ಸೋಮವಾರ, ಏಪ್ರಿಲ್ 19, 2021
25 °C

ಅಕ್ಷರ ದಾಸೋಹ ಕಾರ್ಮಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಅಕ್ಷರ ದಾಸೋಹ ಕಾರ್ಯಕ್ರಮದ ಅಡಿ ಬಿಸಿಯೂಟ ತಯಾರಿಸುತ್ತಿರುವ ಕಾರ್ಮಿಕರನ್ನು ಸರ್ಕಾರದ ಯಾವುದೇ ಆದೇಶ ಇಲ್ಲದೆ ಕೆಲಸದಿಂದ ತೆಗೆದುಹಾಕಾಲಗಿದೆ ಎಂದು ಆರೋಪಿಸಿ ನಗರದಲ್ಲಿ ಶುಕ್ರವಾರ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಸದಸ್ಯೆಯರು ಎಐಯುಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಜಿಲ್ಲಾ ಪಂಚಾಯಿತಿ ಮತ್ತು ಶಿಕ್ಷಣ ಇಲಾಖೆಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರ ಹೊರಡಿಸಿರುವ ಆದೇಶಕ್ಕೆ ಬೆಲೆ ನೀಡದೆ, ನಿಯಮಗಳನ್ನು ಉಲ್ಲಂಘಿಸಿವೆ ಎಂದು ಆರೋಪಿಸಿದ ಬಿಸಿಯೂಟ  ಕಾರ್ಮಿಕರು, ಮರಳಿ ಸೇವೆಗೆ ಅವಕಾಶ ನೀಡುವಂತೆ ಕೋರಿದರು.ಬಳ್ಳಾರಿ ತಾಲೂಕಿನ 39 ಸರ್ಕಾರಿ ಶಾಲೆಗಳಲ್ಲಿ ಕಳೆದ ವರ್ಷದಿಂದ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಬಿಸಿಯೂಟ ತಯಾರಿಸುತ್ತಿದ್ದ 100ಕ್ಕೂ ಅಧಿಕ ಕಾರ್ಮಿಕರನ್ನು ನಿಯಮ ಬಾಹಿರವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಅವರು ತಿಳಿಸಿದರು.ತಾಲ್ಲೂಕಿನ ಬಾಣಾಪುರ, ಸಂಗನಕಲ್ಲು, ಶಿವಪುರ, ಮೋಕಾ, ಭೈರದೇವನಹಳ್ಳಿ, ಯರ‌್ರಗುಡಿ, ಹಳೇ ಯರ‌್ರಗುಡಿ, ಬೆಣಕಲ್ಲು, ಸಿಂಧುವಾಳ, ಗೋನಾಳು, ಜಾಲಿಹಾಳ್, ಡಿ.ನಾಗೇನಹಳ್ಳಿ, ತಂಬ್ರಹಳ್ಳಿ, ಬ್ಯಾಲಚಿಂತ, ಬೊಮ್ಮನಹಾಳ್,  ಜಿ.ನಾಗೇನಹಳ್ಳಿ, ಗೋಟೂರು, ಕಲ್ಲು ಕುಟಗಿನಹಾಳ್, ಮಸೀದಿಪುರ,  ವಣೇನೂರು, ಕರ್ಚೇಡು, ಬಸರಕೋಡು, ಹಿರೇಹಡ್ಲಗಿ, ಚಾನಾಳು, ಕಪ್ಪಗಲ್ಲು, ಸಿರಿವಾರ ಮತ್ತು ಅಶೋಕನಗರ ಕ್ಯಾಂಪ್‌ಗಳಲ್ಲಿನ ವಿವಿಧ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಅಡುಗೆ ಮಾಡುವುದನ್ನು ಸ್ಥಗಿತಗೊಳಿಸಿ, ಕಾರ್ಮಿಕರನ್ನು ತೆಗೆದುಹಾಕಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.ಕೂಡಲೇ ಈ ಕಾರ್ಮಿಕರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಬಿಸಿಯೂಟ ಸರಬರಾಜು ಮಾಡಲು ಇಸ್ಕಾನ್‌ನ ಅಕ್ಷಯ ಪಾತ್ರೆ ಪ್ರತಿಷ್ಠಾನಕ್ಕೆ ನಿಯಮ ಬಾಹಿರವಾಗಿ ಅನುಮತಿ ನೀಡಿದ್ದು, ಕೂಡಲೇ ಅದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಯಿತು. ಸಂಘದ ಡಿ.ನಾಗಲಕ್ಷ್ಮಿ ಪ್ರತಿಭಟನೆಯ ನೇತೃತ್ವವಹಿಸಿದ್ದರು.ಸ್ವಚ್ಛತೆಗೆ ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ: ನಗರದ ವಿವಿಧ ಬಡಾವಣೆಗಳಲ್ಲಿ ಕಸವನ್ನು ಸಮರ್ಪಕವಾಗಿ  ವಿಲೇವಾರಿ ಮಾಡದ್ದರಿಂದ ಸ್ವಚ್ಛತೆಯೇ ಇಲ್ಲದೆ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಆರೋಪಿಸಿ ಬಳ್ಳಾರಿ ನಾಗರೀಕ ಹೋರಾಟ ಸಮಿತಿ ಸದಸ್ಯರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ಕೆಲವು ತಿಂಗಳಿನಿಂದ ನಗರದ ರಾಣಿತೋಟ ಪ್ರದೇಶಕ್ಕೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು, ಅಲ್ಲಿನ ನಿವಾಸಿಗಳ ಆರೊಗ್ಯದ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದು ಸಮಿತಿ ಸಂಚಾಲಕ ಕೆ. ಸೋಮಶೇಖರ ಗೌಡ ತಿಳಿಸಿದರು.ಸ್ವಚ್ಛತೆಯ ಕೊರತೆ ಮತ್ತು ಕಲುಷಿತ ನೀರಿನಿಂದಾಗಿ ಕೆಲವು ತಿಂಗಳುಗಳಿಂದ  ಚಿಕ್ಕ ಮಕ್ಕಳು, ವೃದ್ಧರು ಅನಾರೋಗ್ಯದಿಂದ ಬಳಲುತ್ತ  ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರು ದೂರಿದರು.ಇದೇ ಪ್ರದೇಶದ ಮೂಲಕ ದೊಡ್ಡ ಚರಂಡಿ ಹಾದು ಹೋಗಿದ್ದು, ಅದನ್ನು ಸ್ವಚ್ಛಗೊಳಿಸಿಲ್ಲ. ಆ ಪ್ರದೇಶದಲ್ಲಿ ಇದರಿಂದ ದುವಾರ್ಸನೆ ಬೀರುತ್ತಿದ್ದು,  ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಸೊಳ್ಳೆಗಳು, ಕ್ರಿಮಿ- ಕೀಟಗಳು ಉತ್ಪತ್ತಿಯಾಗುತ್ತಿದ್ದು ಮಾರಣಾಂತಿಕ ಕಾಯಿಲೆಗಳು ಉಲ್ಬಣಗೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜನರಿಂದ ಮತಗಳಿಸಿ ಆಯ್ಕೆಯಾಗಿರುವ ಪಾಲಿಕೆ ಸದಸ್ಯರು ಪ್ರಚಾರ ಪಡೆಯಲು ಸೀಮಿತರಾಗಿದ್ದು, ನಾಗರೀಕರ ಕುಂದುಕೊರತೆ ಬಗ್ಗೆ ಕಾಳಜಿವಹಿಸುತ್ತಿಲ್ಲ ಎಂದು ಡಾ.ಪ್ರಮೋದ್ ದೂರಿದರು. ಡಿ. ನಾಗಲಕ್ಷ್ಮಿ, ಭುವನಾ, ಗೋವಿಂದ್, ಮಂಜುಳಾ, ವೀರಭದ್ರಯ್ಯ, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.