ಶನಿವಾರ, ಜನವರಿ 18, 2020
18 °C

`ಅಕ್ಷರ'ಗಳ ಮುಂಗಾರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಮುಂಗಾರು ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದ್ದಂತೆ ಇತ್ತ ಕವಿಗಳು ಸಹ ಮುಂಗಾರು  ಮಳೆ ಮತ್ತು ರೈತನ ಸಂಬಂಧವನ್ನು ಕವಿತೆಗಳ ಮೂಲಕ ವರ್ಣಿಸಿದರು.ನಗರದ ಕೋಸಗಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನ ಹಾಗೂ ಕಾವ್ಯಾಂಜಲಿ ಜಿಲ್ಲಾ ಘಟಕದ  ವತಿಯಿಂದ ಭಾನುವಾರ ಆಯೋಜಿಸಿದ್ದ `ಮುಂಗಾರು ಕವಿಗೋಷ್ಠಿ'ಯಲ್ಲಿ ಅನೇಕ ಕವಿಗಳು ಕೃಷಿ ಜೀವನದ ಚಿತ್ರಣ ತೆರೆದಿಟ್ಟರು.

`ಬಾ... ಬಾರೊ... ಮಳೆರಾಯ, ನೀ ಬಂದರೆ ಮುಗಿಯುವೆ ಕೈಯ' ಎಂಬ ಶ್ರೀಕಾಂತಗೌಡ ತಿಳಗೋಳ ಅವರ ಕವನ ಮಳೆಯ ಕುರಿತು ರೈತನ ದೈವೀಭಾವ ಬಿಂಬಿಸಿತು.`ಮಣ್ಣಿನ ಮಗನಾಗಿ ಹಣ್ಣಾಗಿ ದುಡಿದಾನ, ಸಾಲ ತೀರಿಸಲಾಗದೆ ವಿಷ ಕುಡಿದು ಸತ್ತಾನ' ಎಂಬ ಕೆ.ಗಿರಿಮಲ್ಲ ಅವರ ಕವನದ ಸಾಲುಗಳು ರೈತನ ಆತ್ಮಹತ್ಯೆಗೆ ಹಿಡಿದ ಕನ್ನಡಿಯಂತಿದ್ದವು. `ರೈತನ ಬದುಕಿಗೆ ಬೆಲೆಯಿಲ್ಲ, ಅವರ ಬಗ್ಗೆ ಸರ್ಕಾರಕ್ಕಿಲ್ಲ ಕಾಳಜಿ' ಎಂಬ ಕವಿತಾ ಹಳ್ಳಿ ಜೇವರ್ಗಿ ಅವರ ಕವನ ರೈತರ ಸಮಸ್ಯೆಗೆ ಸರ್ಕಾರ ಸ್ಪಂದಿಸಬೇಕು ಎನ್ನುವುದನ್ನು ಬಿಂಬಿಸಿತು.ಕವಿ ದತ್ತಾತ್ರೇಯ ಕೆ. ಬಿರಾದಾರ, ಎಂ. ಬಿ. ನಿಂಗಪ್ಪ, ಮಂಗಲಾ ಕಪರೆ, ಅಕ್ಕಮ್ಮ ಗುರಗುಂಟೆ, ರಾಜಶೇಖರ ಯಾಳಗಿ, ಅಮರಮ್ಮ ಎಸ್. ನವದಗಿ, ಶಿವಲೀಲಾ ವಿಶ್ವಕರ್ಮ, ಸುರೇಖಾ ಬಣಗಾರ, ಮಂಜುಳಾ ಎಂ. ಪಾಟೀಲ, ಹಣಮಂತರಾವ ಪಟ್ಟೇಕರ್, ಭೀಮಾಶಂಕರ, ಶರಣಪ್ಪ ಕೆ. ಓಗೆ, ಮಧುಮತಿ ಪಾಟೀಲ, ವಿಮಲಾ ಶೆಟ್ಟಿ, ಶಾಂತಾ ಪಸ್ತಾಪುರ, ಸರ್ವಮಂಗಳಾ ಹಿರೇಮಠ ಕವನ ವಾಚಿಸಿದರು.ರಾಷ್ಟ್ರಮಟ್ಟದಲ್ಲಿ ಮಿಂಚಿದ ಭರತನಾಟ್ಯ ಕಲಾವಿದೆ ಸುಷ್ಮಾ ಕೆ. ಶೀಲವಂತ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಅಮೃತಾ ಎಸ್.ಎಲ್. ಪಾಟೀಲ, ಮಲ್ಲಿಕಾರ್ಜುನ ಬಿ.ಕೊಳ್ಳೂರ, ಐಶ್ವರ್ಯಾ ಎ. ದಾಮಾ ಅವರನ್ನು ಸನ್ಮಾನಿಸಲಾಯಿತು. ತೆರಿಗೆ ಇಲಾಖೆ ಉಪ ಆಯುಕ್ತ ಪದ್ಮಾಕರ್ ಕುಲಕರ್ಣಿ ಉದ್ಘಾಟಿಸಿದರು. ಗುಲ್ಬರ್ಗ ವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಸೇಡಂ ಅಧ್ಯಕ್ಷತೆ ವಹಿಸಿದ್ದರು. ಕೋಸಗಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಿತೀನ್ ಕೋಸಗಿ, ಉದ್ಯಮಿ ಶರಣಬಸಪ್ಪ ಮಾಲಿಪಾಟೀಲ ಉದನೂರ, ವಿಶ್ವಜ್ಯೋತಿ ಪ್ರತಿಷ್ಠಾನದ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಇದ್ದರು.

ಪ್ರತಿಕ್ರಿಯಿಸಿ (+)