾಲೆಗಳತ್ತ ಹೊರಡುತ್ತವೆ. ಇಷ್ಟೆಲ್ಲ ಕೆಲಸವನ್ನು ಮಾಡುವುದು ಬೃಹದಾಕಾರದ ಯಂತ್ರಗಳು ಎನ್ನುವುದೇ ಒಂದು ವಿಶೇಷ.

                                            =====

ಇದು ನಿತ್ಯ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಪಾಕಶಾಲೆ. ಇದರ ಜತೆಗೆ ಇಲ್ಲಿಂದ ಕಾರಾಗೃಹ, ಅನೇಕ ವೃದ್ಧಾಶ್ರಮ, ಶಿಶುಗೃಹಗಳಿಗೂ ಬಿಸಿಬಿಸಿ ಊಟ ಸರಬರಾಜಾಗುತ್ತದೆ. ವಿಶೇಷ ಎಂದರೆ ಇಲ್ಲಿ ಅಡುಗೆ ಮಾಡುವುದರಿಂದ ಹಿಡಿದು ಅದರ ಪ್ಯಾಕಿಂಗ್‌ವರೆಗೆ ಎಲ್ಲ ಕಾರ್ಯವನ್ನು ಯಂತ್ರಗಳೇ ನಿರ್ವಹಿಸುತ್ತವೆ.ಇದನ್ನು `ಯಂತ್ರಚಾಲಿತ ಪಾಕಶಾಲೆ~ ಎಂದರೂ ತಪ್ಪಾಗಲಾದರು. ಇಂತಹದ್ದೊಂದು ವಿನೂತನವಾದ ಅಡುಗೆ ಮನೆಗೆ ಅಕ್ಷಯ ಪಾತ್ರೆ ಪ್ರತಿಷ್ಠಾನ ಮೂರ್ತ ರೂಪ ನೀಡಿದೆ.

ತರಕಾರಿ ಕತ್ತರಿಸುವುದು, ಅನ್ನ, ಸಾಂಬಾರ ಮಾಡಲು ಅಗತ್ಯವಾದಷ್ಟು ಅಕ್ಕಿ, ಬೇಳೆ, ತರಕಾರಿ, ನೀರು ಸೇರಿದಂತೆ ಇತರೆ ಪದಾರ್ಥಗಳನ್ನು ತೆಗೆದುಕೊಂಡು ಬೆರೆಸುವುದು ಮತ್ತು ಸಿದ್ಧವಾದ ಆಹಾರವನ್ನು ಪಾತ್ರೆಗಳಿಗೆ ತುಂಬುವ ಕೆಲಸವನ್ನು ದೈತ್ಯಾಕಾರದ ಯಂತ್ರಗಳೇ ಮಾಡುತ್ತವೆ. ಮನುಷ್ಯನದೇನಿದ್ದರೂ ಈ ಎಲ್ಲ ಪ್ರಕ್ರಿಯೆ ಮೇಲೆ ನಿಗಾ ವಹಿಸುವುದಷ್ಟೇ ಕೆಲಸ. 
          ಅಚ್ಚುಕಟ್ಟುಬೆಳಗಿನ 2 ಗಂಟೆಗೆ ಆರಂಭವಾಗುವ ಆಹಾರ ತಯಾರಿಕೆ ಕೆಲಸ ಬೆಳಿಗ್ಗೆ 8 ಗಂಟೆಯ ಒಳಗೆ ಪೂರ್ಣಗೊಳ್ಳುತ್ತದೆ. ಅದರ ನಂತರ ನೀವು ಅಲ್ಲಿಗೆ ಹೋಗಿ ನೋಡಿದರೆ ಅಡುಗೆ ಮಾಡಿದ ಕುರುಹೂ ಇರುವುದಿಲ್ಲ. ಅಷ್ಟು ಒಪ್ಪ, ಓರಣ, ಅಚ್ಚುಕಟ್ಟು.

ಬೆಂಗಳೂರಿನ 1,300 ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಇಲ್ಲಿಂದಲೇ ಬಿಸಿಬಿಸಿ ಊಟ ಪೂರೈಕೆಯಾಗುತ್ತದೆ. ಹೀಗಾಗಿ ಶುಚಿ, ರುಚಿಯ ಜತೆಗೆ ಸ್ವಚ್ಛತೆ ಮತ್ತು ಭದ್ರತೆಗೆ ಹೆಚ್ಚಿನ ಒತ್ತು. ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಇರುವುದರಿಂದ ಸಕಾರಣವಿಲ್ಲದೇ ಯಾರನ್ನೂ ಒಳಗೆ ಬಿಡುವುದಿಲ್ಲ. ಇಲ್ಲಿ ಆಹಾರ ತಯಾರಿಕೆಯ ಕ್ರಮವನ್ನು ತಿಳಿದುಕೊಳ್ಳಲು ಈಗಾಗಲೇ ದೇಶ ವಿದೇಶದ ಅನೇಕ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಬಂದು ಹೋಗಿದ್ದಾರೆ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ವಸಂತಪುರದಲ್ಲಿ 5,171 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಅಡುಗೆ ಮನೆ ಒಟ್ಟು ಮೂರು ಅಂತಸ್ತಿನಿಂದ ಕೂಡಿದೆ. ಪ್ರತಿ ಮಹಡಿಯಲ್ಲೂ ಆಹಾರ ತಯಾರಿಕೆಗೆ ಸಂಬಂಧಿಸಿದ ಭಿನ್ನ ಕೆಲಸಗಳು ಜರುಗುತ್ತವೆ.ಮೂರನೇ ಮಹಡಿಯಲ್ಲಿ ಇರುವುದು ಆಹಾರ ಧಾನ್ಯ ಮತ್ತು ಎಣ್ಣೆ ಸಂಗ್ರಹಣಾ ಘಟಕ. ಮಾರುಕಟ್ಟೆಯಿಂದ ಬರುವ ಅಕ್ಕಿ, ಬೇಳೆಕಾಳುಗಳನ್ನು ಇಲ್ಲಿ ಸ್ವಚ್ಛಗೊಳಿಸಿ ಸಂಗ್ರಹಿಸಿ ಇಡಲಾಗುತ್ತದೆ. ಇದಕ್ಕಾಗಿ 5, 7, 10 ಮತ್ತು 270 ಟನ್ ಗಾತ್ರದ ಸಿಲೊ (ಆಹಾರ ಸಂಗ್ರಹ ಗೋದಾಮು) ನಿರ್ಮಿಸಲಾಗಿದೆ. 8 ಟನ್ ಸಾಮರ್ಥ್ಯದ ಖಾದ್ಯ ಎಣ್ಣೆ ಸಂಗ್ರಹಗಾರವೂ ಇದೆ.ಎರಡನೇ ಮಹಡಿಯಲ್ಲಿ ಆಹಾರ ತಯಾರಿಸಲು ಬೇಕಾದ ಎಲ್ಲ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ. ಪ್ರತಿ ಗಂಟೆಗೆ 120 ಕಿಲೊ ತರಕಾರಿ ಕೊಯ್ಯುವ ಯಂತ್ರಗಳಿವೆ. ಕೊಬ್ಬರಿ, ಈರುಳ್ಳಿ, ಹೂಕೋಸು, ಎಲೆಕೋಸು, ಟೊಮೆಟೊ, ಕ್ಯಾರೆಟ್ ಸೇರಿದಂತೆ ಹಲವು ಬಗೆಯ ತರಕಾರಿಗಳನ್ನು ಈ ಯಂತ್ರಗಳು  ನಿರ್ದಿಷ್ಟ ಆಕಾರದಲ್ಲಿ ಕತ್ತರಿಸುತ್ತವೆ.ಹೀಗೆ ಕತ್ತರಿಸಿದ ತರಕಾರಿ ಮತ್ತು ಅಕ್ಕಿಯನ್ನು ಬಿಸಿ ನೀರಿನಲ್ಲಿ ತೊಳೆಯಲಾಗುತ್ತದೆ. ಇವನ್ನು ವಿಶಿಷ್ಟ ವಿಧಾನದಲ್ಲಿ ನಿರ್ಮಿಸಿದ ಕೊಳವೆಗೆ ಹಾಕುವ ಕೆಲಸವನ್ನಷ್ಟೇ ಇಲ್ಲಿನ ಸಿಬ್ಬಂದಿ ಮಾಡುತ್ತಾರೆ. ಕೊಳವೆಯಲ್ಲಿ ಸೇರುವ ಈ ಪದಾರ್ಥಗಳು ಒಂದನೇ ಮಹಡಿಯಲ್ಲಿರುವ ಅನ್ನ, ಸಾಂಬಾರ ಮತ್ತು ಪಲ್ಯ ತಯಾರಿಸಲು ಇರುವ ಪ್ರತ್ಯೇಕ ಕೊಳಗಗಳನ್ನು ಸೇರುತ್ತದೆ. ಒಂದನೇ ಮಹಡಿಯಲ್ಲಿ 600 ಲೀಟರ್ ಸಂಗ್ರಹ ಸಾಮರ್ಥ್ಯದ ಅನ್ನ ಮಾಡುವ 13 ಮತ್ತು ಸಾಂಬಾರ ತಯಾರಿಸಬಹುದಾದ 8 ಕಂಟೇನರ್‌ಗಳಿವೆ. ಆಹಾರ ಸಿದ್ಧಗೊಳ್ಳುವುದು ಇದರಲ್ಲೇ. ಈ ಕಂಟೇನರ್‌ಗಳಿಗೆ ಎಣ್ಣೆ ಪೂರೈಕೆ ಮತ್ತು ಆಹಾರ ನಿರ್ಮಿಸಲಿಕ್ಕೆ ಬೇಕಾದ ಅಗತ್ಯ ಪದಾರ್ಥಗಳನ್ನು ರವಾನಿಸಲು ಕೊಳವೆಗಳ ಸಂಪರ್ಕ ಕಲ್ಪಿಸಲಾಗಿದೆ. ಬೇಕಾದಷ್ಟು ಎಣ್ಣೆ, ಅಕ್ಕಿ ಮತ್ತು ತರಕಾರಿ ಪದಾರ್ಥಗಳನ್ನು ತೆಗೆದುಕೊಳ್ಳಲಾಗುತ್ತದೆ.ಇವುಗಳಲ್ಲಿ ಅಡುಗೆ ಸಿದ್ಧಪಡಿಸುವುದು ಸುಲಭ, ಸಮಯವೂ ಉಳಿತಾಯವಾಗುತ್ತದೆ. 100 ಕಿಲೊ ಅನ್ನ ತಯಾರಾಗಲು 15 ನಿಮಿಷ ಸಾಕು. ಬೇಳೆ ಕುದಿಯಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಸಾಂಬಾರ ತಯಾರಾಗಲು ಒಂದೂವರೆ ಗಂಟೆ ಬೇಕು. ಎಲ್ಲ ಕಂಟೇನರ್‌ಗಳಲ್ಲಿ ತಯಾರಾದ ಆಹಾರ ಅಂತಿಮವಾಗಿ ಪ್ರತ್ಯೇಕ ಕೊಳವೆ ಮೂಲಕ ನೆಲಮಹಡಿಗೆ ತಲುಪುತ್ತದೆ.ನೆಲಮಹಡಿ: ಕೊನೆಯ ಹಂತವಾಗಿ ನೆಲಮಹಡಿಯಲ್ಲಿ ಆಹಾರವನ್ನು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳಲ್ಲಿ ತುಂಬಲಾಗುತ್ತದೆ. ಊಟ ಮಾಡುವಾಗ ಆಹಾರ ಬಿಸಿಬಿಸಿಯಾಗಿ ಇರಲಿ ಎಂಬ ಕಾರಣಕ್ಕಾಗಿ ಐದಾರು ತಾಸು ಸುಮಾರು 60 ಡಿಗ್ರಿಯಷ್ಟು ಶಾಖ ಕಾಪಾಡಿಕೊಳ್ಳುವಂತೆ ಈ ಪಾತ್ರೆಗಳನ್ನು ಸಿದ್ಧಪಡಿಸಲಾಗಿದೆ.

 

ಹೀಗೆ ತಯಾರಾದ ಅಡುಗೆ ಹೊರಗೆ ನಿಂತ 35 ವಾಹನಗಳನ್ನು ಏರಿ ನಿಗದಿತ ಸ್ಥಳದತ್ತ ಹೊರಡುತ್ತದೆ. ಆಹಾರದ ಪಾತ್ರೆಗಳು ಅಲುಗಾಡದಂಥ ಮತ್ತು ಕೆಡದಂಥ ಮಾದರಿಯಲ್ಲಿ ಈ ವಾಹನಗಳನ್ನು ರೂಪಿಸಿರುವುದು ವಿಶೇಷ.ಇಲ್ಲಿ ಬಹುತೇಕ ಎಲ್ಲ ಕಾರ್ಯವನ್ನು ಯಂತ್ರಗಳೇ ನಿರ್ವಹಿಸಿದರೂ ಮೇಲ್ವಿಚಾರಣೆ, ಸ್ವಚ್ಛತೆ, ಆಹಾರ ಸರಬರಾಜು, ಭದ್ರತೆ ಸೇರಿದಂತೆ ಇತರೆ ಸಣ್ಣಪುಟ್ಟ ಕೆಲಸಕ್ಕಾಗಿ 300 ಸಿಬ್ಬಂದಿ ಇದ್ದಾರೆ. ಈ ಘಟಕದಲ್ಲಿ ಏಕಕಾಲಕ್ಕೆ 1.30 ಲಕ್ಷ ಜನರಿಗೆ ಸಾಲುವಷ್ಟು ಬಿಸಿಯೂಟ ತಯಾರಿಸಬಹುದು. 

 

ಅಡುಗೆಗೂ ಮೆನು

`ಇಲ್ಲಿಗೆ ಸಂದರ್ಶನ ನೀಡಬಯಸುವವರು ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಕೆಮ್ಮು, ನೆಗಡಿ ಸೇರಿದಂತೆ ಇತರೆ ಸಾಂಕ್ರಾಮಿಕ ಕಾಯಿಲೆ ಉಳ್ಳವರಿಗೆ ಪ್ರವೇಶ ನಿರ್ಬಂಧ. ಹೊರಗಿನಿಂದ ಬರುವವರನ್ನು ಸಂಪೂರ್ಣವಾಗಿ ತಪಾಸಣೆಗೆ ಒಳಪಡಿಸಿದ ನಂತರವಷ್ಟೇ ಒಳಬಿಡಲಾಗುತ್ತದೆ. ಪ್ರತಿ ನಿತ್ಯ ಲಕ್ಷಾಂತರ ಊಟ ಇಲ್ಲಿಂದ ಸರಬರಾಜು ಆಗುವ ಕಾರಣ ಈ ಕಟ್ಟುನಿಟ್ಟು~ ಎನ್ನುತ್ತಾರೆ ಘಟಕದ ಪ್ರಧಾನ ವ್ಯವಸ್ಥಾಪಕ ವಿನಯ್ ಕುಮಾರ್.`ವಾರದಲ್ಲಿ ಎರಡು ದಿನ ಪಲಾವ್, ರೈತಾ  ತಯಾರಿಸಿದರೆ, ಉಳಿದ ದಿನಗಳಲ್ಲಿ ಅನ್ನ, ಮೊಸರನ್ನ, ಸಾಂಬಾರ ಮಾಡಲಾಗುತ್ತದೆ. ಚಪಾತಿ ಪೂರೈಸುವಂತೆ ಬೇಡಿಕೆ ಬಂದಿದೆ. 1 ಗಂಟೆಯಲ್ಲಿ 40 ಸಾವಿರ ಚಪಾತಿ ತಯಾರಿಸುವ ಯಂತ್ರವನ್ನು ಶೀಘ್ರದಲ್ಲೇ ಅಳವಡಿಸಲಾಗುವುದು~ ಎಂದು ಅವರು ಹೇಳುತ್ತಾರೆ.

 

ಎಲ್ಲೆಲ್ಲಿ ಪಾಕಶಾಲೆ?

ಬೆಂಗಳೂರಿನ ವಸಂತಪುರ ಮಾತ್ರವಲ್ಲದೆ ರಾಜಾಜಿನಗರದಲ್ಲಿ ಕೂಡ ಹೈಟೆಕ್ ಪಾಕಶಾಲೆ ಇದೆ. ಅಲ್ಲದೆ ಮಂಗಳೂರು, ಹುಬ್ಬಳ್ಳಿ, ಬಳ್ಳಾರಿ, ಮೈಸೂರು ಜಿಲ್ಲೆಗಳಲ್ಲಿ ತಲಾ ಒಂದೊಂದು ಆಹಾರ ತಯಾರಿಕಾ ಘಟಕಗಳಿವೆ. ಈ ಎಲ್ಲ ಕೇಂದ್ರಗಳಿಂದ ರಾಜ್ಯದಲ್ಲಿ ನಿತ್ಯ 7 ಲಕ್ಷ ವಿದ್ಯಾರ್ಥಿಗಳಿಗೆ ಬಿಸಿಯೂಟ ಹೋಗುತ್ತದೆ.ಕರ್ನಾಟಕ ಸೇರಿ ದೇಶದ 8 ರಾಜ್ಯಗಳಲ್ಲಿ ಅಕ್ಷಯ ಪಾತ್ರೆ ಫೌಂಡೇಶನ್‌ಗೆ ಸೇರಿದ 19 ಪಾಕಶಾಲೆಗಳಿದ್ದು, ದಿನನಿತ್ಯ 13 ಲಕ್ಷ ಮಕ್ಕಳಿಗೆ ಆಹಾರ ಪೂರೈಸಲಾಗುತ್ತಿದೆ. ಇದು ವಿಶ್ವದಲ್ಲಿಯೇ  ಅತಿ ಬೃಹತ್ ಅಡುಗೆ ತಯಾರಿಕೆ ಮತ್ತು ಸರಬರಾಜು ವ್ಯವಸ್ಥೆ. ಹೀಗಾಗಿಯೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ಅನೇಕ ಗಣ್ಯರಿಂದ ಪ್ರಶಂಸೆಯೂ ಸಿಕ್ಕಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.