ಮಂಗಳವಾರ, ಮೇ 24, 2022
31 °C

ಅಕ್ಷರ ದೇಗುಲಕ್ಕೆ ಸ್ವಂತ ಕಟ್ಟಡದ ಅಭಾವ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಪದೇ ಪದೇ ಕಟ್ಟಡ ಬದಲಾವಣೆ. ಆರಂಭಗೊಂಡ ದಿನದಿಂದಲೂ ಬಾಡಿಗೆ ಕಟ್ಟಡವೇ ಸೂರು. ವಿಳಾಸ ಹುಡುಕಲು ಪರದಾಡುವ ಜನರು. ಓದುಗರಿದ್ದರೂ ಸ್ವಂತ ಕಟ್ಟಡ ಇಲ್ಲದ ದುಃಸ್ಥಿತಿ  -ಓದುಗರಲ್ಲಿ ಗೊಂದಲ ಮೂಡಿಸುತ್ತಿರುವ ಪಟ್ಟಣದ ಸಾರ್ವಜನಿಕರ ಗ್ರಂಥಾಲಯದ ವ್ಯಥೆಯ ಕಥೆ ಇದು.ಮಹಾಕವಿ ಷಡಕ್ಷರ, ಸಂಚಿಹೊನ್ನಮ್ಮ, ಮುಪ್ಪಿನ ಷಡಕ್ಷರಿ, ಅಗರಂರಂಗಯ್ಯ, ನಾಟಕಕಾರ ಸಂಸ.. ಹೀಗೆ ರಾಜ್ಯಕ್ಕೆ ಅಮೂಲ್ಯ ಸಾಹಿತ್ಯ ರತ್ನಗಳನ್ನು ನೀಡಿದೆ ಯಳಂದೂರು ತಾಲ್ಲೂಕು. ಇವರು ರಚಿಸಿರುವ ಕೃತಿಗಳು ಈಗಲೂ ಪ್ರಸ್ತುತ. ತಾಲ್ಲೂಕಿನಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಹೆಚ್ಚು. ಆದರೆ ಪಟ್ಟಣದ ಗ್ರಂಥಾಲಯ ಮಾತ್ರ ಇನ್ನೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದು ವಿಪರ್ಯಾಸ.ಪ್ರಸ್ತುತ ಪಟ್ಟಣದ ಬಿ.ಆರ್.ಹಿಲ್ಸ್ ರಸ್ತೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತದೆ. ಆದರೆ ಇಲ್ಲಿ ಸೌಲಭ್ಯಗಳ ಕೊರತೆ ಇದೆ. ಇದು ವರೆಗೆ ನಾಲ್ಕೈದು ಬಾರಿ ಕಟ್ಟಡ ಬದಲಿಸಿದೆ.ಇದರ ಬಗ್ಗೆ ಆಸಕ್ತರಲ್ಲಿ ಅಸಮಧಾನವಿದೆ ಎಂಬುದು ಆರ್.ಗೋಪಾಲಕೃಷ್ಣ ಅವರ ದೂರು.ಹಾಲಿ ಇರುವ ಗ್ರಂಥಾಲಯ ರಸ್ತೆಯ ಪಕ್ಕದಲ್ಲೇ ಇದೆ. ವಾಹನ ಹಾಗೂ ಜನಸಂಖ್ಯೆ ಹೆಚ್ಚಾಗಿ ಇರುವುದರಿಂದ ಓದುಗರಿಗೆ ಕಿರಿಕಿರಿಯಾಗುತ್ತದೆ. ಪ್ರತಿ ಭಾನುವಾರ ಸಂತೆಯೂ ನಡೆಯುವುದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.ಜಾತ್ರೆಯ ಸಂದರ್ಭಗಳಲ್ಲಿ ಕಂಡುಬರುವ ಜನಜಂಗುಳಿಯಿಂದ ಮಹಡಿ ಹತ್ತಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ ಎಂಬುದು ಇಲ್ಲಿನ ಗಂಗವಾಡಿ ಸೋಮಣ್ಣ ಅವರ ಆರೋಪ. ಮಹಿಳೆಯರು ಇಲ್ಲಿಗೆ ಬರುವುದು ತುಂಬಾ ಕಡಿಮೆ. 500ಕ್ಕೂ ಹೆಚ್ಚು ಜನ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.  ‘ಇಲ್ಲಿ 13 ಸಾವಿರ ಪುಸ್ತಕಗಳಿವೆ. ಪ್ರತಿ ನಿತ್ಯ ನೂರಾರು ಓದುಗರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈಗಿರುವ ಕಟ್ಟಡದಲ್ಲಿ 30 ಮಂದಿ ಕೂರಲು ಮಾತ್ರ ಅವಕಾಶವಿದೆ. ಈ ಕಟ್ಟಡವನ್ನು 5 ವರ್ಷಗಳ ಒಪ್ಪಂದದಲ್ಲಿ ಬಾಡಿಗೆಗೆ ಪಡೆಯಲಾಗಿದೆ. ಇನ್ನೂ ಒಂದೂವರೆ ವರ್ಷದೊಳಗೆ ಕಟ್ಟಡ ಒಪ್ಪಂದದ ಕರಾರು ಮುಗಿಯುತ್ತದೆ’ ಎಂದು ಗ್ರಂಥಾಲಯ ಸಹಾಯಕ ನಂಜುಂಡಸ್ವಾಮಿ ತಿಳಿಸಿದರು.‘ಚಾಮರಾಜನಗರ ಜಿಲ್ಲೆಯ ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆಗಳಲ್ಲಿ ಈಗಾಗಲೇ ಅಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಖಾಲಿ ನಿವೇಶನ ಒದಗಿಸಿಕೊಡುವಂತೆ ಮನವಿ ಮಾಡಲಾಗಿದೆ. ಕೋಲ್ಕತ್ತದ ‘ರಾಜಾರಾಂ ಮೋಹನ್ ರಾಯ್ ಫೌಂಡೇಶನ್’ ಸೇರಿದಂತೆ ಹಲವು ಸಂಸ್ಥೆಗಳು ಇದಕ್ಕೆ ಬೇಕಾಗುವ ಕಟ್ಟಡ ನಿರ್ಮಿಸಲು ಹಾಗೂ ಪರಿಕರಗಳ ನೆರವು ನೀಡಲು ಸಿದ್ಧವಿದೆ. ಆದರೆ ಖಾಲಿ ನಿವೇಶನ ದೊರೆಯದ ಕಾರಣ ಬಾಡಿಗೆ ಕಟ್ಟಡಗಳಲ್ಲೇ ಗ್ರಂಥಾಲಯ ನಿರ್ವಹಣೆ ಮಾಡುತ್ತಿಲಾಗುತ್ತದೆ. ಸ್ಥಳೀಯ ಸಂಸ್ಥೆಗಳು ಹಾಗೂ ದಾನಿಗಳು ಸ್ಥಳವನ್ನು ನೀಡಿದ್ದಲ್ಲಿ ಆತ್ಯಂತ ಸುಸಜ್ಜಿತ ಕಟ್ಟಡ ನಿರ್ಮಿಸಿ ಅನುಕೂಲ ಮಾಡಿಕೊಡಲಾಗುತ್ತದೆ’ ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.