ಅಖಿಲ ಭಾರತ ಕಾರ್ಮಿಕ ಸಮ್ಮೇಳನ ಜ.4ರಿಂದ

7

ಅಖಿಲ ಭಾರತ ಕಾರ್ಮಿಕ ಸಮ್ಮೇಳನ ಜ.4ರಿಂದ

Published:
Updated:

ಬೆಳಗಾವಿ: ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಉದ್ದೇಶದಿಂದ ಜನವರಿ 4ರಿಂದ 6ರವರೆಗೆ ಬೆಂಗಳೂರಿನಲ್ಲಿ 20ನೇ ಅಖಿಲ ಭಾರತ ಕಾರ್ಮಿಕ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಲ್ ಇಂಡಿಯಾ ಯುಟಿಯುಸಿ ಸದಸ್ಯ ಡಾ. ಟಿ.ಎಸ್. ಸುನಿತ್ ಕುಮಾರ ತಿಳಿಸಿದರು.ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಾರ್ಮಿಕ ಸಮ್ಮೇಳನದಲ್ಲಿ ದೇಶದ 20 ರಾಜ್ಯಗಳಿಂದ ವಿವಿಧ ವಲಯಗಳಿಗೆ ಸೇರಿದ ಕಾರ್ಮಿಕ ಸಂಘಗಳಿಂದ ಸಾವಿರಾರು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಬೆಳಗಾವಿಯಿಂದ ಸುಮಾರು 500 ಕಾರ್ಮಿಕರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ' ಎಂದು ಹೇಳಿದರು.`ಜನವರಿ 4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಎಐಯುಟಿಯುಸಿ ಅಧ್ಯಕ್ಷ ಕೃಷ್ಣ ಚಕ್ರವರ್ತಿ ಮುಖ್ಯ ಭಾಷಣ ಮಾಡಲಿದ್ದಾರೆ. ಅದೇ ರೀತಿ ಎಐಯುಟಿಯುಸಿ ಪ್ರಧಾನ ಕಾರ್ಯದರ್ಶಿ ಶಂಕರ್ ಸಹಾ, ಉಪಾಧ್ಯಕ್ಷ ಕೆ. ರಾಧಾಕೃಷ್ಣ ಭಾಷಣ ಮಾಡಲಿದ್ದಾರೆ. ಜನವರಿ 5 ಹಾಗೂ 6 ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಪ್ರತಿನಿಧಿ ಅಧಿವೇಶನ ನಡೆಯಲಿದೆ.ಇದರ ಉದ್ಘಾಟನೆ ಸಂದರ್ಭದಲ್ಲಿ ಸಿರಿಯಾ, ಬಾಂಗ್ಲಾದೇಶ, ಪ್ಯಾಲೆಸ್ತೇನ್, ಶ್ರೀಲಂಕಾ, ಕ್ಯೂಬಾ, ನೇಪಾಳ, ಗ್ರೀಸ್ ದೇಶಗಳ ಟ್ರೇಡ್ ಯೂನಿಯನ್‌ಗಳ ಪ್ರತಿನಿಧಿಗಳು ಸಂದೇಶ ವಿನಿಮಯ ಮಾಡಿಕೊಳ್ಳಲಿದ್ದಾರೆ. ಎಸ್‌ಯುಸಿಐ-ಸಿ ಪ್ರಧಾನ ಕಾರ್ಯದರ್ಶಿ ಪ್ರವಾಶ್ ಘೋಷ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ' ಎಂದು ಅವರು ಮಾಹಿತಿ ನೀಡಿದರು.`ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿ ಕಾಯಂ ಹುದ್ದೆಗಳನ್ನು ತೆಗೆದು ಹಾಕಿ, ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿರುವ ವ್ಯವಸ್ಥೆಯ ವಿರುದ್ಧ ಎಲ್ಲ ಕಾರ್ಮಿಕ ಸಂಘಟನೆಗಳು ಒಗ್ಗಟ್ಟಿನಿಂದ ಹೋರಾಟ ನಡೆಸಲು ಸಜ್ಜಾಗುತ್ತಿದೆ. ಸಿ ಹಾಗೂ ಡಿ ಗ್ರೂಪ್ ನೌಕರರನ್ನು ಹೊರಗುತ್ತಿಗೆ ನೀಡಿ ಪುಡಿಗಾಸು ನೀಡಲಾಗುತ್ತಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅತಿ ಕಡಿಮೆಯ ಗೌರವಧನ ನೀಡಿ ದಿನವಿಡೀ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಕೃಷಿ ಹಾಗೂ ಕಟ್ಟಡ ಕಾರ್ಮಿಕರಿಗೆ ಸರಿಯಾಗಿ ಕೆಲಸ ಸಿಗುತ್ತಿಲ್ಲ. ಹೀಗಾಗಿ ಸಾಮಾಜಿಕ ಹಾಗೂ ಉದ್ಯೋಗ ಭದ್ರತೆ ಇಲ್ಲದೇ ಕಾರ್ಮಿಕರ ಕುಟುಂಬ ಬೀದಿ ಪಾಲಾಗುತ್ತಿವೆ' ಎಂದು ಸುನಿತ್ ಕುಮಾರ ಆತಂಕ ವ್ಯಕ್ತಪಡಿಸಿದರು.`ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಸರಿಯಾಗಿ ಕೆಲಸ ನೀಡಲಾಗುತ್ತಿಲ್ಲ. ನಕಲಿ ದಾಖಲೆ ಸೃಷ್ಟಿಸಿ ಕಾರ್ಮಿಕರಿಗೆ ಕೆಲಸ ನೀಡದೇ ಹಣ ಪಡೆಯಲಾಗುತ್ತಿದೆ. ಈ ಯೋಜನೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ' ಎಂದು ಹೇಳಿದರು.`ಜಾತಿವಾದ, ಕೋಮುವಾದಗಳಿಂದ ಕಾರ್ಮಿಕ ಸಂಘಟನೆಗಳನ್ನು ಒಡೆಯುವ ಯತ್ನ ನಡೆಯುತ್ತಿದೆ. ಎಡಪಂಥೀಯ ಕಾರ್ಮಿಕ ಸಂಘಟನೆಗಳು ಆರ್ಥಿಕ ಹಾಗೂ ಕಾನೂನು ವಾದಕ್ಕೇ ಹೆಚ್ಚು ಮಹತ್ವ ನೀಡಿರುವುದೇ ಇಂದು ಕಾರ್ಮಿಕ ಸಂಘಟನೆಗಳು ದುರ್ಬಲಗೊಳ್ಳಲು ಮುಖ್ಯ ಕಾರಣವಾಗಿದೆ. ಹಲವು ಬಾರಿ ಆರ್ಥಿಕ ಲಾಭಕ್ಕಷ್ಟೇ ಹೋರಾಟ ನಡೆಸಲಾಗುತ್ತದೆ. ನೈತಿಕತೆಯ ಹೋರಾಟಕ್ಕೆ ಮಹತ್ವ ನೀಡುತ್ತಿಲ್ಲ. ಬೇರೆ ವಲಯಗಳ ಸಮಸ್ಯೆಗಳ ಬಗ್ಗೆ ಇನ್ನೊಂದು ಕಾರ್ಮಿಕ ಸಂಘಟನೆಗಳು ಧ್ವನಿ ಎತ್ತುತ್ತಿಲ್ಲ.ವಿಪರ್ಯಾಸವೆಂದರೆ, ಶೈಕ್ಷಣಿಕ ಸುಧಾರಣೆಯ ದೋಷಗಳ ಬಗ್ಗೆ ಶಿಕ್ಷಕರೇ ಪ್ರತಿಕ್ರಿಯಿಸುವುದಿಲ್ಲ. ಅವರು ಕೇವಲ ತಮ್ಮ ಸಂಬಳ ಹೆಚ್ಚಿಸಿಕೊಳ್ಳುವಂತಹ ಬೇಡಿಕೆಗಳಿಗಾಗಿ ಮಾತ್ರ ಹೋರಾಟ ನಡೆಸುತ್ತಿದ್ದಾರೆ' ಎಂದು ಅವರು ವಿಷಾದಿಸಿದರು. ಆಲ್ ಇಂಡಿಯಾ ಯುಟಿಯುಸಿ ಜಿಲ್ಲಾ ಸಮಿತಿಯ ಲಕ್ಷ್ಮಣ ಜಡಗನ್ನವರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry