ಸೋಮವಾರ, ಮೇ 17, 2021
28 °C

ಅಗ್ಗದ ಅಕ್ಕಿ ದಾಸ್ತಾನಿಗೆ ಉಗ್ರಾಣ ಕೊರತೆ

ಪ್ರಜಾವಾಣಿ ವಾರ್ತೆ/ಪಿ.ಎಂ.ರಘುನಂದನ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಪ್ರತಿ ಕೆ.ಜಿ.ಗೆ ಒಂದು ರೂಪಾಯಿ ದರದಲ್ಲಿ ಮಾಸಿಕ 30 ಕೆ.ಜಿ. ಅಕ್ಕಿ ವಿತರಿಸುವ ಯೋಜನೆಯನ್ನು ಜುಲೈನಿಂದಲೇ ಜಾರಿಗೊಳಿಸಲು ಹೊರಟಿರುವ ಸರ್ಕಾರ, ಅಗತ್ಯ ಪ್ರಮಾಣದ ಅಕ್ಕಿ ಹೊಂದಿಸಲು ಹರಸಾಹಸಪಡುತ್ತಿದೆ. ಇದರ ಬೆನ್ನಲ್ಲೇ, ಅಕ್ಕಿ ದಾಸ್ತಾನು ಮಾಡಲು ಉಗ್ರಾಣಗಳ ಕೊರತೆ ಎದುರಾಗಿದೆ.ಸದ್ಯ ಕೇಂದ್ರ ಸರ್ಕಾರವು ರಾಜ್ಯಕ್ಕೆ 1.77 ಲಕ್ಷ ಟನ್ ಅಕ್ಕಿಯನ್ನು ಪೂರೈಸುತ್ತಿದೆ. ಬಿಪಿಎಲ್ ಕುಟುಂಬಗಳಿಗೆ ತಲಾ 30 ಕೆ.ಜಿ. ಅಕ್ಕಿ ವಿತರಿಸುವ ಯೋಜನೆಗೆ ಹೆಚ್ಚುವರಿಯಾಗಿ 1.82 ಲಕ್ಷ ಟನ್ ಅಕ್ಕಿಯ ಅಗತ್ಯವಿದೆ.ಉಗ್ರಾಣಗಳ ಕೊರತೆ ಎದುರಿಸುತ್ತಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಖಾಲಿ ಇರುವ ಉಗ್ರಾಣಗಳನ್ನು ಗುರುತಿಸುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಇತ್ತೀಚೆಗೆ ಸೂಚನೆ ನೀಡಿದೆ. ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಇರುವ ಕಲ್ಯಾಣ ಮಂಟಪಗಳು, ಹಳೆಯ ಚಿತ್ರಮಂದಿರಗಳು, ಕೈಗಾರಿಕಾ ಶೆಡ್‌ಗಳನ್ನು ಹುಡುಕುತ್ತಿರುವ ಅಧಿಕಾರಿಗಳು, ಅವುಗಳನ್ನು ಬಾಡಿಗೆಗೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈಗ ಇಲಾಖೆಯ ಬಳಿ 482 ಉಗ್ರಾಣಗಳಿದ್ದು, 1.88 ಲಕ್ಷ ಟನ್ ಸಂಗ್ರಹಣಾ ಸಾಮರ್ಥ್ಯ ಇದೆ. ಈ ಉಗ್ರಾಣಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಂಡಲ್ಲಿ ಹೆಚ್ಚುವರಿಯಾಗಿ 10,000 ಟನ್ ಅಕ್ಕಿ ದಾಸ್ತಾನು ಇಡಬಹುದು. ಇನ್ನೂ 1.70 ಲಕ್ಷ ಟನ್ ಅಕ್ಕಿ ದಾಸ್ತಾನಿಗೆ ಇಲಾಖೆ ಹೊಸದಾಗಿ ಸಿದ್ಧತೆ ಮಾಡಬೇಕು ಎನ್ನುತ್ತಾರೆ ಅಧಿಕಾರಿಗಳು.ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ವಿತರಿಸಲು ಆಹಾರ ಧಾನ್ಯಗಳನ್ನು ಒಂದು ತಿಂಗಳ ಮುನ್ನವೇ ಆಯಾ ಪ್ರದೇಶದ ಉಗ್ರಾಣಗಳಲ್ಲಿ ದಾಸ್ತಾನು ಮಾಡಬೇಕು. ಈಗ ಯೋಜನೆಯ ಆರಂಭಕ್ಕೆ ಮೂರು ವಾರಗಳಷ್ಟೇ ಬಾಕಿ ಇದೆ. ಅಕ್ಕಿ ದಾಸ್ತಾನಿಗೆ ಇನ್ನೂ ಉಗ್ರಾಣಗಳನ್ನು ಗುರುತಿಸದೇ ಇರುವುದರಿಂದ ಸಮಸ್ಯೆ ಸೃಷ್ಟಿಯಾಗಬಹುದು ಎಂಬ ಆತಂಕ ಇಲಾಖೆಯನ್ನು ಕಾಡುತ್ತಿದೆ.ಈಗ ತರಾತುರಿಯಲ್ಲಿ ದಾಸ್ತಾನು ಕೇಂದ್ರಗಳನ್ನು ಗುರುತಿಸಿದರೂ ಅದು ಶಾಶ್ವತ ಪರಿಹಾರ ಅಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಉಗ್ರಾಣಗಳನ್ನು ನಿರ್ಮಿಸಲೇಬೇಕಾಗುತ್ತದೆ. ಅಕ್ಕಿಯನ್ನು ಸಾಗಣೆ ಮಾಡುವುದಕ್ಕೂ ತೊಂದರೆ ಆಗಬಹುದು. ಆಹಾರ ಧಾನ್ಯಗಳ ಸಾಗಣೆ ಮತ್ತು ದಾಸ್ತಾನಿಗಾಗಿ ಸರ್ಕಾರ ವಾರ್ಷಿಕ ರೂ 400 ಕೋಟಿ ವೆಚ್ಚ ಮಾಡಬೇಕಾಬಹುದು ಎಂದು ಅಂದಾಜಿಸುತ್ತಾರೆ    ಅಧಿಕಾರಿಗಳು.

ಟೆಂಡರ್ ಕರೆದು ಅಕ್ಕಿ ಖರೀದಿ ಚಿಂತನೆ

ರಾಜ್ಯ ಸರ್ಕಾರ ತೀವ್ರ ಒತ್ತಡ ತಂದ ಕಾರಣದಿಂದ ಈ ತಿಂಗಳು ಹೆಚ್ಚುವರಿಯಾಗಿ 28,000 ಟನ್ ಅಕ್ಕಿ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಅಕ್ಕಿಯ ಪ್ರಮಾಣದಲ್ಲಿ ಅರ್ಧದಷ್ಟನ್ನು ಆಗಸ್ಟ್ ತಿಂಗಳಿನಿಂದ ಒದಗಿಸುವುದಾಗಿ ಕೇಂದ್ರ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸಿವೆ.ಕೇಂದ್ರ ಸರ್ಕಾರ ಹೆಚ್ಚಿನ ಅಕ್ಕಿಯನ್ನು ಒದಗಿಸುವವರೆಗೂ ರಾಜ್ಯ ಸರ್ಕಾರ ಅಗತ್ಯ ಪ್ರಮಾಣದ ಅಕ್ಕಿಯನ್ನು ಇತರೆ ಮೂಲಗಳಿಂದ ಖರೀದಿ ಮಾಡಬೇಕಿದೆ. ರಾಷ್ಟ್ರೀಯ ಸರಕು ಮತ್ತು ಪದಾರ್ಥಗಳ ವಿನಿಮಯ ಕೇಂದ್ರದ (ಎನ್‌ಸಿಡಿಎಕ್ಸ್) ಮೂಲಕ ಅಕ್ಕಿ ಖರೀದಿಸುವ ಅಥವಾ ರಾಷ್ಟ್ರಮಟ್ಟದಲ್ಲಿ ಟೆಂಡರ್ ಕರೆದು ಅಕ್ಕಿ ಖರೀದಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.ಎನ್‌ಸಿಡಿಎಕ್ಸ್‌ನಲ್ಲಿ ವ್ಯಾಪಾರಿಗಳು ಆನ್‌ಲೈನ್ ವ್ಯವಸ್ಥೆಯಡಿ ವಿವಿಧ ಸರಕು ಮತ್ತು ಪದಾರ್ಥಗಳನ್ನು ಮಾರಾಟ ಮಾಡುತ್ತಾರೆ. ಈಗ ಶಾಲಾ ಮಕ್ಕಳ ಬಿಸಿಯೂಟಕ್ಕೆ ಅಗತ್ಯವಿರುವ ತೊಗರಿ ಬೇಳೆಯನ್ನು ಎನ್‌ಸಿಡಿಎಕ್ಸ್ ಮೂಲಕವೇ ಖರೀದಿಸಲಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.