ಶುಕ್ರವಾರ, ಜುಲೈ 30, 2021
28 °C
ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ

`ಅಗ್ಗದ ಸಾಹಿತ್ಯದಿಂದ ವಿಕೃತಿಗೆ ದಾರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ(ಟಿ.ಎಸ್.ವೆಂಕಣ್ಣಯ್ಯ ವೇದಿಕೆ): `ಜನಪ್ರಿಯ ಸಾಹಿತ್ಯ ಅಗ್ಗದ ಸಾಹಿತ್ಯವಲ್ಲ. ಅಗ್ಗದ ಸಾಹಿತ್ಯ ಜನರ ಅಭಿರುಚಿ ಹಾಳುಗೆಡವಿ, ಅವರನ್ನು ದಾರಿ ತಪ್ಪಿಸುತ್ತದೆ. ರೋಚಕತೆ, ವಿಕೃತಿಗಳನ್ನು ಸೃಷ್ಟಿಸುತ್ತದೆ' ಎಂದು ಖ್ಯಾತ ಸಾಹಿತಿ ಬರಗೂರು ರಾಮಚಂದ್ರಪ್ಪ ವ್ಯಾಖ್ಯಾನಿಸಿದರು.ನಗರದ ಎಸ್‌ಜೆಎಂ ಸಭಾಂಗಣದಲ್ಲಿ ಸೋಮವಾರ ಆರಂಭವಾದ 11ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, `ಜನಪ್ರಿಯ ಸಾಹಿತ್ಯ ಅಗ್ಗದ ಸಾಹಿತ್ಯಕ್ಕಿಂತ ಭಿನ್ನ' ಎಂದು ಈ ಮೊದಲೇ ಸಾಹಿತ್ಯದ ವಿಮರ್ಶೆಗಳು ಹೇಳಬೇಕಿತ್ತು ಎನಿಸುತ್ತದೆ. ಹಾಗೆ ಮಾಡದೇ, ವಿಮರ್ಶೆಗಳು ಜನಪ್ರಿಯ ಸಾಹಿತ್ಯ ಮತ್ತು ಸಾಹಿತಿಗಳನ್ನು ಅನುಮಾನದಿಂದ ನೋಡುವಂತೆ ಮಾಡಿದವು ಎಂದು ಹೇಳುತ್ತಾ, `ಸಾಹಿತಿ ನಿರಂಜನ ಅವರ `ಚಿರಸ್ಮರಣೆ' ಕಾದಂಬರಿಯನ್ನು `ಉತ್ತಮ' ಎನ್ನಲು ನಮ್ಮ ವಿಮರ್ಶಕರಿಗೆ ಹತ್ತು ವರ್ಷ ಬೇಕಾಯಿತು ಎಂದು ಉದಾಹರಿಸಿದರು.ಜನಪ್ರಿಯತೆ ವ್ಯಾಖ್ಯಾನ: ಬ್ರೆಕ್ಟ್ - ಎಂಬ ನಾಟಕಕಾರ `ಜನಪ್ರಿಯ ಕಲೆ' ಎನ್ನುವುದನ್ನು ಹೀಗೆ ವಿವರಿಸುತ್ತಾನೆ. `ಜನರ ಬದುಕಿನಿಂದ ಜನರ ಆಶಯಗಳನ್ನು ಸ್ವೀಕರಿಸಿ, ಜನರ ಪರಿಕರಗಳನ್ನೇ ಬಳಸಿಕೊಂಡು, ಅದನ್ನೇ ಅಭಿವ್ಯಕ್ತಪಡಿಸಿ ಮತ್ತೆ ಜನರಿಗೆ ತಲುಪಿಸುವುದೇ ಜನಪ್ರಿಯ ಕಲೆ'. ಜನಪ್ರಿಯ ಸಾಹಿತ್ಯಕ್ಕೂ ನಾನು ಇದೇ ವ್ಯಾಖ್ಯಾನ ನೀಡುತ್ತೇನೆ ಎಂದು ಅವರು ವಿವರಿಸಿದರು.ಕನ್ನಡದಲ್ಲಿ ಜನಪ್ರಿಯವಾಗಿ ಬರೆಯುತ್ತಲೇ ಗಂಭೀರವಾದ ಚಿಂತನೆಗಳನ್ನು ಸಮಾಜಕ್ಕೆ ನೀಡಿರುವ ಅನೇಕ ಮಹನೀಯರು ನಮ್ಮ ನಡುವೆ ಇದ್ದಾರೆ. ಅವರಲ್ಲಿ ತರಾಸು, ಅನಕೃ, ನಿರಂಜನ, ಬಸವರಾಜ ಕಟ್ಟೀಮನಿ, ಡಿಸೋಜ, ಸತ್ಯಕಾಮ, ಕೆ.ಟಿ. ಗಟ್ಟಿ, ಬೀಚಿ.. ಇವರ‌್ಯಾರೂ ಜನರ ಅಭಿರುಚಿಯನ್ನು ಕೆಡಿಸಲಿಲ್ಲ. ಇದೇ ಸಾಲಿನಲ್ಲಿ ವೇಣು ನಿಲ್ಲುತ್ತಾರೆ ಎಂದು ಶ್ಲಾಘಿಸಿದರು.ಒಂದು ಕಾಲದಲ್ಲಿ ಸಾಹಿತ್ಯವೆಂದರೆ ಗಂಭೀರವಾಗಿರಬೇಕು ಎನ್ನುವಂತಿತ್ತು. ಜನರಿಗೆ ಹೆಚ್ಚು ಅರ್ಥವಾಗದಿರುವುದೇ ಶ್ರೇಷ್ಠ ಸಾಹಿತ್ಯ ಎಂದು ಬಿಂಬಿಸಲಾಗುತ್ತಿತ್ತು. ತಾನು ಬರೆದದ್ದು ತನಗೇ ಗೊತ್ತಾಗದದ್ದು ಉತ್ತಮ ಸಾಹಿತ್ಯವೇ? ಕನ್ನಡದ ವಿಮರ್ಶೆಗಳು ಇಂಥ ಬೀಜವನ್ನು ಬಿತ್ತುತ್ತಾ, ಜನಪ್ರಿಯ ಸಾಹಿತಿಗಳನ್ನು ಅನುಮಾನದಿಂದ ನೋಡುವಂತೆ ಮಾಡುತ್ತಿದ್ದವು ಎಂದು ನೆನಪಿಸಿಕೊಂಡರು.

ಒಡೆಯರ್ ಸ್ಮರಣೆ:  ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವಾಗ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಜ್ಞಾಪಿಸಿಕೊಳ್ಳದಿದ್ದರೆ ಸಮ್ಮೇಳನ ಅರ್ಥಪೂರ್ಣವಾಗುವುದಿಲ್ಲ ಎಂದ ಅವರು, ಚರಿತ್ರೆಯ ಅಪವ್ಯಾಖ್ಯಾನದಲ್ಲಿ ಅನ್ಯಾಯಕ್ಕೊಳಗಾದವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕೂಡ ಒಬ್ಬರು ಎಂದು ಪ್ರತಿಪಾದಿಸಿದರು.ಒಡೆಯರ್ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಉಗಮಕ್ಕೆ ಮೂಲ ಪ್ರೇರಕರು. ಇದು ಚರಿತ್ರೆಯಲ್ಲಿ ದಾಖಲಾಗಲಿಲ್ಲ. ಒಡೆಯರ್ ಅವರು ಒಮ್ಮೆ ಎಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರೊಂದಿಗೆ ಮಾತನಾಡುತ್ತಾ, `ರಾಜ್ಯದಲ್ಲಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವಂತಹ ಸಾಹಿತ್ಯ ಸಂಸ್ಥೆಯೊಂದನ್ನು ನಿರ್ಮಿಸಬೇಕು ಎಂಬ ಅಭಿಲಾಷೆ ವಕ್ತಪಡಿಸಿದ್ದರು. ಅದು ಪ್ರಭುತ್ವಕ್ಕೆ ಒಳಪಡದಂತೆ ನಡೆಯಬೇಕು. ಅದಕ್ಕೆ ಬೇಕಾದ ಕಾರ್ಯಕ್ರಮ ರೂಪಿಸಿ' ಎಂದಿದ್ದರು. ಅಷ್ಟೇ ಅಲ್ಲ, ರೂ 5000 ಹಣವನ್ನು ಸಂಸ್ಥೆಗೆ ಪ್ರಥಮ ದೇಣಿಗೆಯಾಗಿ ನೀಡಿದ್ದರು. ಅಲ್ಲಿಂದ ಆರಂಭವಾದ ಪರಿಷತ್ತು, ಇಂದು ಕೋಟ್ಯಂತರ ರೂಪಾಯಿಯ ಹಣಕಾಸು ವಹಿವಾಟು ಹೊಂದಿದೆ ಎಂದು ರಾಮಚಂದ್ರಪ್ಪ ನೆನಪಿಸಿಕೊಂಡರು.ಹೀಗೆ ಚರಿತ್ರೆಗಳ ಅಪವ್ಯಾಖ್ಯಾನದಿಂದಾಗಿ ನಾಡಿನ ಅನೇಕ ಸಾಂಸ್ಕೃತಿಕ ಹಾಗೂ ಐತಿಹಾಸಿಕ ವಿಚಾರಗಳು ಜನರಿಗೆ ತಪ್ಪಾಗಿ ತಲುಪುತ್ತಿವೆ. ಟಿಪ್ಪು, ಚಿತ್ರದುರ್ಗದ ಇತಿಹಾಸವೂ ಹೀಗೆ ಅಪವ್ಯಾಖ್ಯಾನವಾಗುತ್ತಿದೆ. ಇದರಿಂದ ಚರಿತ್ರೆಗೆ ನಾವು ಅನ್ಯಾಯ ಮಾಡುತ್ತಿದ್ದೇವೆ. ಹಾಗಾಗಿ ಚರಿತ್ರೆಯ ಪುನರ್ ವ್ಯಾಖ್ಯಾನ ಮಾಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಪ್ರಸ್ತುತ ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಸಂಸ್ಥೆಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ. ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ವಿಶ್ವಾಸ ಅರ್ಹತೆ ಪ್ರದರ್ಶಿಸುತ್ತವೆ ಎಂದ ಅವರು, ಸಾಹಿತಿಗಳು ಅಲ್ಪ ಸ್ವಲ್ಪ ವಿಶ್ವಾಸರ್ಹತೆ ಉಳಿಸಿಕೊಂಡಿದ್ದಾರೆ. ಅದನ್ನು ಮುಂದೆ ಹಾಗೆ ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕೆಂದರು.ಸಾಂಸ್ಕೃತಿಕ ಅವಲೋಕನ ಅಗತ್ಯ: ಈ  ಕಾಲಘಟ್ಟದಲ್ಲಿ ಸಾಂಸ್ಕೃತಿಕ ಲೋಕವೂ ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಾಗಾಗಿ ಈ ಕ್ಷೇತ್ರದಲ್ಲೂ ಆತ್ಮಾವಲೋಕನ ಪ್ರಕ್ರಿಯೆ ನಡೆಯಬೇಕಿದೆ. ಇಲ್ಲಿ ಅನುಮಾನ, ಅಪನಂಬಿಕೆಯ ವಾತಾವರಣ ಸೃಷ್ಟಿಯಾಗಿದೆ. ಸಾಹಿತ್ಯದೊಂದಿಗೆ ಧರ್ಮ, ಜಾತಿ, ಸಂಸ್ಕೃತಿಯ ಸಂಬಂಧ ಹೇಗಿದೆ ಎಂಬುದನ್ನು ಜನರಿಗೆ ವಿವರಿಸಬೇಕಿದೆ. ಜನರಲ್ಲಿ ಸಾಹಿತಿಗಳ ಬಗ್ಗೆ ಇರುವ ನಂಬಿಕೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.ಪಕ್ಷದೊಳಗಿದ್ದು, ಪಕ್ಷಗಳನ್ನು ಮೀರುವ ನಾಯಕತ್ವ ಇಂದು ಅಗತ್ಯವಾಗಿ ಬೇಕಾಗಿದೆ. ಜಾತಿಯಲ್ಲಿದ್ದು, ಜಾತಿ ಮೀರಿ ಚಿಂತಿಸುವ ಸಾಮಾಜಿಕ ನಾಯಕತ್ವ ಹಾಗೂ ಧರ್ಮದೊಳಗಿದ್ದು, ಧರ್ಮ ಮೀರಿ ಚಿಂತಿಸುವ ಧಾರ್ಮಿಕ ನಾಯಕತ್ವ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.ಸಮ್ಮೇಳನದ ಅಧ್ಯಕ್ಷ ಬಿ.ಎಲ್.ವೇಣು, ಕೇಂದ್ರ ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ, ಶಾಸಕ ತಿಪ್ಪಾರೆಡ್ಡಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.