ಅಖಿಲ ಭಾರತ ವಾಲಿಬಾಲ್: ಕರ್ನಾಟಕ ಹ್ಯಾಟ್ರಿಕ್ ಚಾಂಪಿಯನ್

7

ಅಖಿಲ ಭಾರತ ವಾಲಿಬಾಲ್: ಕರ್ನಾಟಕ ಹ್ಯಾಟ್ರಿಕ್ ಚಾಂಪಿಯನ್

Published:
Updated:

ಬೆಂಗಳೂರು:   ಕರ್ನಾಟಕ ತಂಡದವರು ಇಲ್ಲಿ ಕೊನೆಗೊಂಡ 11ನೇ ಅಖಿಲ ಭಾರತ ಬಿಎಸ್‌ಎನ್‌ಎಲ್ ವಾಲಿಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು. ಈ ಸಂಭ್ರಮದ ಜೊತೆಗೆ ಸತತ ಮೂರನೇ ಸಲವೂ ಪ್ರಶಸ್ತಿ ಜಯಿಸಿ `ಹ್ಯಾಟ್ರಿಕ್~ ಚಾಂಪಿಯನ್ ಆಗಿ ತವರು ನೆಲದ ಪ್ರೇಕ್ಷಕರ ಎದುರು ಸಂಭ್ರಮಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ 28-26, 25-22, 23-25, 25-16ರಲ್ಲಿ ಕಳೆದ ಸಲದ ರನ್ನರ್ ಅಪ್ ತಮಿಳುನಾಡು ತಂಡವನ್ನು ಸೋಲಿಸಿತು. ಈ ಮೂಲಕ ಕರ್ನಾಟಕ ತಂಡ ನಾಲ್ಕನೇ ಸಲ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಕಳೆದ ವರ್ಷ ಪ್ರಶಸ್ತಿ ಸನಿಹ ಎಡವಿದ್ದ ಪ್ರವಾಸಿ ತಮಿಳುನಾಡು ಈ ವರ್ಷವೂ ಸಹ ಅದೇ ತಪ್ಪು ಮಾಡಿತು. ಆದ್ದರಿಂದ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು.

ತೀವ್ರ ಪೈಪೋಟಿ ಎದುರಾದರೂ, ಆತಿಥೇಯ ಆಟಗಾರರು ಅತ್ಯುತ್ತಮ ಸ್ಮ್ಯಾಷ್ ಹಾಗೂ ಬ್ಲಾಕ್‌ಗಳನ್ನು ಸಿಡಿಸಿದರು. ಇದರಿಂದ ಗೆಲುವು ಯಾರಿಗೆ ಎನ್ನುವ ಕುತೂಹಲ ಮೂಡಿತ್ತು. ಮೊದಲ ಸೆಟ್‌ನಲ್ಲಿ ಗೆಲುವಿನ ನಗೆ ಬೀರಿದ್ದ ಕರ್ನಾಟಕ ಎರಡನೇ ಸೆಟ್‌ನಲ್ಲಿ ಭಾರಿ ಪ್ರತಿರೋಧ ಎದುರಿಸಿತು. ಕರ್ನಾಟಕ ತಂಡದ ನಾಯಕ ರವಿ ಕುಮಾರ್ ಉತ್ತಮ ಸ್ಮ್ಯಾಷ್ ಹಾಗೂ ಸರ್ವ್ ಮಾಡಿ ಪ್ರಭಾವಿ ಎನಿಸಿದರು. ಇದು ಆತಿಥೇಯರು ನಾಲ್ಕನೇ ಸಲ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಕಾರಣವಾಯಿತು.

ನಾಯಕನ ಆಟಕ್ಕೆ ಎಂ. ಗಣೇಶ್ ರೈ, ಮಾರುತಿ ಜೆ. ನಾಯಕ್ ಹಾಗೂ ಅನಿಲ್ ಬೆರ್ನಾರ್ಡ್ ಉತ್ತಮ ಸಾಥ್ ನೀಡಿದರು. ಆದರೂ ಮೂರನೇ ಸೆಟ್‌ನಲ್ಲಿ ರವಿ ಕುಮಾರ್ ಪಡೆ ನಿರಾಸೆ ಅನುಭವಿಸಿತು. ಈ ಸೆಟ್‌ನಲ್ಲಿ ಪಡೆದ ಗೆಲುವಿನಿಂದ ತಮಿಳುನಾಡು ಮರು ಹೋರಾಟದ ಸೂಚನೆ ನೀಡಿತು. ಆದರೆ, ರಾಜ್ಯದ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.

ವಿಶೇಷವೆಂದರೆ ಕರ್ನಾಟಕ ತಂಡ ಈ ಸಲದ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲಿ ಸೋಲು ಕಾಣಲಿಲ್ಲ. ಲೀಗ್, ಸೂಪರ್ ಲೀಗ್‌ನ ಎಲ್ಲಾ ಪಂದ್ಯಗಳಲ್ಲಿ ಗೆಲುವು ಸಾಧಿಸಿತು. ಕೊನೆಗೆ ಚಾಂಪಿಯನ್ ಆಗಿ ಬೀಗಿತು.

ರಾಜಸ್ತಾನಕ್ಕೆ ಮೂರನೇ ಸ್ಥಾನ: ಮೂರನೇ ಸ್ಥಾನಕ್ಕೆ ನಡೆದ ಹಣಾಹಣಿಯಲ್ಲಿ ರಾಜಸ್ತಾನ ಗೆಲುವು ಸಾಧಿಸಿತು. ಈ ತಂಡ  19-25, 17-25,25-22,25-20, 15-13ರಲ್ಲಿ ಬಿಹಾರ ತಂಡವನ್ನು ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry