ಶುಕ್ರವಾರ, ಜೂನ್ 25, 2021
28 °C

ಅಗಲಿದ ಮಾಜಿ ಮೇಯರ್‌ಗೆ ಪಾಲಿಕೆ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗಲಿದ ಮಾಜಿ ಮೇಯರ್‌ಗೆ ಪಾಲಿಕೆ ನಮನ

ಹುಬ್ಬಳ್ಳಿ: ರಾಣೆಬೆನ್ನೂರ ಹತ್ತಿರ ಬುಧವಾರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮಾಜಿ ಮೇಯರ್ ಫಿರ್ದೋಸ್ ಕೊಣ್ಣೂರ ಅವರಿಗೆ ಮಹಾನಗರ ಪಾಲಿಕೆಯಲ್ಲಿ ಗುರುವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ಮಾತನಾಡಿದ ಎಲ್ಲ ಸದಸ್ಯರೂ ಫಿರ್ದೋಸ್ ಅವರ ಸ್ನೇಹಪರ ವ್ಯಕ್ತಿತ್ವ, ಅಭಿವೃದ್ಧಿಶೀಲ ಮನೋಭಾವವನ್ನು ಕೊಂಡಾಡಿದರು.ದುಃಖ ಸೂಚಕ ಗೊತ್ತುವಳಿ ಮಂಡಿಸಿದ ಸಭಾನಾಯಕ ವೀರಣ್ಣ ಸವಡಿ, `ಫಿರ್ದೋಸ್ ಮೇಯರ್ ಆಗಿದ್ದ ಅವಧಿಯಲ್ಲಿ ಅವಳಿನಗರದ ಅಭಿವೃದ್ಧಿ ಕನಸು ಹೊತ್ತು ಸಾಕಷ್ಟು ದಿಟ್ಟ ಕ್ರಮಗಳನ್ನು ಕೈಗೊಂಡಿದ್ದರು. ಮಲಪ್ರಭಾ ನದಿಯಿಂದ ಕುಡಿಯುವ ನೀರು ಪೂರೈಕೆ ಯೋಜನೆಗೆ ರಾಜ್ಯ ಸರ್ಕಾರದಿಂದ ರೂ ಮೂರು ಕೋಟಿ ತಂದು, ಕಾಮಗಾರಿಗೆ ಚುರುಕು ಮುಟ್ಟಿಸಿದ್ದರು~ ಎಂದು ನೆನೆದರು.`ಫಿರ್ದೋಸ್ ಮೇಯರ್ ಆಗಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದವರು ಅಶೋಕ ಜಾಧವ್. ಇಬ್ಬರೂ ಒಂದೇ ರೀತಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು ಅವಳಿನಗರಕ್ಕೆ ಉಂಟಾದ ದೊಡ್ಡ ನಷ್ಟವಾಗಿದೆ~ ಎಂದು ಅವರು ವಿಷಾದಿಸಿದರು. `ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಕಳೆದ ಚುನಾವಣೆಯಲ್ಲಿ ಒಬ್ಬರಿಗೊಬ್ಬರು ಮುಖಾಮುಖಿಯಾಗಿ ಸ್ಪರ್ಧಿಸಿದರೂ ಬಾಂಧವ್ಯಕ್ಕೆ ಚ್ಯುತಿ ಬಂದಿರಲಿಲ್ಲ~ ಎಂದು ನೆನಪಿಸಿಕೊಂಡರು.ಹಿರಿಯ ಸದಸ್ಯ ಡಾ. ಪಾಂಡುರಂಗ ಪಾಟೀಲ ಮಾತನಾಡಿ, `ಒಳ್ಳೆಯವರಿಗೆ ಹೆಚ್ಚಿನ ಆಯುಷ್ಯವನ್ನು ದೇವರು ನೀಡುವುದಿಲ್ಲ ಎಂಬ ಮಾತಿದೆ. ಫಿರ್ದೋಸ್ ಮತ್ತು ಜಾಧವ್ ಅವರ ವಿಚಾರದಲ್ಲಿ ಇದು ನಿಜವಾಗಿದೆ~ ಎಂದರು.`ಜಾತಿಯ ಎಲ್ಲೆಗಳನ್ನು ಮೀರಿದ್ದ ಫಿರ್ದೋಸ್ ಸ್ನೇಹಜೀವಿಯಾಗಿದ್ದರು. ನಗರದ ಬಗೆಗೆ ಅವರಿಗೊಂದು ದೃಷ್ಟಿಕೋನ ಇತ್ತು. ಯಾವುದೇ ಕಾಮಗಾರಿಯಲ್ಲಿ ಪ್ರಮಾದ ಆಗಬಾರದು ಎಂಬ ಅಳಕು ಅವರನ್ನು ಯಾವಾಗಲೂ ಕಾಡುತ್ತಿತ್ತು. ಕರದಾತರಿಗೆ ಒಳ್ಳೆಯದನ್ನು ಮಾಡಬೇಕೆಂಬ ತುಡಿತವನ್ನು ಅವರು ಹೊಂದಿದ್ದರು~ ಎಂದು ಹೇಳಿದರು.`ಸಂವೇದನಾಶೀಲ ವ್ಯಕ್ತಿಯಾಗಿದ್ದ ಅವರಿಗೆ ನಾಯಕನಾಗಿ ಬೆಳೆಯುವ ಎಲ್ಲ ಲಕ್ಷಣಗಳೂ ಇದ್ದವು. ಆದರೆ, ದೇವರು ಅವರಿಗೆ ಆಯುಷ್ಯ ನೀಡಲಿಲ್ಲ~ ಎಂದು ಅವರು ಖೇದ ವ್ಯಕ್ತಪಡಿಸಿದರು. `ಫಿರ್ದೋಸ್ ಒಬ್ಬ ಹುರುಪಿನ ವ್ಯಕ್ತಿಯಾಗಿದ್ದರು. ಯಾವುದೇ ಸಮಸ್ಯೆ ಇದ್ದರೂ ಅವರಲ್ಲಿ ಪರಿಹಾರ ಇರುತ್ತಿತ್ತು~ ಎಂದು ಭಾರತಿ ಪಾಟೀಲ ಹೇಳಿದರು.ಕಾಂಗ್ರೆಸ್‌ನ ಯಾಸೀನ್ ಹಾವೇರಿಪೇಟ್, ಜೆಡಿಎಸ್‌ನ ಹಜರತ್ ಅಲಿ ದೊಡ್ಡಮನಿ, ವಿಜಯಲಕ್ಷ್ಮಿ ಲೂತಿಮಠ ಮಾತನಾಡಿದರು. ನಗರಕ್ಕೂ, ಪಕ್ಷಕ್ಕೂ ಅವರ ಅಗಲಿಕೆಯಿಂದ ತುಂಬಲಾಗದಷ್ಟು ಹಾನಿಯಾಗಿದೆ ಎಂದು ಅವರು ಕಂಬನಿ ಮಿಡಿದರು. ಸಭೆಯ ಅಧ್ಯಕ್ಷತೆಯನ್ನು ಮೇಯರ್ ಪೂರ್ಣಾ ಪಾಟೀಲ `ಫಿರ್ದೋಸ್ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ. ಅವರ ಸೇವೆಯನ್ನು ಪಾಲಿಕೆ ಸದಾ ನೆನಪಿಸಿಕೊಳ್ಳುತ್ತದೆ~ ಎಂದು ಹೇಳಿದರು.ಉಪ ಮೇಯರ್ ನಾರಾಯಣ ಜರತಾರಘರ, ವಿರೋಧ ಪಕ್ಷದ ನಾಯಕ ದೀಪಕ ಚಿಂಚೋರೆ, ಸದಸ್ಯರಾದ ರಾಜಣ್ಣ ಕೊರವಿ, ಸುಧೀರ್ ಸರಾಫ್, ರಾಘವೇಂದ್ರ ರಾಮದುರ್ಗ ಮತ್ತಿತರ ಸದಸ್ಯರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.