ಶುಕ್ರವಾರ, ಅಕ್ಟೋಬರ್ 2, 2020
24 °C

ಅಗ್ಗದ ಟ್ಯಾಬ್ಲೆಟ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಗ್ಗದ ಟ್ಯಾಬ್ಲೆಟ್!

ದಿನದಿನವೂ ಆರು ವಿಷಯಗಳ 12 ಪುಸ್ತಕ, ಮತ್ತೊಂದೆರಡು ಕಾಪಿ, ಪ್ರಾಜೆಕ್ಟ್, ಡ್ರಾಯಿಂಗ್ ಹೀಗೆ ಮಣಬಾರದ ಬ್ಯಾಗ್ ಹೊತ್ತು ಬೆನ್ನು ಬಾಗಿಸಿ ಶಾಲೆಗೆ ಹೋಗುವ ಮಗುವನ್ನು ಕಂಡು ಬೇಸತ್ತಿದ್ದೀರಾ? ನಿಮ್ಮ ಹಾಗೂ ಮಕ್ಕಳ ಈ ನೋವನ್ನು ಕಡಿಮೆ ಮಾಡಲೆಂದೇ ನ್ಯಾನೊಟೆಲ್ ಟೆಕ್ನಾಲಜೀಸ್ ನೂತನ ಟ್ಯಾಬ್ಲೆಟ್ ಶ್ರೇಣಿಯನ್ನು ಬಿಡುಗಡೆ ಮಾಡಿದೆ. ಓದುವ ಹಾಗೂ ಬರೆಯುವ ಕೆಲಸ ಈಗ ಮತ್ತಷ್ಟು ಸುಲಲಿತವಾಗಿದೆ.ಅಳತೆಯಲ್ಲಿ 9.7 ಇಂಚು ಉದ್ದದ ಈ ಟ್ಯಾಬ್ಲೆಟ್‌ಗೆ `ಪುಸ್ತಕ್~ ಎಂದು ಹೆಸರಿಡಲಾಗಿದೆ. ಸಿಬಿಎಸ್‌ಸಿ, ಐಸಿಎಸ್‌ಸಿ ಹಾಗೂ ರಾಜ್ಯದ ಪಠ್ಯಕ್ರಮಗಳನ್ನೂ ಸೇರಿಸಿಕೊಂಡು ಭಾರತೀಯ ವಿದ್ಯಾರ್ಥಿಗಳಿಗಾಗಿಯೇ ಇದನ್ನು ವಿನ್ಯಾಸಪಡಿಸಲಾಗಿದೆ. ಪ್ರಸ್ತುತ ಆಂಗ್ಲ ಮಾಧ್ಯಮದ ಮಕ್ಕಳು ಮಾತ್ರ ಬಳಸಬಹುದಾದ ಈ ಟ್ಯಾಬ್ಲೆಟ್ ಮುಂದಿನ ದಿನಗಳಲ್ಲಿ ಭಾರತದ 22 ಸ್ಥಳೀಯ ಭಾಷೆಗಳಲ್ಲೂ ದೊರೆಯಲಿದೆ.

 

ಅಂತರ್ಜಾಲ ಸಂಪರ್ಕವಿಲ್ಲದೆಯೂ ಓದಲು ಸಾಧ್ಯವಿರುವಂತೆ ಮೆಮೊರಿ ಸಂಗ್ರಹಿಸಿರುವುದು ಇದರ ಇನ್ನೊಂದು ವೈಶಿಷ್ಟ್ಯ.`ಗ್ರಾಮೀಣ ಪ್ರದೇಶದ ಮಕ್ಕಳಿಗೂ ತಂತ್ರಜ್ಞಾನ ಲಭ್ಯವಾಗಬೇಕು. ಪಟ್ಟಣದ ಮಕ್ಕಳಂತೆ ಅವರೂ ಕಂಪ್ಯೂಟರ್, ಟ್ಯಾಬ್ಲೆಟ್‌ಗಳ ಬಳಕೆ ಅರಿತುಕೊಳ್ಳಬೇಕು ಎಂಬುದು ನಮ್ಮ ಉದ್ದೇಶ.ಅದೇ ಕಾರಣಕ್ಕೆ ಮುಂದಿನ ಎರಡು ತಿಂಗಳಲ್ಲಿ ಎಲ್ಲಾ ಶಾಲೆಗಳಿಗೂ ಭೇಟಿ ನೀಡಿ ಅದರ ಉಪಯುಕ್ತತೆ ಬಗ್ಗೆ ಮಾಹಿತಿ ನೀಡಲಿದ್ದೇವೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಸೌರ ಚಾರ್ಜಿಂಗ್ ಬಳಸುತ್ತಿದ್ದೇವೆ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದರೆ ರಿಯಾಯಿತಿಯೂ ದೊರೆಯಲಿದೆ.ಇದು ಎಂಬೆಡೆಡ್ ಸಂಪರ್ಕ ಹೊಂದಿರುವುದರಿಂದ 3ಜಿ, 4ಜಿ, ಲಾನ್, ಯುಎಸ್‌ಬಿ, ವೈಫೈ, ಲ್ಯಾಂಡ್ ಮೊದಲಾದ ಬಹುವಿಧ ಆಯ್ಕೆ ಹೊಂದಿದೆ~ ಎಂದು ವಿವರಿಸಿದರು ನ್ಯಾನೊಟೆಲ್ ಟೆಕ್ನಾಲಜೀಸ್‌ನ ಜಾಗತಿಕ ಸಿಇಒ ಪ್ರಣಯ್ ಮಿಶ್ರಾ.`ಶಿಕ್ಷಣವನ್ನು ಗ್ರಾಫಿಕ್‌ಗಳಲ್ಲಿ ಬೋಧಿಸುವುದು ನಮ್ಮ ಉದ್ದೇಶವಲ್ಲ, ಅದನ್ನು ಅನಿಮೇಷನ್ ರೂಪದಲ್ಲಿ ನೀಡಿದ್ದೇವೆ ಅಷ್ಟೆ. 7,8,9 ಹಾಗೂ 10ನೇ ತರಗತಿಯ ಗಣಿತ ಹಾಗೂ ವಿಜ್ಞಾನದ ವಿಷಯಗಳು ಟ್ಯಾಬ್ಲೆಟ್‌ನಲ್ಲಿವೆ. 16ಜಿಬಿ ಮೆಮೊರಿ ಬಳಸಲಾಗಿದ್ದು ಇದನ್ನು 32 ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು~ ಎಂದು ಅವರು ವಿವರಿಸಿದರು.`ಸಣ್ಣ ಪುಟ್ಟ ರಿಪೇರಿಗಳಿಗಾಗಿ ರಾಜ್ಯದಾದ್ಯಂತ 120 ಮಳಿಗೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ಮೂರು ಸಾವಿರದಿಂದ ಎಂಟು ಸಾವಿರದೊಳಗಿನ ಟ್ಯಾಬ್ಲೆಟ್ ಹೊರತರುವ ಉದ್ದೇಶವೂ ಕಂಪೆನಿಗಿದೆ.ಮ್ಯಾಪ್, ಫೋನ್, ಕ್ಯಾಮೆರಾ, ಅಂತರ್ಜಾಲ, ಕ್ಯಾಲಿಕ್ಯುಲೇಟರ್, ಯುಟ್ಯೂಬ್, ಹಾಡು ಕೇಳುವ ಸೌಲಭ್ಯವನ್ನೂ ಅಳವಡಿಸಲಾಗಿದೆ. `ಮೌಜ್ ಮಸ್ತಿ~ ವಿಭಾಗದಲ್ಲಿ ಹಲವು ಆಟಗಳನ್ನೂ ಸೇರಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ ಎಲ್ಲಾ ರಾಜ್ಯಗಳಲ್ಲೂ ಟ್ಯಾಬ್ಲೆಟ್ ಬಿಡುಗಡೆ ಮಾಡಲಾಗುವುದು. ವಿದ್ಯಾರ್ಥಿಗಳಲ್ಲದೆ ವೃತ್ತಿಪರರೂ ಈ ಟ್ಯಾಬ್ಲೆಟ್‌ನ ಉಪಯೋಗ ಪಡೆದುಕೊಳ್ಳಬಹುದು~ ಎಂದರು ಹಿಂದಿ ಸಲಹಕಾರ್ ಸಮಿತಿಯ ಸದಸ್ಯ ರಾಘವೇಂದ್ರ.ಉದ್ಘಾಟಿಸಲು ತಡವಾಗಿ ಬಂದ ಉಪಮುಖ್ಯಮಂತ್ರಿ ಆರ್.ಅಶೋಕ್ ರಾಜಕೀಯ ಹೊಯ್ದಾಟಗಳಿಂದ ಹೊರಬಂದಂತೆ ಕಾಣುತ್ತಿರಲಿಲ್ಲ. `ನಗರಕ್ಕೆ ಹೊಸ ಟ್ಯಾಬ್ಲೆಟ್ ಬಂದಿರುವುದು ಸಂತಸದ ಸಂಗತಿ. ವಿದ್ಯಾರ್ಥಿಗಳು ತಮ್ಮ ದೈನಂದಿನ ಕಲಿಕೆಯೊಂದಿಗೆ ಟ್ಯಾಬ್ಲೆಟ್ ಬಳಸಿಕೊಂಡು ಉತ್ತಮ ಫಲಿತಾಂಶ ಪಡೆಯಲು ಪ್ರಯತಿಸಬಹುದು~ ಎನ್ನುತ್ತಾ ವಿಧಾನಸೌಧದತ್ತ ದೌಡಾಯಿಸಿದರು.ಕಾರ್ಯಕ್ರಮ ಮುಗಿಯುವ ಹೊತ್ತಿಗೆ `ಮುಂದೊಂದು ದಿನ ಮಕ್ಕಳು ಪೆನ್ ಹಿಡಿದು ಚೆಕ್‌ಗೆ ಸೈನ್ ಹಾಕುವುದನ್ನು ಕಲಿಯುವುದಷ್ಟೇ ಉಳಿಯುತ್ತದೆ~ ಎಂಬ ಮಾತು ಸೇರಿದವರ ಮಧ್ಯೆ ಕೇಳಿಬರುತಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.