ಅಗಲಿದ ನಾಯಕ ಎಂ.ಪಿ.ಪ್ರಕಾಶ್ ಗೆ ಸಹಸ್ರಾರು ಜನರಿಂದ ಅಶ್ರುತರ್ಪಣ

7

ಅಗಲಿದ ನಾಯಕ ಎಂ.ಪಿ.ಪ್ರಕಾಶ್ ಗೆ ಸಹಸ್ರಾರು ಜನರಿಂದ ಅಶ್ರುತರ್ಪಣ

Published:
Updated:

ಬೆಂಗಳೂರು: ಸ್ವಾತಂತ್ರ್ಯ ಉದ್ಯಾನದ ತುಂಬ ಸೋಮವಾರ ಇಡೀ ದಿನ ಎಂ.ಪಿ.ಪ್ರಕಾಶ್ ನೆನಪು ತುಂಬಿತ್ತು. ಸಾವಿರ -ಸಾವಿರ ಸಂಖ್ಯೆಯಲ್ಲಿ ಹರಿದುಬಂದ ಅವರ ಒಡನಾಡಿಗಳು, ಅಭಿಮಾನಿಗಳು, ರಂಗಕರ್ಮಿಗಳು, ಬರಹಗಾರರು, ವಿದ್ಯಾರ್ಥಿಗಳು ಅಗಲಿದ ಮುತ್ಸದ್ದಿಗೆ ಅಂತಿಮನಮನ ಸಲ್ಲಿಸಿದರು.ದೀರ್ಘ ಕಾಲದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪ್ರಕಾಶ್ ಬೆಳಗಿನ ಜಾವ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಬೆಳಿಗ್ಗೆ 8.30ಕ್ಕೆ ಸ್ವಾತಂತ್ರ್ಯ ಉದ್ಯಾನಕ್ಕೆ ಅವರ ಪಾರ್ಥೀವ ಶರೀರವನ್ನು ತರಲಾಯಿತು. ಉದ್ಯಾನದ ಒಳಗಿರುವ ಸಭಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.ಬೆಳಿಗ್ಗೆಯೇ ಸುದ್ದಿ ತಿಳಿದ ಪ್ರಕಾಶ್ ಒಡನಾಡಿಗಳು ಅವರ ಅಂತಿಮ ದರ್ಶನ ಪಡೆಯಲು ಧಾವಿಸಿದರು. ಮಧ್ಯಾಹ್ನ 1.45ರವರೆಗೂ ಸಾವಿರಾರು ಸಂಖ್ಯೆಯ ಜನರು ಅಂತಿಮ ನಮನ ಸಲ್ಲಿಸಿದರು. ಅವರ ಒಡನಾಡಿಗಳು, ರಾಜಕೀಯ ನಾಯಕರು ಪ್ರಕಾಶ್ ಜೊತೆಗಿನ ಕ್ಷಣಗಳನ್ನು ಸ್ಮರಿಸಿಕೊಂಡರು. ಗಾಯಕ-ಗಾಯಕಿಯರು ಗೀತನಮನದ ಮೂಲಕ ಗೌರವ ಸಲ್ಲಿಸಿದರು.ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಸಚಿವರಾದ ಎಸ್.ಸುರೇಶ್‌ಕುಮಾರ್, ವಿ. ಸೋಮಣ್ಣ, ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಬಿ.ಎನ್.ಬಚ್ಚೇಗೌಡ, ಮಾಜಿ ಸಂಸದ ಆರ್.ಎಲ್.ಜಾಲಪ್ಪ, ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯ ಸೇರಿದಂತೆ ಹಲವರು ಪ್ರಕಾಶ್ ಅವರ ಅಂತಿಮ ದರ್ಶನ ಪಡೆದರು.‘ನಿಜವಾದ ಅಜಾತಶತ್ರು’: ಪ್ರಕಾಶ್ ಜೊತೆಗಿನ ತಮ್ಮ ಒಡನಾಟ ನೆನಪಿಸಿಕೊಂಡ ಸಿದ್ದರಾಮಯ್ಯ, ‘ಮೂರು ದಶಕಗಳಿಂದ ನಾನು ಮತ್ತು ಅವರು ಸ್ನೇಹಿತರು. ಅವರನ್ನು ತುಂಬಾ ಹತ್ತಿರದಿಂದ ಬಲ್ಲವರಲ್ಲಿ ನಾನು ಕೂಡ ಒಬ್ಬ. ರಾಜ್ಯ ರಾಜಕಾರಣದಲ್ಲಿ ಎಲ್ಲರ ಪ್ರೀತಿಯನ್ನೂ ಗಳಿಸಿದ್ದ ಅವರು ನಿಜವಾದ ಅರ್ಥದಲ್ಲಿ ಅಜಾತ ಶತ್ರು ಆಗಿದ್ದರು’ ಎಂದರು.‘ಕರ್ನಾಟಕ ಕಂಡ ಅತ್ಯುತ್ತಮ ಸಂಸದೀಯ ಪಟುಗಳಲ್ಲಿ ಪ್ರಕಾಶ್ ಸೇರಿದ್ದರು. ಅತ್ಯಂತ ಕ್ಲಿಷ್ಟ ಸಂದರ್ಭಗಳಲ್ಲಿ ಅವರು ಸದನವನ್ನು ನಾಜೂಕಾಗಿ ನಿಯಂತ್ರಿಸುತ್ತಿದ್ದರು. ಸಚಿವರಾಗಿದ್ದ ಸಂದರ್ಭಗಳಲ್ಲಿ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದ ಅವರು ಮಾದರಿ ರಾಜಕಾರಣಿ’ ಎಂದು ಸ್ಮರಿಸಿದರು.‘ಅಹಂ ಇರಲಿಲ್ಲ’: ‘ಹಿರಿಯರಾದರೂ ಪ್ರಕಾಶ್ ಅವರಿಗೆ ಅಹಂ ಇರಲಿಲ್ಲ. ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವಾಗ ನಾನು ಖುದ್ದಾಗಿ ಅವರನ್ನು ಭೇಟಿಮಾಡಿ ಮುಖ್ಯಮಂತ್ರಿ ಹುದ್ದೆ ಒಪ್ಪಿಕೊಳ್ಳುವಂತೆ ಮನವಿ ಮಾಡಿದ್ದೆ. ದೇವೇಗೌಡರ ಜೊತೆಯಲ್ಲೇ ಉಳಿಯಲು ಬಯಸಿದ್ದ ಅವರು ಮುಖ್ಯಮಂತ್ರಿ ಆಗಲು ಒಪ್ಪಿರಲಿಲ್ಲ’ ಎಂದು ಕುಮಾರಸ್ವಾಮಿ ಹೇಳಿದರು.ಪಾರ್ಥೀವ ಶರೀರದ ಬಳಿ ಗಳಗಳನೆ ಅತ್ತ ಸಚಿವ ಬಸವರಾಜ ಬೊಮ್ಮಾಯಿ, ‘ನನ್ನ ತಂದೆ ಮತ್ತು ಪ್ರಕಾಶ್ ಆತ್ಮೀಯರು. ನಮ್ಮ ಕುಟುಂಬಗಳ ನಡುವೆ ಸ್ನೇಹದ ಬಾಂಧವ್ಯ ಇತ್ತು. ಅವರನ್ನು ಕಳೆದುಕೊಂಡಿರುವುದು ನಮಗೆ ಅತ್ಯಂತ ದುಃಖದ ಸಂಗತಿ. ಒಬ್ಬ ಸಮಾಜವಾದಿ ಮೇಧಾವಿಯನ್ನು ಕಳೆದುಕೊಂಡ ಕನ್ನಡ ನಾಡು ಬಡವಾಗಿದೆ’ ಎಂದು ಭಾವುಕರಾಗಿ ನುಡಿದರು.ಅನ್ನದ ಋಣ’: ಹಿರಿಯ ಚಲನಚಿತ್ರ ಕಲಾವಿದೆ ಲೀಲಾವತಿ ರಂಗಭೂಮಿಯಲ್ಲಿ ಪ್ರಕಾಶ್ ಅವರೊಂದಿಗೆ ಕೆಲಸ ಮಾಡಿದ್ದ ದಿನಗಳನ್ನು ಸ್ಮರಿಸಿದರು. ‘ರಂಗಭೂಮಿಯಲ್ಲಿ ನಾವು ಒಟ್ಟಿಗೆ ಕಾರ್ಯನಿರ್ವಹಿಸಿದ್ದೆವು. ಹಲವು ದಿನಗಳ ಕಾಲ ಅವರು ನನಗೆ ಅನ್ನ ನೀಡಿದ್ದರು. ಅವರ ಅನ್ನದ ಋಣ ನನ್ನ ಮೇಲಿದೆ’ ಎಂದು ಕಣ್ಣೀರಿಟ್ಟರು.ಉದ್ಯಾನದ ತುಂಬ ಸೇರಿದ್ದ ಸಮಾಜವಾದಿ ಮುಖಂಡರು, ಜನತಾ ಪರಿವಾರದ ನಾಯಕರು ಪ್ರಕಾಶ್ ಅವರ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕುವುದರಲ್ಲಿ ತಲ್ಲೆನರಾಗಿದ್ದರು. ಸಿದ್ದರಾಮಯ್ಯ, ಜಾಲಪ್ಪ, ಇಬ್ರಾಹಿಂ ಮತ್ತಿತರರು ಗಂಟೆಗಳ ಕಾಲ ಅಲ್ಲಿಯೇ ಇದ್ದರು.ಸಾಹಿತಿಗಳು, ಬರಹಗಾರರು, ರಂಗಕರ್ಮಿಗಳ ದಂಡು ಅಲ್ಲಿ ನೆರೆದಿತ್ತು. ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿರುವ ಅನೇಕರು ಅಗಲಿದ ಮುತ್ಸದ್ದಿಗೆ ನಮನ ಸಲ್ಲಿಸಿದರು. ಸುತ್ತಮುತ್ತಲಿನ ಕಾಲೇಜುಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರೂ ಸ್ವಾತಂತ್ರ್ಯ ಉದ್ಯಾನಕ್ಕೆ ಧಾವಿಸಿ ಅಂತಿಮ ದರ್ಶನ ಪಡೆದರು.ಗೀತನಮನ: ಸಂಗೀತಾ ಕಟ್ಟಿ, ಬಾನಂದೂರು ಕೆಂಪಯ್ಯ ಸೇರಿದಂತೆ ಹಲವು ಗಾಯಕರು ಪ್ರಕಾಶ್ ಅವರಿಗೆ ಗೀತನಮನ ಸಲ್ಲಿಸಿದರು.

ಸಂಗೀತಾ ಕಟ್ಟಿ ಅವರು ಬಸವಣ್ಣನ ವಚನಗಳನ್ನು ಹಾಡಿದರೆ, ಬಾನಂದೂರು ಶಿಶುನಾಳ ಷರೀಫರ ಗೀತೆಗಳನ್ನು ಹಾಡಿ ಅಗಲಿದ ನಾಯಕನಿಗೆ ನಮನ ಸಲ್ಲಿಸಿದರು. ಮಧ್ಯಾಹ್ನ 1.45ಕ್ಕೆ ಪೊಲೀಸ್ ಇಲಾಖೆಯ ವತಿಯಿಂದ ಗೌರವ ಸಲ್ಲಿಸಲಾಯಿತು.ಪಾರ್ಥೀವ ಶರೀರವನ್ನು ಉದ್ಯಾನದ ಹೊರಾಂಗಣಕ್ಕೆ ತಂದಾಗ ಮೂರು ಸುತ್ತು ಕುಶಾಲ ತೋಪು ಹಾರಿಸಲಾಯಿತು.

ಬಳಿಕ ಪಾರದರ್ಶಕ ಗಾಜಿನಿಂದ ಆವೃತವಾದ ವಾಹನದಲ್ಲಿ ಪಾರ್ಥೀವ ಶರೀರವನ್ನು ಹೂವಿನಹಡಗಲಿಗೆ ಕೊಂಡೊಯ್ಯಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry