ಅಖಿಲ ಭಾರತ ಅನುಭವ ಮಂಟಪ: ಇಂದಿನಿಂದ ನಾಡಹಬ್ಬ ಕಾರ್ಯಕ್ರಮ

7

ಅಖಿಲ ಭಾರತ ಅನುಭವ ಮಂಟಪ: ಇಂದಿನಿಂದ ನಾಡಹಬ್ಬ ಕಾರ್ಯಕ್ರಮ

Published:
Updated:

ಗುಲ್ಬರ್ಗ: ವಿಜಯದಶಮಿ ನಾಡಹಬ್ಬದ ಅಂಗವಾಗಿ ಶರಣಬಸವೇಶ್ವರ ಸಂಸ್ಥಾನದ ಅನುಭವ ಮಂಟಪದಲ್ಲಿ ಅ.15 ಸೋಮವಾರದಿಂದ ಅ.24ರವರೆಗೆ 9 ದಿನಗಳ ಕಾಲ ದಾಸೋಹ ಭಂಡಾರಿ ಶರಣಬಸವೇಶ್ವರ ಜಾನಪದ ಮಹಾಕಾವ್ಯದ ಗಮಕ ವಾಚನ, ವ್ಯಾಖ್ಯಾನ, ಸಂಗೀತ ಗಾಯನ ಚಿತ್ರಕಲಾ ಪ್ರದರ್ಶನ ಎನ್ನುವ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಶರಣಬಸವಪ್ಪ ಅಪ್ಪ ತಿಳಿಸಿದರು.ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾಕಾವ್ಯದಲ್ಲಿ ಬರುವ ಶರಣಬಸವೇಶ್ವರರ ಪ್ರಾರ್ಥನೆ, ಜನನ ಮತ್ತು ಬಾಲ್ಯ, ವಿದ್ಯಾಭ್ಯಾಸ ಮತ್ತು ಲಿಂಗದೀಕ್ಷೆ, ಮದುವೆ, ಸುಮಧುರ ಬಾಂಧವ್ಯ, ಕಾಯಕ ದಾಸೋಹ, ಅರಳಗುಂಡಗಿಯ ಶಿವಲೀಲೆಗಳು, ಶರಣಬಸವರು ಮತ್ತು ದಂಡರಾಯ ಶರಣರು,  ಶರಣಬಸವರು ಮತ್ತು ಆದಿ ದೊಡ್ಡಪ್ಪ ಶರಣರು, ಕಲಬುರ್ಗಿಯಲ್ಲಿ ಶರಣಬಸವರ ಲೀಲೆಗಳು ವಿಷಯ ಕುರಿತು ಗಮಕಿಗಳು ಹಾಡಿದರೆ, ಅದಕ್ಕೆ ಪರಿಣತರು ವ್ಯಾಖ್ಯಾನ ನೀಡಿದ್ದಾರೆ. ಅದೇ ಸಮಯದಲ್ಲಿ ವಿವಿಧ ಕಲಾ ಪರಿಣತರು ಆ ಬಗ್ಗೆ ಚಿತ್ರ ಬಿಡಿಸಲಿದ್ದಾರೆ ಎಂದು ಹೇಳಿದರು.ಸೋಮವಾರ ಸಂಜೆ 7 ಗಂಟೆಗೆ ನಡೆಯಲಿರುವ ತಮ್ಮ ಸಾನ್ನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮೈಸೂರು ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಡಾ. ಹುನುಮಣ್ಣ ನಾಯಕ ದೊರೆ ಉದ್ಘಾಟಿಸಲಿದ್ದು, ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷೆ ಡಾ. ನಾಗಾಬಾಯಿ ಬುಳ್ಳಾ ಅಧ್ಯಕ್ಷತೆ ವಹಿಸಲಿದ್ದಾರೆ. ಗುಲ್ಬರ್ಗ ವಿವಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಸ್.ಎ. ಪಾಳೇಕರ, ಕರ್ನಾಟಕ ಕೇಂದ್ರೀಯ ಸಹಾಯಕ ಪ್ರಾಧ್ಯಾಪಕ ಪ್ರೊ. ಗಣಪತಿ ಸಿನ್ನೂರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಪ್ರೊ. ಶಿವರಾಜ ಶಾಸ್ತ್ರಿ ಹೇರೂರ, ಎಸ್.ಜಿ. ಡೊಳ್ಳೇಗೌಡ್ರು, ಪ್ರೊ. ನೀಲಾಂಬಿಕಾ ಪಾಟೀಲ, ಸಿ. ಎಸ್. ಉಗಾಜಿ, ಡಾ. ಸೋಮಶಂಕರ ವಿಶ್ವನಾಥ ಮಠ, ಡಾ. ಬಸವರಾಜ ಇವಳೆ, ಸುರೇಶ ನಂದಗಾಂವ, ಕೃಪಾಸಾಗರ ಗೊಬ್ಬುರ ಇದ್ದರು.ಖಾಸಗಿ ವಿವಿಗೆ ಅನುಮತಿ!

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ 13 ಸ್ನಾತಕೋತ್ತರ ಕೋರ್ಸ್, ಎಂ.ಟಿ.ಎ, ಗಣಿತಶಾಸ್ತ್ರ, ಎಂ.ಬಿ.ಎ, ಎಂ.ಸಿಎ ಮುಂತಾದ ತಾಂತ್ರಿಕ ಪದವಿ ಕಾಲೇಜುಗಳಿದ್ದು, ಇವುಗಳ ಉತ್ತಮ ಗುಣಮಟ್ಟದ ನಿರ್ವಹಣೆಗಾಗಿ ವಿದ್ಯಾವರ್ಧಕ ಸಂಘದ ಪ್ರತ್ಯೇಕ ಖಾಸಗಿ ವಿಶ್ವವಿದ್ಯಾಲಯ ಆರಂಭಿಸಲು ಸರ್ಕಾರದ ಅನುಮತಿ ಕೋರಲಾಗಿದೆ.ಗುಲ್ಬರ್ಗದಲ್ಲಿ 18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ ಎಂಬ ಆಶಯವನ್ನು ಡಾ. ಶರಣಬಸವಪ್ಪ ಅಪ್ಪ ವ್ಯಕ್ತಪಡಿಸಿದರು.ಖಾಸಗಿ ವಿವಿ ಅಸ್ತಿತ್ವಕ್ಕೆ ಬರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಪುರಾಣ, ಪ್ರವಚನ, ಕೀರ್ತನೆಗಳಿಗೆ ಅಕಾಡೆಮಿಕ್ ಶಿಸ್ತು ತರಲು ಪ್ರಯತ್ನಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಿಂದ ಅರ್ಜಿ ಸಲ್ಲಿಸಿದ ಏಕೈಕ ಸಂಸ್ಥೆ ನಮ್ಮದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry