ಅಕ್ಷರ ಜಾತ್ರೆಗೆ ಪ್ರತಿಭಟನೆಯ ಮುನ್ನುಡಿ

7

ಅಕ್ಷರ ಜಾತ್ರೆಗೆ ಪ್ರತಿಭಟನೆಯ ಮುನ್ನುಡಿ

Published:
Updated:

ಮಡಿಕೇರಿ: ಸಮ್ಮೇಳನ ಉದ್ಘಾಟನೆಗೆ ಮುನ್ನವೇ ಪ್ರತಿಭಟನೆ, ಸಮ್ಮೇಳನದ ಅಧ್ಯಕ್ಷರ ಭಾಷಣದ ಪ್ರತಿ ಸಿಗಲಿಲ್ಲವೆಂದು ಪ್ರತಿಭಟನೆ ನಡುವೆ ಮಂಗಳವಾರ 80ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಶುರುವಾಯಿತು.ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಭಾರತೀಸುತ ಪ್ರಧಾನ ವೇದಿಕೆಯ ಬಳಿ ನೋಂದಣಿ ಮಾಡಿಸಿಕೊಳ್ಳುತ್ತಿಲ್ಲವೆಂದು ಅನೇಕರು ದಿಢೀರ್‌ ಪ್ರತಿಭಟನೆ ನಡೆಸಿದರು. ‘ಬೆಳಿಗ್ಗೆಯಿಂದ ಪ್ರತಿನಿಧಿಯ ನೋಂದಣಿ ಮಾಡಿಸಿಕೊಳ್ಳುತ್ತಿಲ್ಲ. ನೋಂದಣಿಯಾದರೆ ಒಒಡಿ ಪತ್ರ ಸಿಗುತ್ತದೆ. ಮಧ್ಯಾಹ್ನ ಎರಡು ಗಂಟೆಯಾ­ದರೂ ನೋಂದಣಿಯಾಗಿಲ್ಲ’ ಎಂದು ಬೇಸರದಿಂದ ಹೇಳಿದರು ಗದಗ ಜಿಲ್ಲೆಯ ಲಕ್ಷ್ಮೇಶ್ವರದಿಂದ ಬಂದ ಪ್ರಾಥಮಿಕ ಶಾಲೆಯ ಶಿಕ್ಷಕ ಹಳೆವಾಡಿಮಠ.‘ಮಧ್ಯಾಹ್ನವಾದರೂ ನೋಂದಣಿ­ಯಾಗಿಲ್ಲ. ಹೀಗಾಗಿ ಬೆಳಿಗ್ಗೆಯ ತಿಂಡಿ ಇಲ್ಲ, ಊಟ ಇಲ್ಲ, ಬ್ಯಾಡ್ಜು ಇಲ್ಲ, ಬ್ಯಾಗು ಇಲ್ಲ, ಬ್ಯಾಗು ಹೊತ್ತುಕೊಂಡು ತಿರುಗುತ್ತಿರುವೆ. ಹಾಸಿಗೆ ತಂದಿರುವೆ. ಕೋಣೆ ಕೊಟ್ಟರೆ ಮಲಗಲಾಗುತ್ತದೆ. ಸಮ್ಮೇಳನಕ್ಕೆಂದು ಬಂದರೆ ಇಂಥ ಅನುಭವ ಬೇಕಿತ್ತಾ?’ ಎಂದು ಕೇಳಿದರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ­ದಿಂದ ಬಂದ ಸಹಕಾರ ಬ್ಯಾಂಕಿನ ಉದ್ಯೋಗಿ ನಾಗರಾಜ್.‘ಬಸ್‌ನಿಲ್ದಾಣದಲ್ಲಿಯೇ ಎರಡು ತಾಸು ಕಳೆದೀವ್ರಿ. ಸರಿಯಾಗಿ ಮಾಹಿತಿ ಹೇಳುವವರು ಇಲ್ರಿ. ನೋಂದಣಿ­ಯಾಗದ ಒಒಡಿ ಪತ್ರ ಸಿಗೂದಿಲ್ರಿ. ಹೆಂಗ ಮಾಡೂದ್ರಿ?’ ಎಂದು ಕೇಳಿದರು ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕೆರೂಟಗಿ ಗ್ರಾಮದ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಧಾ ಕಟ್ಟಿ.ಯಾಕ್ರೀ ಸಮ್ಮೇಳನ ಮಾಡ್ತೀರಿ?

ನಾ. ಡಿಸೋಜ ಅವರ ಭಾಷಣ ಶುರು­ವಾಗುತ್ತಿದ್ದಂತೆ ಪ್ರತಿಗಳನ್ನು ಮಾಧ್ಯಮ ಪ್ರತಿನಿಧಿ­ಗಳಿಗೆ ಹಂಚಲಾ­ಯಿತು. ಆಗ ಪ್ರೇಕ್ಷಕರ ಸಾಲಲ್ಲಿ ಕುಳಿತಿದ್ದ ಧಾರವಾಡದ ಕರ್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠದ ಸಂಶೋಧನ ವಿದ್ಯಾರ್ಥಿ ಎಂ.ಎ. ಸಿದ್ಧಗಿರಿ ಪ್ರತಿ ಕೇಳಿದಾಗ ಸಿಗಲಿಲ್ಲ. ಕೂಡಲೇ ಅವರು ಧ್ವನಿ ಎತ್ತರಿಸಿ ‘ಅಧ್ಯಕ್ಷರ ಭಾಷಣದ ಪ್ರತಿ ಎಲ್ಲರಿಗೆ ಸಿಗದಿದ್ದರೆ ಯಾಕೆ ಸಮ್ಮೇಳನ ಮಾಡ್ತೀರಿ?’ ಎಂದು ಧ್ವನಿ ಎತ್ತರಿಸಿ ಕೇಳಿದರು. ಅಲ್ಲಿಂದ ಅವರು ಪ್ರಧಾನ ವೇದಿಕೆ ಏರಲು ಮುಂದಾದರೂ ಪೊಲೀಸರು ಅವಕಾಶ ಕೊಡಲಿಲ್ಲ. ‘400 ಕಿ.ಮೀ. ದೂರದಿಂದ ಬಂದೀನ್ರಿ. ನನ್ನಂತೆ ಆಸಕ್ತಿಯಿಂದ ಬಂದವರಿಗೆ ಭಾಷಣದ ಪ್ರತಿ ಸಿಗಲಿಲ್ಲ ಅಂದ್ರ ಹೆಂಗ್ರಿ?’ ಎಂದು ಕೂಗಾಡು­ವಾಗಲೇ ಅವರ ಕೈಗೆ ಸಂಘಟಕರು ಭಾಷಣದ ಪ್ರತಿ ತಲುಪಿಸಿದರು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry