ಅಗಲಿದ ನಾಯಕ ಎಂಪಿಪಿಗೆ ಶ್ರದ್ಧಾಂಜಲಿ

7

ಅಗಲಿದ ನಾಯಕ ಎಂಪಿಪಿಗೆ ಶ್ರದ್ಧಾಂಜಲಿ

Published:
Updated:

ಹರಪನಹಳ್ಳಿ: ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ಅವರ ನಿಧನಕ್ಕೆ ಎನ್‌ಎಸ್‌ಯುಐ ಸಂಘಟನೆ ಗುರುವಾರ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿತು.ಕವಯಿತ್ರಿ ಸುಭದ್ರಾ ಮಾಡ್ಲಿಗೇರಿ ಮಾತನಾಡಿ, ಕಲುಷಿತ ರಾಜಕೀಯದ ನಡುವೆಯೂ ಎಂಪಿಪಿ ಕಳಂಕರಹಿತ ಸಜ್ಜನ, ಸೃಜನಾಶೀಲ  ರಾಜಕಾರಣಿ. ಸಾಹಿತ್ಯ, ಸಂಸ್ಕೃತಿ, ಇತಿಹಾಸ, ಕಲೆ, ರಂಗಭೂಮಿ -ಹೀಗೆ ‘ಆಡುಮುಟ್ಟದ ಗಿಡವಿಲ್ಲ; ಪ್ರಕಾಶ್ ಪಯಣಿಸದ ಕ್ಷೇತ್ರವಿಲ್ಲ’ ಎಂಬಂತೆ ಸಾಮಾಜಿಕ ಬದುಕಿನ ನಾನಾ ಆಯಾಮಗಳಲ್ಲಿ ತಮ್ಮ ತೊಡಗಿಸಿಕೊಂಡು ಮಾದರಿಯಾಗಿದ್ದರು ಎಂದು ಸ್ಮರಿಸಿದರು.ಎನ್‌ಎಸ್‌ಯುಐ ಸಂಘಟನೆಯ ತಾಲ್ಲೂಕು ಸಮಿತಿ ಅಧ್ಯಕ್ಷ ಶಿವಕುಮಾರನಾಯ್ಕ ಮಾತನಾಡಿ, ಸದಾ ಸಮಾಜಮುಖಿಯಾಗಿ ಚಿಂತಿಸುತ್ತಿದ್ದ, ಸೋಲು-ಗೆಲುವುಗಳನ್ನು ಸಮಭಾವದಿಂದ ಸ್ವೀಕರಿಸುತ್ತಿದ್ದ ಅಪರೂಪದ ರಾಜಕಾರಣಿ. ಸಾಹಿತ್ಯ ಹಾಗೂ ರಾಜಕಾರಣ ಎರಡೂ ಕ್ಷೇತ್ರಗಳಲ್ಲಿಯೂ ಆಳವಾದ ಬೇರು ಹೊಂದಿದ್ದ ಅವರು ಅತ್ಯುತ್ತಮ ಸಂಸದೀಯ ಪಟು ಎಂದರು.ಮುಖಂಡರಾದ ಮಾರುತಿ, ಟಿ.ಎಸ್. ಮಂಜುನಾಥ, ಗೋಣೆಪ್ಪ, ಮೇಘರಾಜ, ವಸಂತ, ಧನಂಜಯ, ಕಿರಣ್, ಪ್ರಕಾಶ್ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.ಅಂತಿಮ ದರ್ಶನ ಎಂಪಿಪಿ ಅವರ ಪಾರ್ಥಿವ ಶರೀರ ಪಟ್ಟಣಕ್ಕೆ ಬುಧವಾರ ರಾತ್ರಿ 11.45ಕ್ಕೆ ಆಗಮಿಸಿತು. ಸ್ಥಳೀಯ ಅಂಬ್ಲಿ ದೊಡ್ಡಭರಮಪ್ಪ ಪ್ರಥಮದರ್ಜೆ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.ಮಧ್ಯಾಹ್ನದಿಂದಲೂ ಮೃತರ ಅಂತಿಮ ದರ್ಶನಕ್ಕಾಗಿ ಶೋಕ ಸಾಗರದಲ್ಲಿ ಕಾದು ಕುಳಿತ ಅವರ ಅಭಿಮಾನಿಗಳು, ಗಣ್ಯರು ಪಾರ್ಥಿವ ಗಂಟಲು ತುಂಬಿಕೊಂಡಿದ್ದ ದುಃಖದ ನಡುವೆ ಶರೀರಕ್ಕೆ ಪುಷ್ಟಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು.ತೆಗ್ಗಿನಮಠದ ಚಂದ್ರಮೌಳೀಶ್ವರ ಸ್ವಾಮೀಜಿ, ನಿಚ್ಚವ್ವನಹಳ್ಳಿ ಹಾಲಸ್ವಾಮೀಜಿ ಹಾಗೂ ಮಾಜಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಟೇಲ್ ಬೆಟ್ಟನಗೌಡ, ವಿವಿಧ ಬ್ಲಾಕ್ ಸಮಿತಿ ಅಧ್ಯಕ್ಷರಾದ ಎಚ್.ಕೆ. ಹಾಲೇಶ್, ಬಿ.ಕೆ. ಪ್ರಕಾಶ್, ಎಸ್.ಮಂಜುನಾಥ, ಸೇರಿದಂತೆ ವಿವಿಧ ಗಣ್ಯರು ಅಂತಿಮ ದರ್ಶನ ಪಡೆದರು.ತಾಲ್ಲೂಕು ಆಡಳಿತದ ಪರವಾಗಿ ಉಪ ವಿಭಾಗಾಧಿಕಾರಿ ಕೆ. ಶ್ರೀನಿವಾಸ್, ಡಿವೈಎಸ್‌ಪಿ ಅನಿತಾ ಬಿ. ಹದ್ದಣ್ಣವರ್, ತಹಶೀಲ್ದಾರ್ ಟಿ.ವಿ. ಪ್ರಕಾಶ್, ಸಿಪಿಐ ಬಸವರಾಜ್ ಸೇರಿದಂತೆ ಹಲವು ಅಧಿಕಾರಿಗಳು ಮೃತರಿಗೆ ಗೌರವ ಸಲ್ಲಿಸಿದರು.ನಂತರ ಪಾರ್ಥಿವ ಶರೀರ ಹೊತ್ತ ಸೆಂಟ್ ಪೀಟರ್ ಸ್ಥಿರವಾಹನ ಹೊಸಪೇಟೆ ರಸ್ತೆ ಮುಖಾಂತರ ಪ್ರವಾಸಿಮಂದಿರ ವೃತ್ತದವರೆಗೂ ಮೆರವಣಿಗೆಯಲ್ಲಿ ಸಾಗಿತು. ಹೂವಿನಹಡಗಲಿಗೆ ಬೀಳ್ಕೊಡಲಾಯಿತು.ಸಚಿವ ರೆಡ್ಡಿ ಸಂತಾಪ


ಎಂಪಿಪಿ ನಿಧನಕ್ಕೆ ಕಂದಾಯ ಸಚಿವ ಜಿ. ಕರುಣಾಕರರೆಡ್ಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಗುರುವಾರ ಪ್ರಕಾಶ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ತೆರಳುವ ಮುನ್ನ ತಮ್ಮ ಖಾಸಗಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವಾದಿ ಹಿನ್ನೆಲೆಯಿಂದ ಬಂದಿರುವ ಅವರು ನಾಡು ಕಂಡ ಅಪ್ರತಿಮ ಸಂಸದೀಯ ಪಟು. ಉತ್ತಮ ವಾಗ್ಮಿ. ಕಲೆ, ಸಾಹಿತ್ಯ ಹಾಗೂ ರಾಜಕಾರಣ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಛಾಪು ಮೂಡಿಸಿದ ಮಹಾ ಮೇಧಾವಿ ಎಂದು ಮೃತರ ಗುಣಗಾನ ಮಾಡಿದರು.ಪ್ರಕಾಶ್ ಅವರನ್ನು ಕಳೆದುಕೊಂಡ ರಾಜಕಾರಣ ಹಾಗೂ ರಂಗಭೂಮಿ ಎರಡು ಕ್ಷೇತ್ರಗಳಲ್ಲಿಯೂ ಕಾರ್ಮೋಡ ಕವಿದಂತಾಗಿದೆ. ಸಂಯುಕ್ತ ಜನತಾದಳ ಹಾಗೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಸಂದರ್ಭದಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸುಷ್ಮಾ ಸ್ವರಾಜ್ ಹಾಗೂ ಕ್ಷೇತ್ರವ್ಯಾಪ್ತಿಯ ಹೂವಿನಹಡಗಲಿ ಮತಕ್ಷೇತ್ರದಲ್ಲಿ ಪ್ರಕಾಶ್  ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ತಮ್ಮ ಹಾಗೂ ಪ್ರಕಾಶ್ ಸಂಬಂಧವನ್ನು ಸಚಿವರು ಸ್ಮರಿಸಿಕೊಂಡರು.ಪ್ರಕಾಶ್ ಅಗಲಿಕೆಯಿಂದ ಶೋಕಸಾಗರದಲ್ಲಿ ಮುಳುಗಿರುವ ಅವರ ಕುಟುಂಬ ವರ್ಗಕ್ಕೆ ಭಗವಂತ ದುಃಖ ಸಹಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಆರುಂಡಿ ನಾಗರಾಜ, ಪುರಸಭೆಯ ಅಧ್ಯಕ್ಷ ಬಿ. ಮಹಬೂಬ್ ಸಾಹೇಬ್, ಉಪಾಧ್ಯಕ್ಷೆ ಸುಮಿತ್ರಾ ಬಾಪೂಜಿ, ಸದಸ್ಯರಾದ ಉದ್ದಾರ ದೀಪಾ, ಡಿ. ಅಬ್ದುಲ್ ರಹಿಮಾನ್, ಅಪ್ಸರಾಬಿ, ಮುಖಂಡರಾದ ಗಿರಿರಾಜರೆಡ್ಡಿ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry