ಮಂಗಳವಾರ, ಜೂನ್ 15, 2021
24 °C

ಅಗಸನಕಲ್ಲು ಸರ್ಕಾರಿ ಪ್ರೌಢಶಾಲೆ:ಅಕ್ಕಿ ಮಾರಾಟ: ಶಿಕ್ಷಕಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗಸನಕಲ್ಲು ಸರ್ಕಾರಿ ಪ್ರೌಢಶಾಲೆ:ಅಕ್ಕಿ ಮಾರಾಟ: ಶಿಕ್ಷಕಿಗೆ ತರಾಟೆ

ಚಿತ್ರದುರ್ಗ: ನಗರದ ಅಗಸನಕಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಕಿ, ಬೇಳೆ, ಎಣ್ಣೆ ಮಾರಾಟದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ಅಧಿಕಾರಿಗಳ ತಂಡ ಭೇಟಿ ನೀಡಿ ತಪಾಸಣೆ ನಡೆಸಿತು.

ತಪಾಸಣೆ ಸಂದರ್ಭದಲ್ಲಿ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ ಮುಖ್ಯ ಶಿಕ್ಷಕಿ ಅರ್ಜುಮಂದ ಬಾನು ಛೀಮಾರಿಗೆ ಒಳಗಾದರು.ಪ್ರೊಬೇಷನ್ ಐಎಎಸ್ ಅಧಿಕಾರಿ ವಿನೋದ ಪ್ರಿಯಾ, ಡಿಡಿಪಿಐ ಮಂಜುನಾಥ್, ತಾ.ಪಂ. ಅಧ್ಯಕ್ಷ ಪರಮೇಶ್, ಬಿಇಒ ರವಿಶಂಕರರೆಡ್ಡಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ರುದ್ರಮುನಿ, ಅಕ್ಷರ ದಾಸೋಹ ಅಧಿಕಾರಿ ನಾಗಮ್ಮ ಅವರು ಭೇಟಿ ನೀಡಿ ತಪಾಸಣೆ ನಡೆಸಿದಾಗ ಈ ಘಟನೆ ನಡೆಯಿತು.ಈ ಸಂದರ್ಭದಲ್ಲಿ ವಿವರ ನೀಡಲು ನಿರಾಕರಿಸಿದ ಮುಖ್ಯಶಿಕ್ಷಕಿ ಅರ್ಜುಮಂದ ಬಾನು ಅವರು, ಪ್ರೊಬೇಷನ್ ಐಎಎಸ್ ಅಧಿಕಾರಿ ವಿನೋದ ಪ್ರಿಯಾ ಅವರಿಗೆ `ನೀವ್ಯಾರು ಕೇಳಲು? ಯಾರನ್ನು ಕೇಳಿ ಶಾಲೆ ಪ್ರವೇಶಿಸಿದ್ದೀರಿ~ ಎಂದು ಉದ್ಧಟತನಿಂದ ವರ್ತಿಸಿದಾಗ ಡಿಡಿಪಿಐ ಮತ್ತು ತಾ.ಪಂ. ಇಒ ಅವರು ಮುಖ್ಯ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡರು.ನಿಯಮಗಳನ್ನು ಉಲ್ಲಂಘಿಸಿ ಶಾಲೆ ಮಕ್ಕಳಿಗೆ ಅಕ್ಕಿ ನೀಡಿ ಕಳುಹಿಸಲಾಗುತ್ತಿದೆ ಮತ್ತು ಬಿಸಿಯೂಟ ನೀಡುತ್ತಿಲ್ಲ ಎಂದು ಕೆಲವರು ದೂರು ನೀಡಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯೇ ಅಕ್ಷರ ದಾಸೋಹ ಅಧಿಕಾರಿಗಳು ದಿಢೀರ್ ಶಾಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಕ್ಕಿ, ಬೇಳೆಯಲ್ಲಿ ವ್ಯತ್ಯಾಸವಿರುವುದು ಕಂಡು ಬಂತು. ನಂತರ ಶಾಲೆಯ ಬೀಗ ತೆಗೆದುಕೊಂಡು ಹೋಗಿ ಬುಧವಾರ ಬೆಳಿಗ್ಗೆ ಆಗಮಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತೆ ತಪಾಸಣೆ ಕಾರ್ಯ ನಡೆಸಿದರು.ಶಾಲೆಯಲ್ಲಿ 2 ಕ್ವಿಂಟಲ್, 17 ಕೆ.ಜಿ. ಅಕ್ಕಿ ಇರಬೇಕಾಗಿತ್ತು. ಆದರೆ, ಅಲ್ಲಿ ಒಂದು ಕಾಳು ಅಕ್ಕಿ ಇರಲಿಲ್ಲ ಎಂದು ಅಧಿಕಾರಿಗಳ ತಪಾಸಣೆ ಸಂದರ್ಭದಲ್ಲಿ ಕಂಡು ಬಂತು.`ಮುಖ್ಯಶಿಕ್ಷಕರು ನಿನ್ನೆ (ಮಂಗಳವಾರ) 3 ಜಗ್ ಅಕ್ಕಿ ನೀಡಿದ್ದಾರೆ~ ಎಂದು 8ನೇ ತರಗತಿ ಮಕ್ಕಳು ಅಧಿಕಾರಿಗಳಿಗೆ ತಿಳಿಸಿದರು.`ಶಾಲೆಯಲ್ಲಿ ಮುಖ್ಯಶಿಕ್ಷಕಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಾರೆ. ಶಾಲಾ ಸಮಯಕ್ಕೆ ಸರಿಯಾಗಿ ಹಾಜರಾಗುವುದಿಲ್ಲ. ಶಿಕ್ಷಕರಿಗೂ ಕಿರುಕುಳ ನೀಡುತ್ತಾರೆ. ಮುಖ್ಯಶಿಕ್ಷಕಿಯೇ ಪ್ರತಿದಿನ ಶಾಲೆಗೆ ತಡವಾಗಿ ಬರುತ್ತಾರೆ. ಶಾಲೆಯಲ್ಲಿ ಮೂಲಸೌಕರ್ಯಗಳು ಕಲ್ಪಿಸಲು ಸಹ ಮುಖ್ಯ ಶಿಕ್ಷಕರು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಸಮುದಾಯ ಮಕ್ಕಳೇ ಇಲ್ಲಿ ಓದುತ್ತಾರೆ. ಆದರೆ, ಮುಖ್ಯ ಶಿಕ್ಷಕರ ವರ್ತನೆಯಿಂದಾಗಿ ಮಕ್ಕಳಿಗೆ ಸರಿಯಾದ ಶಿಕ್ಷಣ ದೊರೆಯುತ್ತಿಲ್ಲ~ ಎಂದು ಸಾರ್ವಜನಿಕರು ಅಧಿಕಾರಿಗಳ ಮುಂದೆ ದೂರಿದರು.`ಶಾಲೆಯಲ್ಲಿ ಲೆಕ್ಕಪತ್ರ ಸರಿ ಮಾಡಿಲ್ಲ. 2011ರ ಏಪ್ರಿಲ್‌ನಿಂದ 2012ರ ಮಾರ್ಚ್‌ವರೆಗೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ~ ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ರುದ್ರಮುನಿ `ಪ್ರಜಾವಾಣಿ~ಗೆ ತಿಳಿಸಿದರು.ಅಧಿಕಾರಿಗಳು ಬಿಸಿಯೂಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡು ತೆರಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.