ಅಕ್ಷರ-ಚಿತ್ರದ ಯುಗಳ

7

ಅಕ್ಷರ-ಚಿತ್ರದ ಯುಗಳ

Published:
Updated:

ಹಂಸ ಹಾಡುವ ಹೊತ್ತು

ಲೇ: ರಮೇಶ್ ಮತ್ತು ಲೋಹಿತ್

ಪು: 224; ಬೆ: ರೂ. 150

ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ ರಸ್ತೆ, ಹುಬ್ಬಳ್ಳಿಕನ್ನಡ ಸಾಹಿತ್ಯದಲ್ಲಿ `ವೈದ್ಯ ಸಾಹಿತ್ಯ'ಕ್ಕೆ ತನ್ನದೇ ಆದ ಪರಂಪರೆಯಿದೆ. ವೈದ್ಯ ಲೇಖಕರು ವಿಭಿನ್ನ ಕಥಾವಸ್ತು, ಶೈಲಿ, ವಿಷಯ ನಿರೂಪಣೆಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಈ ಪರಂಪರೆಯನ್ನು ನೆನಪಿಸುವ ಹೊಸ ಪುಸ್ತಕ ಡಾ. ಕೆ. ರಮೇಶಬಾಬು ಅವರ `ಹಂಸ ಹಾಡುವ ಹೊತ್ತು' ಕಾದಂಬರಿ.`ಹಂಸ ಹಾಡುವ ಹೊತ್ತು' ಕಾದಂಬರಿ ದಯಾಮರಣದ ಜಿಜ್ಞಾಸೆಯ ಕಥಾವಸ್ತುವನ್ನು ಹೊಂದಿದೆ. ಈ ಕಾದಂಬರಿಯ ಮುಖ್ಯ ವಿಶೇಷ ಇರುವುದು ಅಕ್ಷರ - ಕುಂಚದ ಜುಗಲ್‌ಬಂದಿಯಲ್ಲಿ. ರಮೇಶಬಾಬು ಅವರ ಕಥಾವಸ್ತುವಿಗೆ ಅನುಗುಣವಾದ ಚಿತ್ರಕಲೆ ಕಾದಂಬರಿಯುದ್ದಕ್ಕೂ ಕಾಣಿಸಿಕೊಂಡಿದೆ. ಚಿತ್ರಗಳನ್ನು ಬಿಡಿಸಿರುವ ಲೋಹಿತ್ ಅವರು, ಕಥಾವಸ್ತುವಿಗೆ ಚಿತ್ರರೂಪ ನೀಡಲು ಪ್ರಯತ್ನಿಸದೇ ಸ್ವತಂತ್ರ ಅಭಿವ್ಯಕ್ತಿಯನ್ನು ವ್ಯಕ್ತಪಡಿಸಿರುವುದರಿಂದ ಇದೊಂದು ಲೇಖನಿ ಮತ್ತು ಕುಂಚದ ವಿಶಿಷ್ಟ ಸಂಯೋಜನೆಯಾಗಿದೆ.ಡಾ. ಮೂರ್ತಿ ಕಾದಂಬರಿಯ ಮುಖ್ಯಪಾತ್ರ. ವೈದ್ಯಕೀಯ ಪದವಿ ಜೊತೆಗೆ ಬಯೊಕೆಮೆಸ್ಟ್ರಿಯಲ್ಲಿ ಪಿಎಚ್.ಡಿ. ಪಡೆದಿರುವ ಮೂರ್ತಿ ಆಪ್ತವಲಯದಲ್ಲಿ `ಡಬಲ್ ಡಾಕ್ಟರ್'. `ಮನುಷ್ಯರಿಗೆ ಡೇಟ್ ಆಫ್ ಎಕ್ಸ್‌ಪೈರಿ ಇದೆಯೇ? ಅದನ್ನು ತಿಳಿಯಲು ಸಾಧ್ಯವೇ? ಒಂದು ವೇಳೆ ಅದನ್ನು ತಿಳಿಯಲು ಸಾಧ್ಯವಿರುವುದಾದರೆ ಅದು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆಯೇ?' ಎನ್ನುವುದು ಮೂರ್ತಿಯ ಜಿಜ್ಞಾಸೆ. ಮಗುವಿನ ಜನನವನ್ನು ಫ್ಯಾಕ್ಟರಿಯಲ್ಲಿ ತಯಾರಾಗಿ ಅಸೆಂಬ್ಲಿ ಲೈನಿನಿಂದ ಹೊರಬರುವ ವಸ್ತುವಿಗೆ ಹೋಲಿಸುವ ಆತ ತನ್ನ ಜಿಜ್ಞಾಸೆಯನ್ನು ಓದುಗರಲ್ಲೂ ಬೆಳೆಸುತ್ತಾನೆ.ಪ್ರತಿ ಜೀವಿಯು ತಾಯಿಯ ಗರ್ಭದಿಂದ ಹೊರಬರುವ ಮೊದಲೇ ಅದರ ಅವಸಾನದ ಪೀಠಿಕೆಯನ್ನು ಬರೆಯಲಾಗಿರುತ್ತದೆ. ಒಂದು ಜೀವಿಯ ಜೀವನಾರಂಭದ ಸಮಯದಲ್ಲೇ ಅದರ ಜೀವಕೋಶಗಳಲ್ಲಿ ಜಾಗೃತವಾಗಿರುವ ಒಂದು ವ್ಯವಸ್ಥೆ ಪ್ರಕೃತಿ ಅಳವಡಿಸಿರುವ ಒಂದು ಟೈಮ್ ಬಾಂಬ್- ಇಂತಹ ಅನೇಕ ಸ್ವಾರಸ್ಯಕರ ವಿಷಯಗಳನ್ನು ಕಾದಂಬರಿಯಲ್ಲಿ ನೋಡಬಹುದಾಗಿದೆ.ಜೀವಚ್ಛವದಂತೆ ಇರುವ ಕನಕ ಎನ್ನುವ ಹೆಣ್ಣುಮಗಳ ಹಿನ್ನೆಲೆಯಲ್ಲಿ ದಯಾಮರಣದ ಪ್ರಶ್ನೆಗಳನ್ನು ಕಾದಂಬರಿ ಪರಿಶೀಲಿಸುತ್ತದೆ. ಮಾನವೀಯತೆ ಹಾಗೂ ಕಾನೂನು ಎರಡು ಸಂಗತಿಗಳ ವಿಶ್ಲೇಷಣೆಯೂ ವೈದ್ಯ ಮತ್ತು ವಕೀಲರ ಪಾತ್ರಗಳ ಮೂಲಕ ಕಾದಂಬರಿಯಲ್ಲಿದೆ.ಕಾದಂಬರಿಯ ಕೇಂದ್ರ ಬಿಂದು ಡಾ. ಮೂರ್ತಿಯವರ ಸಂಶೋಧನೆ, ವ್ಯಕ್ತಿಯೊಬ್ಬನ ಚರಮ ದಿನವನ್ನು ಕರಾರುವಕ್ಕಾಗಿ ಹೇಳುವ ವ್ಯಕ್ತಿ ತನ್ನ ಕೊನೆಯ ದಿನವನ್ನು ಕಂಡುಕೊಂಡಿರಲಾರನೇ? ಎಂದು ಓದುಗ ಊಹಿಸುವುದಕ್ಕೆ ಮೊದಲೇ ಡಾ. ಮೂರ್ತಿ ಅವರ ಸಾವು ಸಂಭವಿಸುತ್ತದೆ. ಈ ಸಾವಿನಲ್ಲೂ ಮಿಲಿಂದನ ರೂಪದಲ್ಲಿ ಹೊಸ ಪೀಳಿಗೆಗೆ ಆಶಾಕಿರಣವೊಂದು ಮೂಡುವುದು ಕಾದಂಬರಿಯ ಧನಾತ್ಮಕ ಅಂಶ.ಪುನರ್ಜನ್ಮ, ದೇವರ ಅಸ್ತಿತ್ವ, ಸಾವಿನಾಚೆಯ ಕೌತುಕ, ಬದುಕು ಸಾವಿನ ಸಾಧ್ಯತೆಗಳು- ಹೀಗೆ ಅನೇಕ ಅಂಶಗಳನ್ನು ಚರ್ಚಿಸುವ ಕಾದಂಬರಿ ತನ್ನ ವಸ್ತು ಕೌತುಕದಿಂದ ಗಮನಸೆಳೆಯುತ್ತದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry