ಅಗಲಿದ ನಟನಿಗೆ ಅಂತಿಮ ನಮನ

7

ಅಗಲಿದ ನಟನಿಗೆ ಅಂತಿಮ ನಮನ

Published:
Updated:

ಬೆಂಗಳೂರು: ಶುಕ್ರವಾರ ನಿಧನರಾದ ಹಾಸ್ಯನಟ, ರಂಗಭೂಮಿ ಕಲಾವಿದ ಕರಿಬಸವಯ್ಯ ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರಾದ ತ್ಯಾಮಗೊಂಡ್ಲು ಸಮೀಪದ ಕೊಡಿಗೇಹಳ್ಳಿಯಲ್ಲಿ ಶನಿವಾರ ಸಂಜೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.ಇದಕ್ಕೂ ಮುನ್ನ ಅವರ ಪಾರ್ಥಿವ ಶರೀರವನ್ನು ನಂದಿನಿ ಬಡಾವಣೆಯಲ್ಲಿನ ಅವರ ಮನೆಯಿಂದ ಅವರು ಕೆಲಸ ಮಾಡುತ್ತಿದ್ದ ಶೇಷಾದ್ರಿಪುರ ಕಾಲೇಜು, ನಂತರ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇರಿಸಲಾಗಿತ್ತು.ಸಾಹಿತಿಗಳು, ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ, ಕಿರುತೆರೆ, ಸಿನಿಮಾ ನಟ- ನಟಿಯರು, ಗಾಯಕರು, ಕಲಾವಿದರು, ತಂತ್ರಜ್ಞರು, ಅಭಿಮಾನಿಗಳು ಅಗಲಿದ ನಟನಿಗೆ ಅಂತಿಮ ಗೌರವ ಸಲ್ಲಿಸಿದರು.ಮುಖ್ಯಮಂತ್ರಿ ಡಿ.ವಿ.ಸದಾ ನಂದಗೌಡ, ವಿಧಾನಸಭೆಯ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ    ಕೆ.ಎಸ್.ಈಶ್ವರಪ್ಪ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಮಾಲತಿ ಸುಧೀರ್ ಮೊದಲಾದವರು ಅಂತಿಮ ದರ್ಶನ ಪಡೆದರು. ಚಲನಚಿತ್ರ ಕಲಾವಿದರಾದ ಲೀಲಾವತಿ, ಎಂ.ಎನ್.ಲಕ್ಷ್ಮೀದೇವಿ, ಉಮಾಶ್ರೀ, ಶ್ರೀನಿವಾಸಮೂರ್ತಿ, ಹೊನ್ನವಳ್ಳಿ ಕೃಷ್ಣ, ಸುಂದರರಾಜ್ ಮೊದಲಾದವರು ಅಂತಿಮ ವಿದಾಯ ಹೇಳಿದರು.ಗಾಯಕ ರಾಜಗುರು ಹೊಸಕೋಟೆ ಮತ್ತು ಇತರರು ಜನಪದ ಮತ್ತು ತತ್ವ ಪದಗಳು ಹಾಗೂ ರೂಪಾಂತರ ತಂಡದ ಸದಸ್ಯರು ರಂಗಗೀತೆಗಳನ್ನು ಹಾಡುವ ಮೂಲಕ ಗಾಯನ ನಮನ ಸಲ್ಲಿಸಿದರು.ನೆಲಮಂಗಲ ವರದಿ: ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗ, ತ್ಯಾಮಗೊಂಡ್ಲು ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿ ಕೆಲಕಾಲ ಕರಿಬಸವಯ್ಯನವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಾತ್ರವಲ್ಲದೇ ಕೊಡಿಗೆಹಳ್ಳಿವರೆಗೂ ಪಾರ್ಥಿವ ಶರೀರವನ್ನು ಮೆರ ವಣಿಗೆಯಲ್ಲಿ ಕೊಂಡೊಯ್ಯಲಾಯಿತು.ದಾರಿಯುದ್ದಕ್ಕೂ ಗ್ರಾಮಸ್ಥರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಲಾಪ್ರೇಮಿಗಳು ಅಗಲಿದ ಕಲಾವಿದನ ದರ್ಶನ ಪಡೆದು, ಗೌರವ ಸಲ್ಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry