ಅಕ್ಷರ ಜಾತ್ರೆಗೆ ಹೊಳೆನರಸೀಪುರ ಸಜ್ಜು

7

ಅಕ್ಷರ ಜಾತ್ರೆಗೆ ಹೊಳೆನರಸೀಪುರ ಸಜ್ಜು

Published:
Updated:

ಹೊಳೆನರಸೀಪುರ: 3ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ.13ರಂದು ಸೋಮವಾರ ಇಲ್ಲಿನ ಗಣಪತಿ ಪೆಂಡಾಲ್ ಆವರಣದಲ್ಲಿ ನಡೆಯಲಿದ್ದು, ಅಕ್ಷರ ಜಾತ್ರೆಗೆ ಭಾನುವಾರ ಮಧ್ಯರಾತ್ರಿಯಿಂದಲೇ ಭರದ ಸಿದ್ಧತೆಗಳು ನಡೆದವು.ನವೆಂಬರ್ ತಿಂಗಳಿನಿಂದ ನಾಲ್ಕು ಬಾರಿ ಮುಂದೂಡಲ್ಪಟ್ಟಿದ್ದ ಸಮ್ಮೇಳನಕ್ಕೆ ಕೊನೆಗೂ ದಿನಾಂಕ ನಿಗದಿಯಾಗಿರುವುದು ಕನ್ನಡಾಭಿಮಾನಿ ಗಳಿಗೆ ಸಂತಸ ತಂದಿದೆ. ಕನ್ನಡ ಸಮ್ಮೇಳನಕ್ಕೆ ನಗರದ ಜನರು, ವರ್ತಕರು, ವಿದ್ಯಾರ್ಥಿಗಳು ಸರ್ಕಾರಿ ಅಧಿಕಾರಿಗಳಿಂದ ಹಣ ಸಂಗ್ರಹಿಸಲಾಗಿದೆ.ತಹಶೀಲ್ದಾರ್ ವಿ. ಮಂಜುನಾಥ್ ಮಾರ್ಗ ದರ್ಶನದಲ್ಲಿ ಸಮ್ಮೇಳನ ಸಿದ್ಧತೆಗಳು ನಡೆದಿವೆ. ಆಹ್ವಾನ ಪತ್ರಿಕೆಯಲ್ಲಿ ಕೆಲವು ಲೋಪಗಳು ನುಸುಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎರಡು ಬಾರಿ ಆಹ್ವಾನ ಪತ್ರಿಕೆ ಮುದ್ರಣಗೊಂಡಂತಿದೆ.

 

ಸಮ್ಮೇಳನಕ್ಕೆ ಮುನ್ನ ಹಲವು ಬಾರಿ ಸಭೆ ನಡೆಸಿದ್ದು, ಸಭೆಯ ಸಲಹೆ ಸೂಚನೆಗಳಂತೆ ಎಲ್ಲ ಸಿದ್ಧತೆ ಮಾಡುತ್ತಿದ್ದೇವೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ವೆಂಕಟಸ್ವಾಮಿ ತಿಳಿಸಿದ್ದಾರೆ.ಬೆಳಿಗ್ಗೆ 9ಗಂಟೆಗೆ ಗಣಪತಿ ಪೆಂಡಾಲ್ ಆವರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಸಕ ರೇವಣ್ಣ ಉಪಸ್ಥಿತರಿರುತ್ತಾರೆ. ಕನ್ನಡ ಧ್ವಜಾರೋಹಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉದಯರವಿ, ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ವೆಂಕಟಸ್ವಾಮಿ ನೆರವೇರಿಸಲಿದ್ದಾರೆ.

 

ಬೆಳಿಗ್ಗೆ 9.30ಕ್ಕೆ ಸಮ್ಮೇಳ ನಾಧ್ಯಕ್ಷರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಶಾಸಕ ಎಚ್.ಡಿ. ರೇವಣ್ಣ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.12ಗಂಟೆಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತವಾರಿ ಸಚಿವ ವಿ. ಸೋಮಣ್ಣ ಉಪಸ್ಥಿತರಿ ರುವರು. ಪ್ರೊ. ಎಂ.ಬಿ. ಇರ್ಷಾದ್ ಸಂಪಾದಕತ್ವದ ಸಮ್ಮೇಳದ ನೆನಪಿನ ಸ್ಮರಣ ಸಂಚಿಕೆ `ಹೇಮ ಸಂಪದ~ವನ್ನು ಶಾಸಕ ಎಚ್.ಡಿ. ರೇವಣ್ಣ ಬಿಡುಗಡೆ ಮಾಡಲಿದ್ದಾರೆ. ಎಚ್.ಜೆ. ಗಿರಿರಾಜ್ ಅವರ ಕೃತಿಯನ್ನು ಅರಕಲಗೂಡು ಶಾಸಕ ಎ. ಮಂಜು ಬಿಡುಗಡೆ ಮಾಡಲಿದ್ದು, ಪುಸ್ತಕ ಮಳಿಗೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸತ್ಯನಾರಾಯಣ ಉದ್ಘಾಟಿಸುವರು.

 

ನಂತರ ಸಮ್ಮೇಳನಾಧ್ಯಕ್ಷರ ಭಾಷಣ. ಮಧ್ಯಾಹ್ನ 1 ಗಂಟೆಗೆ `ಶೋಷಿತ ಮಹಿಳೆ ಬದಲಾಗಿರುವಳೆ? ಅಥವಾ ಬದಲಾಗಬೇಕೆ” ಎನ್ನುವ ವಿಷಯದ ಚರ್ಚಾಗೋಷ್ಠಿ ನಡೆಯಲಿದೆ.ಸಂಜೆ 4.30ಕ್ಕೆ ಸಮಾರೋಪ ಸಮಾರಂಭ, 7 ಗಂಟೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

 

ಸಮ್ಮೇಳನಾಧ್ಯಕ್ಷರ ಕಿರು ಪರಿಚಯ

ಹೊಳೆನರಸೀಪುರ: ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿ ರುವ ಡಾ. ಕೆ.ಸಿ. ಮರಿಯಪ್ಪ ಅವರು ಮಂಡ್ಯ ಜಿಲ್ಲೆ ಕೋಣನಹಳ್ಳಿ ಗ್ರಾಮದ ಚಿಕ್ಕಹೈದೇಗೌಡ, ಲಿಂಗಮ್ಮ ಅವರ ಪುತ್ರರಾಗಿ ಜೂನ್ 3, 1949ರಲ್ಲಿ ಜನಿಸಿದವರು.

 

ತ್ವತ್ವ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಇವರು “Educational Re- organisation According to Swamy Vivekananda” ಎಂಬ ಪ್ರಬಂಧಕ್ಕೆ ಗೌರವ ಡಾಕ್ಟರೇಟ್, ಬಿಎಡ್ ಮತ್ತು ಜಾನಪದ ಡಿಪ್ಲೊಮಾ ಪದವಿ ಸಹಪಡೆದಿದ್ದಾರೆ. ಅಧ್ಯಯನ, ಬರವಣಿಗೆ, ಶೈಕ್ಷಣಿಕ ಪ್ರವಾಸ, ಸಮಾಜ ಸೇವೆ ಮರಿಯಪ್ಪ ಅವರ ಹವ್ಯಾಸಗಳು. ಯುರೋಪ್ ರಾಷ್ಟ್ರಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದಾರೆ. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲ ರಾಗಿ 32 ವರ್ಷಗಳ ಸೇವೆ ಸಲ್ಲಿಸಿದ್ದಾರೆ.ತಾಲ್ಲೂಕಿನ ಬಾಲಕರ ಪದವಿ ಪೂರ್ವ ಕಾಲೇಜು, ಹಳ್ಳಿ ಮೈಸೂರು ಕಾಲೇಜು, ಪಡವಲ ಹಿಪ್ಪೆ ಕಾಲೇಜು ಗಳಲ್ಲಿ ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿ ಪ್ರಸ್ತುತ ಹಾಸನ ಚೆನ್ನಾಂಬಿಕ ಪಿಯು ಕಾಲೇಜಿನ ಪ್ರಾಂಶುಪಾಲರಾಗಿದ್ದು, ಹೊಳೆನರಸೀ ಪುರದಲ್ಲೇ ನೆಲೆಸಿದ್ದಾರೆ.1982ರಲ್ಲಿ ರೋಟರಿ ಸಂಸ್ಥೆಗೆ ಸೇರಿದ ಇವರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಹಲವು, ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರ ಹತ್ತಾರು ಲೇಖನಗಳು ರಾಜ್ಯದ ಪ್ರಮುಖ ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ ಮತ್ತು ಆಕಾಶವಾಣಿಯಲ್ಲಿ ಇವರ ಕಾರ್ಯಕ್ರಮ ಬಿತ್ತರಗೊಂಡಿದೆ.ಡಾ. ಕೆ.ಸಿ ಮರಿಯಪ್ಪ ಅವರು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಕರ್ನಾಟಕ ಸರ್ಕಾರ ಇವರಿಗೆ 2005ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಪತ್ನಿ ಅನುಪಮಾ ಕೂಡ ಸಾಹಿತಿಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry