ಶನಿವಾರ, ಮೇ 15, 2021
25 °C

ಅಗ್ಗದ ರೆಡಿಮೇಡ್ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಮನೆ ಕಟ್ಟಿ ನೋಡು~ ಎಂಬ ಗಾದೆ ಮಾತು ಮನೆಕಟ್ಟುವುದರ ಹಿಂದಿನ ಪರಿಶ್ರಮ ಸಮಸ್ಯೆಗಳನ್ನು ಅನಾವರಣಗೊಳಿಸುತ್ತದೆ. ಜೀವನದಲ್ಲಿ ಒಂದು ಒಳ್ಳೆಯ ಮನೆ ಕಟ್ಟಬೇಕೆಂದು ಕನಸು ಎಲ್ಲರಿಗೂ ಇರುತ್ತದೆ.

 

ಕೋಟಿಗಟ್ಟಲೆ ಖರ್ಚುಮಾಡಿಸಿ, ಅಂತಸ್ತಿಗೆ ತಕ್ಕಂತೆ ಮನೆ ಕಟ್ಟಿಕೊಡುವ ಎಂಜಿನಿಯರ್‌ಗಳೂ ಇದ್ದಾರೆ. ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವವರು ವಿರಳ. ಇಂತಹ ಪ್ರಯತ್ನವೀಗ ಸಾಕಾರಗೊಂಡಿದೆ. ಕಡಿಮೆ ವೆಚ್ಚದಲ್ಲಿ `ಪರಿಸರ ಸ್ನೇಹಿ~ ಮನೆ ನಿರ್ಮಾಣ ವಿಧಾನ ಈಗ ಮಲೆನಾಡಿನಲ್ಲಿ ಯಶಸ್ವಿಯಾಗಿದೆ.ಮನೆಕಟ್ಟುವುದಕ್ಕೆ ಕೈಯಲ್ಲಿ  ಕಾಸಿದ್ದರೆ ಪರವಾಗಿಲ್ಲ. ಚೂರುಪಾರು ಹಣ ಇಟ್ಟುಕೊಂಡು ಮನೆ ನಿರ್ಮಾಣಕ್ಕೆ ಮುಂದಾದರೆ ಫೌಂಡೇಷನ್ ಮಾತ್ರ ಹಾಕಲು ಸಾಧ್ಯ. ವರ್ಷಗಳು ಉರುಳಿದರೂ ಮನೆ ಕನಸಾಗಿಯೇ ಕಾಡುತ್ತದೆ.

 

ಮನೆ ನಿರ್ಮಾಣ ಸಾಮಗ್ರಿಗಳಾದ ಸಿಮೆಂಟ್, ಕಬ್ಬಿಣ, ಮರಳು ಇತ್ಯಾದಿಗಳ ಬೆಲೆ ದಿನೇ ದಿನೇ ಆಕಾಶಕ್ಕೇರುತ್ತಿದೆ. ಬ್ಯಾಂಕ್‌ಗಳು ಗೃಹ ನಿರ್ಮಾಣಕ್ಕೆ ಸಾಲ ನೀಡಿದರೂ ಬಡ್ಡಿ ಅತಿಯಾಗಿರುತ್ತದೆ.ಆದರೆ, ಇಲ್ಲಿ ರೂ 1 ಲಕ್ಷದಿಂದ ಹಿಡಿದು ರೂ 2 ಲಕ್ಷದೊಳಗೆ ಕನಸಿನ ಮನೆ ನಾಲ್ಕೆ ದಿನಗಳಲ್ಲಿ ವಾಸಕ್ಕೆ ಸಿದ್ದವಿರುತ್ತದೆ. ಜೊತೆಗೆ ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸಬಹುದು.ಹೌದು. ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯ ಕಾಫಿ ಬೆಳೆಗಾರರಾದ ಭಾಗ್ಯದೇವ್, ಮಲೆನಾಡಿನಲ್ಲಿ  ಬಡವರ ಪಾಲಿಗೆ ಭಾಗ್ಯದೇವನೇ ಆಗಿದ್ದಾರೆ. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ಇವರು ಮೊದಲು ಕೈಗಾ ಪ್ರಾಜೆಕ್ಟ್‌ನಲ್ಲಿ 2 ವರ್ಷ ಸೇವೆ ಸಲ್ಲಿಸಿದ್ದರು.ನಂತರ ಸಮಾಜಕ್ಕೆ ಏನನ್ನಾದರೂ ಮಾಡಬೇಕೆಂದು `ಉನ್ನತಿ ಇಕೊ  ಫ್ರೆಂಡ್ಲಿ ಟೆಕ್ನಾಲಜಿ~ ಹೆಸರಿನಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಬಡ, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಮನೆ ನಿರ್ಮಾಣ ಯೋಜನೆ ರೂಪಿಸಿದ್ದಾರೆ.ಈ ಮನೆಗಳಿಗೆ ಗರಿಷ್ಠ 60 ವರ್ಷ  ಬಾಳಿಕೆ ಖಾತರಿ ಕೊಡುತ್ತಾರೆ. ಈ  ಸಿದ್ಧ ಮನೆಗಳನ್ನು `ರೆಡಿಮೇಡ್ ಹೌಸ್~ ಅಥವಾ `ಫಾಸ್ಟ್ ಹೌಸ್~ ಎನ್ನಬಹುದು. ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಳಾಂತರಿಸಬಹುದು. ಮನೆ ನಿರ್ಮಾಣದಲ್ಲಿ ಶೇ. 60ರಷ್ಟು ಹಣ ಉಳಿತಾಯವಾಗುತ್ತದೆ.ಮನೆ ಹೀಗಿರುತ್ತದೆ

ಮನೆ ಕಟ್ಟ ಬಯಸುವವರು ಜಾಗ, ಮನೆಯ ವಿಸ್ತೀರ್ಣ, ತಮ್ಮ ವೆಚ್ಚ ತಿಳಿಸಬೇಕು. ಆಯಾ ಪ್ರದೇಶಕ್ಕೆ ಅನುಗುಣವಾಗಿ ಮನೆ ವಿನ್ಯಾಸ ಮಾಡಲಾಗುತ್ತದೆ. ಮನೆ ಗುಣಮಟ್ಟ ಕೂಡ ಸಧೃಡವೆಂದು ಖಾತರಿ ಕೊಡುತ್ತಾರೆ. ಮನೆಯ ಮೇಲ್ಛಾವಣಿಗೆ ಅಸ್ಬೆಸ್ಟಾಸ್ ಶೀಟ್ ಅಥವಾ ಹೆಂಚು ಬಳಸಲಾಗುತ್ತದೆ.ಗಾಳಿ, ಬೆಳಕು ಹೇರಳವಾಗಿ ದೊರೆಯುವಂತಿದೆ. ಇದೇ ಕ್ರಮದಲ್ಲಿ ಆರ್‌ಸಿಸಿ ಮನೆಗಳನ್ನು ನಿರ್ಮಿಸುತ್ತಾರೆ. ಗೋಡೆಗೆ ಇಟ್ಟಿಗೆ ಬಳಸುವುದಿಲ್ಲ. ಬದಲಿಗೆ ಜಲ್ಲಿ ಕಬ್ಬಿಣ, ಸಿಮೆಂಟ್ ಮರಳು ಮಿಶ್ರಣವಾದ ಮೌಲ್ಡೆಡ್ ಸ್ಯ್ಲಾಬ್ ಬಳಸಲಾಗುತ್ತದೆ.

 

ಈ ಗೋಡೆ ಗಟ್ಟಿಮುಟ್ಟಾಗಿದ್ದು, ಸಾಕಷ್ಟು ತೂಕ ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಫೌಂಡೇಷನ್ ಅಗತ್ಯವಿಲ್ಲ. ಗಟ್ಟಿಮಣ್ಣಿನ ಜಾಗವಲ್ಲದಿದ್ದರೆ ಮಾತ್ರ ಫೌಂಡೇಷನ್ ಬೇಕು.9x9 ಅಳತೆಯ ಮೂರು ಕೋಣೆಗಳು 3.5 x 6 ಅಳತೆಯ ಸ್ನಾನದ ಮನೆ ಮತ್ತು ಶೌಚಾಲಯ ಇರುತ್ತದೆ. ಎ.ಸಿ. ಶೀಟ್ಸ್‌ಗಳ ಮೇಲ್ಚಾವಣಿಯೂ ಇರುವ ಈ ಮನೆಗಳಿಗೆ ಅಡಿಗಲ್ಲು ಮತ್ತು ತಳಪಾಯವೂ ಸೇರಿ ಈ ಮನೆಯ ಅಂದಾಜು ವೆಚ್ಚ ರೂ 1 ಲಕ್ಷ.ಇನ್ನೊಂದು ವಿನ್ಯಾಸ 9x9 ಅಡಿಯ ನಡುಮನೆ (ಹಾಲ್) 9x9 ಅಡಿಯ ಮಲಗುವ ಕೋಣೆ  ಮತ್ತು 4.5 x9 ಅಡಿಯ ಅಡುಗೆಮನೆ ಮತ್ತು ಸ್ನಾನ ಗೃಹ  ಹೊಂದಿರುತ್ತದೆ, ಈ ಮಾದರಿಯ ಮನೆಗೆ ಆರ್.ಸಿ.ಸಿ. ಮೇಲ್ಛಾವಣಿ ಇರುತ್ತದೆ.ಅದರ ಮೇಲೆ ಬಿಸಿಲು ಮಳೆಯಿಂದ ರಕ್ಷಿಸುವುದಕ್ಕೆ ಎ.ಸಿ. ಶೀಟ್ಸ್‌ಗಳ ಸ್ಯ್ಲಾಬ್‌ಗಳನ್ನು ಜೋಡಿಸಲಾಗುತ್ತದೆ. ಈ ಮಾದರಿಯ ಮನೆಗಳಿಗೆ ರೂ1,40,000 ರೂ ವೆಚ್ಚ ತಗಲುತ್ತದೆ ಎನ್ನುತ್ತಾರೆ ಭಾಗ್ಯದೇವ್.ಈ ಮನೆಗಳು ಮನೆ ನಿರ್ಮಾಣ ಭಾಗದ ಶೇ. 38 ರಷ್ಟು ಜಾಗ ಉಳಿಸುತ್ತವೆ. ನೆಲ ರೆಡ್ ಆಕ್ಸೈಡ್‌ನದ್ದಾಗಿರುತ್ತದೆ. ಈ ಮನೆಗಳಿಗೆ ಎಲ್ಲಿಯೂ ಮರದ ಬಳಕೆಯಾಗಿಲ್ಲ. ಹೊಗೆ ರಹಿತ ಉನ್ನತಿ ಒಲೆಯ ನಿರ್ಮಾಣದಲ್ಲೂ ಸಿದ್ದಹಸ್ತರು.ಭಾಗ್ಯದೇವ್ ಪ್ರಕಾರ ಈ ರೀತಿಯ ಮನೆಗಳು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಇರುವ ಕೊಳಚೆ ಪ್ರದೇಶ ನಿರ್ಮೂಲನೆ ಮಾಡಲು ಹೆಚ್ಚು ಉಪಯುಕ್ತ. ನೆರೆಪೀಡಿತ ಪ್ರದೇಶಗಳಿಗೂ ಹೆಚ್ಚು ಸೂಕ್ತ.ಗೆಸ್ಟ್‌ಹೌಸ್, ಔಟ್‌ಹೌಸ್, ಕಾವಲುಗಾರನ ಕೊಠಡಿ, ಎಸ್‌ಟಿಡಿ ಭೂತ್‌ಗಳು. ಇಷ್ಟಲ್ಲದೆ ರೆಡಿಮೇಡ್ ಕಾಂಪೌಂಡ್ ಕೂಡ ಒಂದೇ ದಿನದಲ್ಲಿ ಸುಂದರವಾಗಿ ನಿರ್ಮಿಸಿಕೊಡುತ್ತಾರೆ.ಈಗಾಗಲೇ ಹುಬ್ಬಳ್ಳಿ, ಬೆಂಗಳೂರು, ದೊಡ್ಡ ಬಳ್ಳಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ನೆರೆಯ ಆಂಧ್ರಪ್ರದೇಶದಲ್ಲೂ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ.ಈಗಾಗಲೇ 300 ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿರುವ ಭಾಗ್ಯದೇವ್, 2000 ಕ್ಕೂ ಹೆಚ್ಚು ಶಾಲಾ ಅಡಿಗೆ ಕೊಠಡಿಗಳು ಹಾಗೂ ಶೌಚಲಯ ನಿರ್ಮಿಸಿಕೊಟ್ಟಿದ್ದಾರೆ.ಗ್ರಾಮೀಣ ನೈರ್ಮಲ್ಯಕ್ಕೆ ಒತ್ತು ಕೊಡುವ ಇವರು ರೂ9000ಕ್ಕೆ ಶೌಚಾಲಯ ನಿರ್ಮಿಸಿಕೊಡುತ್ತಾರೆ. ಲಾಭಕ್ಕಿಂತ ಜನಸಾಮಾನ್ಯರ ಮೂಲಭೂತ ಸೌಕರ್ಯಗಳಿಗೆ ನೆರವಾದ ತೃಪ್ತಿ ಇದೆ ಎನ್ನುತ್ತಾರೆ ಅವರು.ಒಟ್ಟಾರೆ 5 ಮಾದರಿಗಳಲ್ಲಿ ಮನೆಗಳು ಲಭ್ಯ. 4 ದಿನದಲ್ಲಿ  ಮನೆ ನಿರ್ಮಾಣ. ಶೇ. 38 ರಷ್ಟು ಜಾಗ ಉಳಿತಾಯ. ಶೇ. 60 ರಷ್ಟು ಹಣ ಉಳಿತಾಯ. ಫೌಂಡೇಷನ್ ಅಗತ್ಯವಿಲ್ಲ.ಆಯಾ ಪರಿಸರ ಅವಲಂಭಿಸಿ ಸ್ಥಳಾಂತರಿಸಬಹುದು. ಇದು ಈ ಮನೆಗಳ ವಿಶೇಷತೆ.  ಭಾಗ್ಯದೇವ್ ಅವರನ್ನು ಸಂಪರ್ಕಿಸಲು- 94498 26085,  99022 66777 ಅಗ್ಗದ `ಪರಿಸರ ಸ್ನೇಹಿ~ ಮನೆ ನಿರ್ಮಾಣ ವಿಧಾನ ಈಗ ಮಲೆನಾಡಿನಲ್ಲಿ ಯಶಸ್ವಿಯಾಗಿದೆ.ನಿರ್ಮಾಣ ಸಾಮಗ್ರಿಗಳಾದ ಸಿಮೆಂಟ್, ಕಬ್ಬಿಣ, ಮರಳು ಇತ್ಯಾದಿಗಳ ಬೆಲೆ ದಿನೇ ದಿನೇ ಆಕಾಶಕ್ಕೇರುತ್ತಿದೆ.  ಬ್ಯಾಂಕ್‌ಗಳು ಗೃಹ ನಿರ್ಮಾಣಕ್ಕೆ ಸಾಲ ನೀಡಿದರೂ ಬಡ್ಡಿ ಅತಿಯಾಗಿರುತ್ತದೆ.ರೂ1 ಲಕ್ಷದಿಂದ ಹಿಡಿದು ರೂ 2 ಲಕ್ಷದೊಳಗೆ ಕನಸಿನ ಮನೆ ನಾಲ್ಕು ದಿನಗಳಲ್ಲಿ ವಾಸಕ್ಕೆ ಸಿದ್ಧ ಇರುತ್ತದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.