ಅಗಸಿ: ಆರೋಗ್ಯದ ಅರಸಿ

ಸೋಮವಾರ, ಮೇ 20, 2019
32 °C

ಅಗಸಿ: ಆರೋಗ್ಯದ ಅರಸಿ

Published:
Updated:

ರೊಟ್ಟಿ, ಚಪಾತಿ ಹಾಗೂ ಇತರೇ ತಿಂಡಿಗಳನ್ನು ಅಗಸೆ ಚಟ್ನಿಪುಡಿಯ ಜೊತೆ ತಿನ್ನಲು ಬಲು ರುಚಿ! ಎಲ್ಲರ ಮನೆಯ ಅಡುಗೆ ಮನೆಯಲ್ಲೂ ವಿಧವಿಧವಾದ, ರುಚಿ ರುಚಿಯಾದ ಚಟ್ನಿಪುಡಿ ತುಂಬಿದ ಡಬ್ಬಗಳು ಕಾಣುತ್ತವೆ. ಆದರೆ ಎಷ್ಟು ಜನರ ಮನೆಯಲ್ಲಿ ಅಗಸೆ ಚಟ್ನಿಪುಡಿ ಇರುತ್ತದೆ?ಆದರೆ ಅಗಸೆ ಪುಡಿಯ ಮಹತ್ವ ತಿಳಿದ ಮೇಲೆ ಪ್ರತಿಯೊಬ್ಬರ ಮನೆಯಲ್ಲೂ ಈ ಚಟ್ನಿಪುಡಿ ಜಾಗ ಪಡೆಯುತ್ತದೆ ಎಂದು ಹೇಳಬಹುದು. ದಿನಕ್ಕೆ ಅರ್ಧ ಬೊಗಸೆಯಷ್ಟು ಅಗಸೆ   ಸೇವಿಸಿದಲ್ಲಿ   ಅಗಸೆ ನೀನೆಷ್ಟು ಸೊಗಸೆ! ಎಂಬ ಉದ್ಗಾರ ಎಲ್ಲರ ಬಾಯಿಯಿಂದ ಹೊರಡುವುದರಲ್ಲಿ ಅನುಮಾನವಿಲ್ಲ.ಉತ್ತರ ಕರ್ನಾಟಕದಲ್ಲಿ ಅಗಸಿ ಚಟ್ನಿ  ಬಳಕೆ ಸಾಮಾನ್ಯ. ಪಾಶ್ಚಿಮಾತ್ಯ ದೇಶದಲ್ಲೂ ಸಹ ಹುರಿದ ಅಗಸೆಯ ಪುಡಿಯನ್ನು ಸಲಾಡ್‌ಗಳ ಜೊತೆ ಉಪಹಾರದೊಡನೆ ಸೇವಿಸುತ್ತಾರೆ.

ಅಗಸಿಯನ್ನು ಹುರಿದು ಪುಡಿ ಮಾಡಿಟ್ಟುಕೊಂಡಲ್ಲಿ ಬೆಳಗಿನ ಉಪಹಾರದಲ್ಲಿ ಸಲಾಡ್‌ಗಳ ಮೇಲೆ, ಕಾರ್ನ್‌ಫ್ಲೇಕ್ಸ್ ಜೊತೆ, ಹಣ್ಣುಗಳ ಜೊತೆ, ಬ್ರೆಡ್, ಬನ್ ತಯಾರಿಸುವಾಗ ಬೆರೆಸಿ ತಿನ್ನಬಹುದು. ಅಗಸೆಯ ಗಟ್ಟಿಯಾದ ಮೇಲ್ಪದರ ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದಾದ್ದರಿಂದ ಸ್ವಲ್ಪ ಹುರಿದ ಕಾಳನ್ನು ಪುಡಿ ಮಾಡಿ ಬಳಸುವುದು ಉಪಯುಕ್ತ.ಅಗಸಿ ಚಟ್ನಿ ಪುಡಿ

(ಶೇಂಗಾ, ಹುರಿಗಡಲೆ, ಉಚ್ಚೆಳ್ಳು ಮುಂತಾದ ಇತರೇ ಚಟ್ನಿಪುಡಿಗಳನ್ನು ತಯಾರಿಸುವ ರೀತಿಯಲ್ಲೇ ಇದನ್ನು ತಯಾರಿಸುವುದು.)

ಅಗಸಿ  - 250 ಗ್ರಾಂ, ಕೊಬ್ಬರಿ ಅರ್ಧ ಗಿಟಕು, ಒಣಮೆಣಸಿನಕಾಯಿ 8 ಅಥವಾ 10 (ಹೆಚ್ಚು ಕಾರ ಬೇಕಿದ್ದಲ್ಲಿ ಇನ್ನಷ್ಟು ಮೆಣಸಿನಕಾಯಿ), ಹುಣಸೇಹಣ್ಣು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಬೆಲ್ಲ  ಚಿಕ್ಕ ತುಂಡು, ವಗ್ಗರಣೆಗೆ ಎಣ್ಣೆ, ಸಾಸಿವೆ, ಇಂಗು, ಬೆಳ್ಳುಳ್ಳಿ.ತಯಾರಿಸುವ ವಿಧಾನ

ಅಗಸಿ ಬೀಜವನ್ನು ಹದವಾಗಿ ಹುರಿದು, ಒಣಮೆಣಸಿನಕಾಯಿ, ಇಂಗು ಇವನ್ನು ಸಾಸಿವೆ ಜೊತೆ ವಗ್ಗರಣೆಗೆ  ಹಾಕಿ ಬಾಡಿಸಿ, ನಂತರ ತುರಿದ ಕೊಬ್ಬರಿಯನ್ನು ಬೆರೆಸಿಡಿ. ಹುರಿದ ಅಗಸೆಬೀಜ, ವಗ್ಗರಣೆಗೆ ಹಾಕಿದ ಮೆಣಸಿನಕಾಯಿ, ಕೊಬ್ಬರಿ, ಇವೆಲ್ಲವನ್ನು ಮಿಕ್ಸಿಯಲ್ಲಿ ಪುಡಿಮಾಡಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ. ರುಚಿ ರುಚಿಯಾದ ಚಟ್ನಿಪುಡಿ ರೆಡಿ.ಅಗಸಿ ಬೀಜದಲ್ಲಿರುವ ಎಲ್ಲ ಪೌಷ್ಠಿಕಾಂಶಗಳೂ ಚಟ್ನಿಪುಡಿ ಸೇವನೆಯೊಂದಿಗೆ ನಮ್ಮ ದೇಹವನ್ನು ಸೇರಿ ಆರೋಗ್ಯವನ್ನು ವೃದ್ಧಿಸುತ್ತವೆ.  ದುಬಾರಿಯಲ್ಲದ ಅಗಸಿ ಬೀಜವನ್ನು ಎಲ್ಲರೂ ಕೊಂಡು ಬಳಸಬಹುದು. ಅಗಸಿಬೀಜ ಸೇವನೆಯಿಂದ ದೊರಕುವ ನಾರಿನಾಂಶ ಅಗಸಿ ಎಣ್ಣೆಯಲ್ಲಿ ಲಭ್ಯವಿಲ್ಲ.ಅಗಸಿಯ ಉಪಯುಕ್ತತೆ

ರಕ್ತದಲ್ಲಿನ ಕೊಬ್ಬಿನಂಶವನ್ನು ನಿಯಂತ್ರಿಸುವುದು: ದಿನನಿತ್ಯ ಅಗಸಿ ಪುಡಿ ಸೇವನೆಯು ರಕ್ತದಲ್ಲಿನ ಕೊಬ್ಬಿನಂಶವನ್ನು ಕಡಿಮೆ ಮಾಡುತ್ತದೆ.  ಸಕ್ಕರೆ ಖಾಯಿಲೆಯ ನಿಯಂತ್ರಣ: ರಕ್ತದ ಸಕ್ಕರೆಯಂಶವನ್ನು ಹತೋಟಿಯಲ್ಲಿಡಲು ಇದು ಸಹಕರಿಸುತ್ತದೆ. ಟೋರ‌್ಯಾನ್ಟೋ ಯುನಿವರ್ಸಿಟಿಯಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ ಗೋಧಿಹಿಟ್ಟಿನಿಂದ ತಯಾರಿಸಿದ ಬ್ರೆಡ್ ಹಾಗೂ ಅಗಸಿಯಿಂದ ತಯಾರಿಸಿದ ಬ್ರೆಡ್ ಎರಡನ್ನು ಎರಡು ಗುಂಪಿಗೆ ಕೊಟ್ಟನಂತರ ಅವರ ರಕ್ತದಲ್ಲಿನ ಸಕ್ಕರೆಯಂಶವನ್ನು ಕಂಡುಹಿಡಿದಾಗ, ಅಗಸಿಯ ಬ್ರೆಡ್ ಸೇವಿಸಿದವರ ರಕ್ತದಲ್ಲಿನ ಸಕ್ಕರೆಯಂಶವು ಗಮನಾರ್ಹವಾಗಿ ಮತ್ತೊಂದು ಗುಂಪಿನವರಿಗಿಂತ ಕಡಿಮೆಯಾದದ್ದು ತಿಳಿದು ಬಂದಿದೆ.ಕ್ಯಾನ್ಸರ್‌ಗೆ ರಾಮಬಾಣ: ಅಗಸಿಯಲ್ಲಿ ಲಿಗ್ನನ್ ಎಂಬಂಶವಿದೆ. ಇದು ಒಂದು ತೆರನಾದ ಫೈಟೋ ಇಸ್ಟ್ರೋಜನ್, ಇದಕ್ಕೆ ಹೆಂಗಸರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶದ ಕ್ಯಾನ್ಸರ್ ಅನ್ನು ತಡೆಗಟ್ಟುವ ಶಕ್ತಿಯಿದೆ. ಜೊತೆಗೆ ಇದರಲ್ಲಿ ಕ್ಯಾನ್ಸರ್ ತಡೆಗಟ್ಟುವ ಅಲ್ಫಲಿನೋಲಿಕ್ ಆಸಿಡ್ ಎಂಬ ಮತ್ತೊಂದು ಅಂಶವಿದೆ. ಅಗಸಿಯಲ್ಲಿರುವ ನಾರಿನಂಶ, ಕರುಳಿನ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.ಅಗಸಿಯಿಂದ ಮಲಬದ್ಧತೆ ನಿವಾರಣೆ: ಅಗಸಿಯಲ್ಲಿರುವ ನಾರಿನಂಶ ಮಲಬದ್ಧತೆಯನ್ನು ನಿವಾರಿಸುತ್ತದೆ. ಒಂದು ಔನ್ಸ್ ಅಗಸಿಯು ಶರೀರಕ್ಕೆ ಬೇಕಾದ ಶೇ. 32 ರಷ್ಟು ನಾರಿನಂಶವನ್ನು ನೀಡುತ್ತದೆ. ಅಗಸಿಯಲ್ಲಿ ಎರಡು ರೀತಿಯ ನಾರಿನಂಶವಿರುತ್ತದೆ. ಅವು ನೀರನ್ನು ಹೀರಿ, ಮಲವನ್ನು ಮೃದುವಾಗಿಸುವುದು, ಇದರಿಂದ ಕರುಳಿನಲ್ಲಿನ ಮಲವು ಸುಲಭವಾಗಿ ಮುಂದೆ ಸಾಗಿ ಹೊರ ಹಾಕಲ್ಪಡುವುದು.ಈ ರೀತಿ ನಾರಿನಂಶವಿರುವ ಆಹಾರ ಸೇವನೆಯ ಜೊತೆಗೆ, ಸಾಕಷ್ಟು ನೀರನ್ನೂ ಸಹ ಸೇವಿಸಬೇಕು.  ಮಲಬದ್ಧತೆ ನಿವಾರಣೆಗೆ ದಿನನಿತ್ಯ 4 ಟೇಬಲ್ ಚಮಚ ಅಗಸಿ ಪುಡಿಯ ಸೇವನೆಯ ಜೊತೆಗೆ, ವ್ಯಾಯಾಮ, ಹಣ್ಣು ತರಕಾರಿ ಹಾಗೂ ನೀರಿನ ಸೇವನೆಯೂ ಮುಖ್ಯ.

 

ಋತುಬಂಧದ ಸಮಸ್ಯೆಗಳಿಗೆ: ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರು ಮನಸಿನ ಸಮಸ್ಯೆಗಳು, ಕಿರಿಕಿರಿ, ಮೈ ಬಿಸಿಯೇರುವುದು, ಬೆವರುವುದು ಎಂಬಂತೆ ಅನೇಕಾನೇಕ ತೊಂದರೆಗಳನ್ನು ಅನುಭವಿಸುವರು. ಇಂಥಹ ತೊಂದರೆಗಳ ನಿವಾರಣೆಗೆ ಅಗಸಿ ಉಪಯುಕ್ತವೇ? ಹೌದು ಎನ್ನುತ್ತವೆ ಅನೇಕ ಸಂಶೋಧನೆಗಳು. ಅಗಸಿಯ ಸೇವನೆಯಿಂದ ದೇಹಕ್ಕೆ ಪೂರೈಕೆಯಾಗುವ ಫೈಟೋ ಇಸ್ಟ್ರೋಜನ್, ನಮ್ಮ ದೇಹದ ಇಸ್ಟ್ರೋಜನ್ ಹಾರ್ಮೋನಿನಂತೆ ಕೆಲಸ ಮಾಡುತ್ತದೆ. ಆಗ ಮುಟ್ಟು ನಿಲ್ಲುವ ಸಮಯದಲ್ಲಾಗುವ ತೊಂದರೆಗಳ ನಿವಾರಣೆಯಾಗುವುದು.ಹೃದಯ ತೊಂದರೆಗೆ: ಹೃದಯ ಕಾಯಿಲೆಯ ನಿಯಂತ್ರಣಕ್ಕೂ ಅಗಸಿ ಸಹಕಾರಿಯೆನ್ನಲಾಗಿದೆ. ಹೃದಯ ಬಡಿತದ ಏರು ಪೇರನ್ನೂ ಇದು (ಅರಿಥ್‌ಮಿಯಾಸ್) ಸರಿಪಡಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಕೀಲು ನೋವು, ಆಸ್ತಮ, ರುಮಟಾಯ್ಡ ಆರ್ಥೈಟಿಸ್, ಮೈಗ್ರೇನ್, (ಅರೆ ತಲೆನೋವು), ಮೂಳೆಸವೆತ ಹಾಗೂ ಇನ್ನಿತರೆ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ.

(ಲೇಖಕರ ಮೊಬೈಲ್:   9972509785)

ಅಗಸೆ ಬೀಜದಲ್ಲಿರುವ ಪೌಷ್ಟಿಕಾಂಶಗಳು

ನಾರಿನಾಂಶ:
28% (7 10% ಕರಗುವ ನಾರಿನಂಶ, 11 18% ಕರಗದಿರುವ ನಾರಿನಂಶ)

ಕೊಬ್ಬಿನಂಶ: 40% (ಶೇ 73 ರಷ್ಟು ಒಳ್ಳೆಯ ಕೊಬ್ಬು, ಪಾಲಿ ಅನ್‌ಸ್ಯಾಚುರೇಟೆಡ್ ಫ್ಯಾಟಿ ಆಸಿಡ್)

ಪ್ರೊಟೀನ್: 21% ವಿಟಮಿನ್ ಇ, ವಿಟಮಿನ್ ಬಿ. ಲಿಗ್ನನ್, ಹಾಗೂ ಫೈಟೋಇಸ್ಟ್ರೋಜನ್,

ಫೈಟೋಸ್ಟೀರಾಲ್, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಸಿಯಂ.

ಈ ಬೀಜಗಳಲ್ಲಿರುವ ಶೇ. 50 ಕ್ಕಿಂತ ಹೆಚ್ಚಾದ ಕೊಬ್ಬಿನಂಶವು ಆಲ್ಫ ಲಿನೋಲಿನಿಕ್ ಆಸಿಡ್ ಎಂಬ ಆರೋಗ್ಯಕರ ಒಮೇಗ 3 ಫ್ಯಾಟಿ ಆಸಿಡ್.

(ಸಸ್ಯಾಹಾರಿಗಳಿಗೆ ಅಗಸಿಬೀಜ ಅತ್ಯುತ್ತಮವಾದ, ಆರೋಗ್ಯಕರ ಒಮೇಗಾ 3 ಫ್ಯಾಟಿ ಆಸಿಡ್ ಅನ್ನು ಒದಗಿಸುತ್ತದೆ)

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry