ಗುರುವಾರ , ಜೂನ್ 24, 2021
25 °C
ಅಭ್ಯರ್ಥಿಗಳ ಬಗ್ಗೆಯೇ ಚರ್ಚೆ, ಸಂವಾದ

ಅಖಾಡದಲ್ಲಿ ವದಂತಿಗಳದ್ದೇ ಕಾರುಬಾರು!

ವಿಶೇಷ ವರದಿ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕ್ಷೇತ್ರದ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಒಂದೊಂದು ಪಕ್ಷದಿಂದ ಒಂದೊಂದು ರೀತಿಯ ವದಂತಿಗಳು ಹರಡುತ್ತಿವೆ. ಒಂದೆರಡು ಪಕ್ಷಗಳು ಹೊರತುಪಡಿಸಿದರೆ ಇತರ ಪಕ್ಷಗಳು ತನ್ನ ಅಭ್ಯರ್ಥಿ ಯಾರು ಎಂದು ಇನ್ನೂ ಪ್ರಕಟಿಸದ ಹಿನ್ನೆಲೆ­ಯಲ್ಲಿ ಜನರ ಕುತೂಹಲ ತಾರಕಕ್ಕೇರಿದೆ. ಅಷ್ಟೇ ಅಲ್ಲ, ಅಂತಿಮ­ವಾಗಿ ಯಾರ್‌್ಯಾರು ಕಣದಲ್ಲಿ ಉಳಿಯುತ್ತಾರೆ ಎಂಬುದರಿಂದ ಆರಂಭಗೊಂಡು ಸೋಲು–ಗೆಲುವು ಯಾರಿಗೆ ಎಂಬುವವರೆಗೆ ಜನರು ಚರ್ಚಿಸುತ್ತಿದ್ದಾರೆ.ನಿರ್ಲಕ್ಷಿತ ಬರಪೀಡಿತ ಬಯಲುಸೀಮೆ ಪ್ರದೇಶವೆಂದೇ ಗುರುತಿಸಿಕೊಂಡಿರುವ ಕ್ಷೇತ್ರವು ಈಗ ದಿಢೀರ್‌ ದೇಶದ ಗಮನ ಸೆಳೆಯಲು ಆರಂಭಿಸಿದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳ ಅಧಿಕೃತ ಘೋಷಣೆ­ಯಾಗುವುದನ್ನು ಪ್ರತಿಯೊಬ್ಬರು ಕಾತರದಿಂದ ಕಾಯುತ್ತಿದ್ದಾರೆ. ಕೇಂದ್ರ ಸಚಿವರು ಪ್ರತಿನಿಧಿಸಿದಂತಹ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಕುತೂಹಲಕ್ಕೆ ಮುಖ್ಯ ಕಾರಣವಾಗಿದ್ದರೆ, ಜೆಡಿಎಸ್‌ನ ಅಭ್ಯರ್ಥಿ ಯಾರು ಎಂಬುದು ಕೂಡ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ.ಕಾಂಗ್ರೆಸ್: ಎರಡನೇ ಬಾರಿಯೂ ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧಿಸುತ್ತೇನೆಂದು ಆತ್ಮವಿಶ್ವಾಸದಿಂದ ಹೇಳಿದ್ದ ಮೊಯಿಲಿ ಅವರಿಗೇ ಕಾಂಗ್ರೆಸ್ ಹೈಕಮಾಂಡ್‌ ಟಿಕೆಟ್ ನೀಡದಿರುವುದೇ ಜನರಿಗೆ ಅಚ್ಚರಿ ಮೂಡಿಸಿದ್ದರೆ, ಕೇಂದ್ರ ಸಚಿವ,ನಟ ಚಿರಂಜೀವಿ ಅವರನ್ನು ಕಣಕ್ಕಿಳಿಸುವುದರ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿರುವ ಬಗ್ಗೆ ಕೆಲ ಜನರು ಹರ್ಷಗೊಂಡಿದ್ದಾರೆ.  ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ಸಿಗುವುದೇ ಅಥವಾ ಮೂರನೇಯವರ ಪಾಲಾಗುವುದೋ ಎಂಬುದು ನಿಗೂಢವಾಗಿ ಉಳಿದಿದೆ.ಒಂದು ವೇಳೆ ಮೊಯಿಲಿ ಅವರಿಗೆ ಟಿಕೆಟ್‌ ಸಿಗದಿದ್ದರೆ, ಮತ್ತೆ ಸೂಕ್ತ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಜನರು ಹೋಟೆಲ್‌, ಚಹಾ ಅಂಗಡಿಗಳಲ್ಲಿ ಚರ್ಚಿಸುತ್ತಿದ್ದಾರೆ. ಸದ್ಯಕ್ಕೆ ಮಾಜಿ ಸಚಿವ ವಿ.ಮುನಿಯಪ್ಪ, ಕೃಷಿ ಸಚಿವ ಕೃಷ್ಣ ಭೈರೇಗೌಡ, ಮಾಜಿ ಶಾಸಕ ಎಂ.ಆರ್.ಸೀತಾರಾಂ ಮುಂತಾದವರ ಹೆಸರು ಕೇಳಿ ಬರುತ್ತಿವೆ.ಜೆಡಿಎಸ್‌: ಇದರ ಮಧ್ಯೆ ಜೆಡಿಎಸ್‌ ಕಾದು ನೋಡುವ ತಂತ್ರ ಅನುಸರಿ­ಸುತ್ತಿದ್ದು, ಕಾಂಗ್ರೆಸ್‌ ಯಾರನ್ನು ಕಣಕ್ಕೆ ಇಳಿಸಲಿದೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ತನ್ನ ಅಭ್ಯರ್ಥಿ ಪ್ರಕಟಿಸಲು ತೀರ್ಮಾನಿಸಿದೆ. ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯದ ಇತರೆ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಸದ್ಯಕ್ಕೆ ಕಾಯ್ದಿಟ್ಟಿದೆ. ಕಾಂಗ್ರೆಸ್‌ ಸಂಪೂರ್ಣ ಪಟ್ಟಿ ಬಿಡುಗಡೆ ಮಾಡಿದ ನಂತರವಷ್ಟೇ ತಮ್ಮ ಅಭ್ಯರ್ಥಿಗಳ ಪಟ್ಟಿ ಘೋಷಿಸಲು ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.ಈ ನಡುವೆ ಕೋಲಾರದ ಮುಳಬಾಗಲುವಿನಲ್ಲಿ ಸೋಮವಾರ ನಡೆದ ಸಮಾವೇಶದಲ್ಲಿ ಶಾಸಕ ಎಚ್‌.ಡಿ.ಕುಮಾರಸ್ವಾಮಿ, ‘ಚಿಕ್ಕಬಳ್ಳಾಪುರ ಕ್ಷೇತ್ರದಿಂದ ನಾನು ಇಲ್ಲವೇ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವ ಸಾಧ್ಯತೆಯಿದ್ದು, ಇದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗು­ವುದು’ ಎಂದು ಹೇಳಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಇಬ್ಬರಲ್ಲಿ ಯಾರೂ ಸ್ಪರ್ಧಿಸಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಜೆಡಿಎಸ್‌ ಕಾರ್ಯಕರ್ತರು ಕಾತರರಾಗಿದ್ದಾರೆ.‘ಮುಳಬಾಗಲುವಿನಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಎಚ್‌.ಡಿ.ಕುಮಾರ­ಸ್ವಾಮಿ  ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಗ್ಗೆ ಆಶಾ­ಭಾವನೆ ವ್ಯಕ್ತಪಡಿಸಿದ್ದು, ಸ್ಪರ್ಧಿಸುವ ಅಥವಾ ಅನಿತಾ ಸ್ಪರ್ಧಿಸು­ವರೇ ಎಂಬುದು ಸ್ಪಷ್ಟವಾಗಿಲ್ಲ. ಅನಿತಾ ಅವರ ಬದಲಿಗೆ ಕುಮಾರಸ್ವಾಮಿ­ಯವರೇ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ನಮಗೆ ಹೆಚ್ಚು ಸಂತೋಷವಾಗುತ್ತದೆ’ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್‌ ತಿಳಿಸಿದರು. ಇಷ್ಟೆಲ್ಲದರ ನಡುವೆ ಶಾಶ್ವತ ನೀರಾವರಿ ಹೋರಾಟಗಾರ ಡಾ. ಮಧುಸೀತಪ್ಪ, ಉದ್ಯಮಿಗಳಾದ ಮುನೇಗೌಡ, ಶ್ರೀನಿವಾಸಮೂರ್ತಿ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.ಬಿಜೆಪಿ: ಅಭ್ಯರ್ಥಿಗಳು ಯಾರೇ ಸ್ಪರ್ಧಿಸಲಿ, ತಾವು ಮಾತ್ರ ಚುನಾವಣೆ ಎದುರಿಸಲು ಸಿದ್ಧ ಎಂದು ಹೇಳಿರುವ ಬಿಜೆಪಿ ಚುನಾವಣಾ ಅಭ್ಯರ್ಥಿ ಬಿ.ಎನ್‌.ಬಚ್ಚೇಗೌಡ  ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ನಿರ್ವಹಣಾ ಕಚೇರಿಯನ್ನು ಸೋಮ­ವಾರ ಉದ್ಘಾಟಿಸಿದ್ದಾರೆ. ಕ್ಷೇತ್ರದಲ್ಲಿನ ಪಕ್ಷದ ಮುಖಂಡರು ಮತ್ತು ಕಾರ್ಯ­ಕರ್ತರ ಸಂಪರ್ಕದಲ್ಲಿರುವ ಅವರು ಕ್ಷೇತ್ರದಲ್ಲಿ ಒಂದು ಸುತ್ತಿನ ಪ್ರಚಾರ ಕಾರ್ಯ ಈಗಾಗಲೇ ಕೈಗೊಂಡಿದ್ದು, ನಗರ, ಪಟ್ಟಣ ಮತ್ತು ಗ್ರಾಮ­ಮಟ್ಟದಲ್ಲಿ ಸಭೆಗಳನ್ನು ನಡೆಸಿದ್ದಾರೆ.‘ಬೇರೆ ಪಕ್ಷಗಳಿಂದ ಯಾರೇ ಸ್ಪರ್ಧಿಸಲಿ, ಈ ಬಾರಿ ಬಿಜೆಪಿ ಗೆಲ್ಲುವುದು ನಿಶ್ಚಿತ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಅಲೆಯಿದ್ದು, ಜನರು ಅವರ ಪರ ಒಲವು ತೋರುತ್ತಿದ್ದಾರೆ. ಅವರ ಅಲೆಯ ಪ್ರಭಾವದಿಂದಲೇ ಪಕ್ಷವು ಹೆಚ್ಚಿನ ಸ್ಥಾನ ಗಳಿಸಲಿದೆ. ನರೇಂದ್ರ ಮೋದಿಯವರಿಗೆ ಬಲ ತುಂಬಲು ಜನರು ನನಗೆ ಖಂಡಿತವಾಗಿಯೂ ಗೆಲ್ಲಿಸುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಬಿ.ಎನ್‌.ಬಚ್ಚೇಗೌಡ ಹೇಳುತ್ತಾರೆ.ಇನ್ನು ಸಿಪಿಎಂ ಇದೇ ಪ್ರಥಮ ಬಾರಿಗೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಕಣಕ್ಕಿಳಿಯ­ಲಿದ್ದಾರೆ. ಅವರು ಈಗಾಗಲೇ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮಟ್ಟದಲ್ಲಿ ಒಂದು ಸುತ್ತಿನ ಸಭೆಗಳನ್ನು ನಡೆಸಿದ್ದು, ಸಿದ್ಧತೆ ಆರಂಭಿಸಿದ್ದಾರೆ.ಜೆಡಿಯು ಅಭ್ಯರ್ಥಿಯಾಗಿ ಜಿ.ಕೆ.ಸಿ.ರೆಡ್ಡಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಅವರು ಕೂಡ ತಮ್ಮದೇ ಆದ ರೀತಿಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ನಿವೃತ್ತ ಐಜಿಪಿ ಕೆ.ಆರ್ಕೇಶ್‌ ಅವರು ಸ್ಪರ್ಧಿಸು­ವುದು ಬಹುತೇಕ ಖಚಿತವಾಗಿದ್ದು, ಚುನಾವಣಾ ಕಣ ಇನ್ನಷ್ಟು ರಂಗೇರುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.