ಅಗತ್ಯ ಸೌಲಭ್ಯಗಳಿಗೆ ಆಗ್ರಹಿಸಿ ಎಸಿಗೆ ಮುತ್ತಿಗೆ

7

ಅಗತ್ಯ ಸೌಲಭ್ಯಗಳಿಗೆ ಆಗ್ರಹಿಸಿ ಎಸಿಗೆ ಮುತ್ತಿಗೆ

Published:
Updated:

ಲಿಂಗಸುಗೂರ (ಮುದಗಲ್ಲ):  ತಾಲ್ಲೂಕಿನ ಮುದಗಲ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್‌ಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಆಡಳಿತ ಮಂಡಳಿ ವಿಫಲವಾದ ಬಗ್ಗೆ ಹತ್ತು ಹಲವು ಬಾರಿ ಹೋರಾಟ ಮಾಡಿದ್ದರೂ ಯಾವೊಬ್ಬ ಅಧಿಕಾರಿಗಳು ಸ್ಪಂದಿಸಿರಲಿಲ್ಲ.ಮುದಗಲ್ಲ ಪಟ್ಟಣಕ್ಕೆ ಮಂಗಳವಾರ ಆಕಸ್ಮಿಕ ಭೇಟಿ ನೀಡಿದ್ದ ಸಹಾಯಕ ಆಯುಕ್ತ ಟಿ. ಯೊಗೇಶ ಅರಿಗೆ ರೋಸಿ ಹೋಗಿದ್ದ ನಾಗರಿಕರು ಮುತ್ತಿಗೆ ಹಾಕಿ ಅಗತ್ಯ ಸೌಲಭ್ಯಗಳ ಪೂರೈಕೆಗೆ ಆಗ್ರಹಪಡಿಸಿದ ಪ್ರಸಂಗ ವರದಿಯಾಗಿದೆ.ಪಟ್ಟಣದ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿರುವ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಬಹುತೇಕ ಕಾಮಗಾರಿಗಳು ಕಳಪೆಯಾಗಿವೆ. ಸಾಮೂಹಿಕ ಶೌಚಾಲಯ ಮತ್ತು ಮೂತ್ರಾಲಯಗಳಿಲ್ಲದೆ ನಾಗರಿಕರು ಪರದಾಡುತ್ತಿದ್ದಾರೆ. ಕೆಲ ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಚರಂಡಿಗಳ ಅವ್ಯವಸ್ಥೆಯಿಂದ ರಸ್ತೆಗಳು ಕಲುಷಿತಗೊಂಡು ದುರ್ನಾತ ಬೀರುತ್ತಿವೆ. ಕನಿಷ್ಠ ಅಗತ್ಯ ಸೌಲಭ್ಯಗಳನ್ನು ಪೂರೈಸುವಲ್ಲಿ ನಡೆದಿರುವ ತಾರತಮ್ಯದ ಬಗ್ಗೆ ಗಮನ ಸೆಳೆದರು.ವಿವಿಧ ಪಕ್ಷಗಳ, ಸಂಘಟನೆಗಳ ಪ್ರಮುಖರ ಅಹವಾಲು ಸ್ವೀಕರಿಸಿ, ಕೆಲ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದ ಸಹಾಯಕ ಆಯುಕ್ತ ಟಿ. ಯೊಗೇಶ, ಈ ಕುರಿತಂತೆ ಮುಖ್ಯಾಧಿಕಾರಿ ಮತ್ತು ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಟ್ಟಣದ ಜನತೆಗೆ ಕನಿಷ್ಠ ಸೌಲಭ್ಯಗಳನ್ನು ನೀಡುವಲ್ಲಿ ಆಗಿರುವ ಲೋಪ ತಮಗೂ ಬೇಸರ ಮೂಡಿಸಿದೆ. ಮುಗ್ಧ ಜನತೆಗೆ ಇಷ್ಟೊಂದು ಅನ್ಯಾಯ ಆಗಬಾರದು ಎಂದು ಕಳವಳ ವ್ಯಕ್ತಪಡಿಸಿದರು.ಮುಖಂಡರಾದ ರಜನಿಕಾಂತಶೆಟ್ಟಿ, ಎಲ್.ಟಿ. ನಾಯಕ, ಮಹಾಂತೇಶ ಪಾಟೀಲ, ರಾಜುಗೌಡ ಪಾಟೀಲ, ತಮ್ಮಣ್ಣ ಗುತ್ತೆದಾರ, ಸಂಗಮೇಶ ಮೂಲಮಠ, ಶರಣಪ್ಪ ಕಟ್ಟಿಮನಿ, ಅತ್ಯಪ್ಪ ವಡ್ಡರ, ರಘವೇಂದ್ರ ದೇಶಪಾಂಡೆ ಹಾಗೂ ಜಯಕರ್ನಾಟಕ, ಕರವೇ, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮುತ್ತಿಗೆ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry