ಶುಕ್ರವಾರ, ಜೂನ್ 18, 2021
21 °C
ನಗರ ಸಂಚಾರ

ಅಗ್ನಿಶಾಮಕ ದಾರಿಬಿಡಿ

ಪ್ರಜಾವಾಣಿ ವಾರ್ತೆ/ ವಿಷ್ಣು ಭಾರದ್ವಾಜ್‌ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ‘ಬೆಂಕಿ ಬಿದ್ದಾಗ ಬಾವಿ ತೋಡಿದರು’ ಎಂಬುದು ಗಾದೆಮಾತು, ಆದರೆ ತೋಡಿದ ಬಾವಿಯಲ್ಲೇ  ನೀರಿಲ್ಲದ ಗುಲ್ಬರ್ಗದಲ್ಲಿ ದುರಂತದ ವೇಳೆ ಅಗ್ನಿಶಾಮಕ ದಳದ ನೆರವು ಬೇಕೇಬೇಕು. ಗಂಟೆ–ಸೈರನ್‌ ಮೊಳಗಿಸಿ ಕರೆ ಬಂದ ಕಡೆಯೆಲ್ಲ ಹಾಜರಾಗುವ ಇವರನ್ನು ಕೆಲಸ ಮುಗಿಯುವ ಮುನ್ನವೇ ಮರೆಯುವವರು ಅಧಿಕ. ಇದೀಗ ಬೇಸಿಗೆ. ಈ ‘ಆಪ್ತಮಿತ್ರ’ರ ಫೋನ್‌ ಸಂಖ್ಯೆ–101 ಎಲ್ಲರಲ್ಲೂ ಇರಲೇಬೇಕು. ಅಗತ್ಯಕಷ್ಟೇ ಕರೆ ಮಾಡಿ ಸಾಕು.ಹೈ–ಕ ಪ್ರದೇಶ ಸೇರಿ ಎಂಟು ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಗುಲ್ಬರ್ಗ ವಲಯ ಅಗ್ನಿಶಾಮಕ ಕಾರ್ಯಾಲಯದ ಸಿಬ್ಬಂದಿಗೆ ಮಾರ್ಚ್‌ ತಿಂಗಳಿಂದ ‘ಹಂಗಾಮಾ’ ಶುರು. ಯಾವುದೇ ಕ್ಷಣ  ಎಂತಹ ಸಾಹಸಕ್ಕಾದರೂ ಸಿದ್ಧರಿರಬೇಕು. ಆದರೆ ಬೆಂಕಿಗೇ ಹೆದರದ ಇವರು, ಗುಲ್ಬರ್ಗ ನಗರದ ಮೂರು ವೃತ್ತಗಳಿಗೆ ಹೆದರುತ್ತಾರೆ. ಶಹಾಬಜಾರ್‌ ವೃತ್ತ, ಲಾಳಗೇರಿ ವೃತ್ತ, ವಲ್ಲಭ ಭಾಯ್ ವೃತ್ತ! ಇವೆಲ್ಲ ಅಗ್ನಿಶಾಮಕ ಠಾಣೆ ಎಡಬಲದಲ್ಲೇ ಇವೆ.  ತುರ್ತು ವಾಹನದ ಧಾವಂತದ ಚಾಲನೆ, ಸಮಯ ಪಾಲನೆ,ಗುರಿತಲುಪುವುದು ತುಂಬ ಕಷ್ಟ. ವಾಹನಗಳ ಅಡ್ಡಾದಿಡ್ಡಿ ಪಾರ್ಕಿಂಗ್‌, ಅನಗತ್ಯ ದಟ್ಟಣೆ. ರಸ್ತೆ ಅಗಲವಾಗಿದ್ದರೂ  ಅಡಚಣೆ ಹೆಚ್ಚು ಎನ್ನುತ್ತಾರೆ ವಲಯ ಅಗ್ನಿಶಾಮಕ ಅಧಿಕಾರಿ  ಪಿ.ಜಿ. ರಾಜು.ಬಹುಮಹಡಿ ಸಮಸ್ಯೆ: ಗುಲ್ಬರ್ಗ ಸೇರಿದಂತೆ ಹೈ–ಕ ಬದಲಾಗಿದೆ. ನೂರಾರು ಜನರು ವಾಸಿಸುವ ಬಹುಮಹಡಿ ಕಟ್ಟಡಗಳು, ಬಹುಮಹಡಿ ಆಸ್ಪತ್ರೆಗಳು, ಶಾಪಿಂಗ್‌ ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು  ಹೆಚ್ಚುತ್ತಿವೆ. ಇಲ್ಲೆಲ್ಲ ಕಡ್ಡಾಯವಾಗಿ ಅಗ್ನಿಶಾಮಕ ನಿಬಂಧನೆಗಳನ್ನು ಪಾಲಿಸಬೇಕು. ಪ್ರತಿ ಕಟ್ಟಡದ ಎತ್ತರದ ಮೂರನೇ ಒಂದು ಭಾಗದಷ್ಟು ಜಾಗವನ್ನು ಕಟ್ಟಡದ ಸುತ್ತ (ಸೆಟ್‌ಬ್ಯಾಕ್‌)ಮೀಸಲಿಟ್ಟಿರಬೇಕು. ಆದರೆ ‘ಗುಲ್ಬರ್ಗದಲ್ಲಿರುವ ಕೆಲವು ಮಾಲ್‌, ಆಸ್ಪತ್ರೆ, ಅಪಾರ್ಟ್‌ಮೆಂಟ್‌ಗಳು ಈ ನಿಬಂಧನೆ ಪಾಲಿಸಿಲ್ಲ.  ಇವರಿಗೆ ನೋಟೀಸ್‌ ನೀಡಿ ಸ್ಪಂದಿಸದಿದ್ದರೆ 180 ದಿನಗಳಲ್ಲಿ ಹಂತಹಂತವಾಗಿ ನೀರು, ವಿದ್ಯುತ್‌ ಸಂಪರ್ಕ ಕಡಿತ ಮಾಡಬಹುದು.  ಪರವಾನಗಿ ರದ್ದತಿಗೂ ಅವಕಾಶವಿದೆೆ’ ಎನ್ನುತ್ತಾರೆ ಪಿ.ಜಿ. ರಾಜು.ಜಾತ್ರೆಗೆ ಬೇಕು ಪರವಾನಗಿ: ಉರುಸ್‌, ಜಾತ್ರೆ  ಮುಂತಾದ ಲಕ್ಷಾಂತರ ಜನ ಸೇರುವಲ್ಲಿ ನಿಗದಿತ ಶುಲ್ಕ ಪಾವತಿಸಿ ಅಗ್ನಿಶಾಮಕ ವಾಹನ ಜಾಗೃತ ಸ್ಥಿತಿಯಲ್ಲಿ ಇರಿಸಬೇಕು ಎಂಬ ನಿಬಂಧನೆ ಇದೆ. ಆದರೆ ಸಂಘಟಕರು ಪೊಲೀಸ್‌– ನಗರಪಾಲಿಕೆ ಪರವಾನಗಿ ಮಾತ್ರ ಪಡೆಯುತ್ತಾರೆ. ಅಗ್ನಿಶಾಮಕ ಕಚೇರಿಗೆ ಮಾಹಿತಿ ನೀಡುವುದಿಲ್ಲ. ಅಂಗಡಿ ಸಾಲಿನ ಮಧ್ಯೆ ಅಗ್ನಿಶಾಮಕ ವಾಹನ ಸಂಚಾರಕ್ಕೆ ದಾರಿ ಬಿಟ್ಟಿರಬೇಕೆಂಬ ನಿಯಮ, ಮುನ್ನೆಚ್ಚರಿಕೆಯನ್ನೂ ಪಾಲಿಸುತ್ತಿಲ್ಲ ಎಂಬುದು ಅಗ್ನಿಶಾಮಕ ಅಧಿಕಾರಿಗಳ ದೂರು.ತರಬೇತಿ ಶಾಲೆ: ಗುಲ್ಬರ್ಗ ಕೇಂದ್ರವಾಗಿ ಎಂಟು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಲಯ ಅಗ್ನಿಶಾಮಕ ಇಲಾಖೆ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಸವಣ್ಣ, ವಲಯ ಅಗ್ನಿಶಾಮಕ ಅಧಿಕಾರಿ ಪಿ.ಜಿ.ರಾಜು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಎ.ಕೆ. ಚೌಡಯ್ಯ ಇವರ ನೇತೃತ್ವದಲ್ಲಿ ಸುಸಜ್ಜಿತವಾಗಿದೆ. ಇದೇ ವೇಳೆ ಸಿಬ್ಬಂದಿ ತರಬೇತಿಗಾಗಿ ಗುಲ್ಬರ್ಗದ ನಾಗನೂರಿನ ಪೊಲೀಸ್‌ ತರಬೇತಿ ಕೇಂದ್ರಕ್ಕೆ ಸಮೀಪದಲ್ಲೇ ಅಗ್ನಿಶಾಮಕ ತರಬೇತಿ ಶಾಲೆ ನಿರ್ಮಾಣಕ್ಕೆ ಸಿದ್ಧತೆ ಪ್ರಗತಿಯಲ್ಲಿದೆ.‘ವಾಹನಕ್ಕೆ ದಾರಿ ಬಿಡಿ’

ಬೆಂಕಿ, ನೀರು ಅವಘಡಗಳಲ್ಲಿ ತುರ್ತು ಸ್ಪಂದಿಸಲು ಪ್ರತಿ 40 ಕಿ.ಮೀ.ಗಳಿಗೆ ಒಂದರಂತೆ ಅಗ್ನಿಶಾಮಕ ಠಾಣೆ ಇದೆ. ಆದರೆ ದುರಂತದ ಜಾಗಕ್ಕೆ ತಲುಪಲು ಹತ್ತಿರದ ರಸ್ತೆಯ ಮಾಹಿತಿಯ ಕೊರತೆ, ವಿಳಾಸದ ಅಸ್ಪಷ್ಟತೆ , ರಸ್ತೆಗಳ ದುರವಸ್ಥೆ, ಚಾಲಕರು, ಸವಾರರು ಅಗ್ನಿಶಾಮಕ ವಾಹನಕ್ಕೆ ಮುಂದೆ ಸಾಗಲು ಅವಕಾಶ ನೀಡುವಷ್ಟು ಜಾಗೃತರಾಗದಿರುವುದು ಇತ್ಯಾದಿ ಸಮಸ್ಯೆ ಇದೆ.

–ಪಿ.ಜಿ. ರಾಜು, ವಲಯ ಅಗ್ನಿಶಾಮಕ ಅಧಿಕಾರಿ101–ಬೋಗಸ್‌ ಕರೆ

‘ಅಗ್ನಿಶಾಮಕ ಕಾರ್ಯಾಲಯಕ್ಕೆ ನೆರವು ಕೋರಿ ಕರೆ ಮಾಡಲು ಶುಲ್ಕ ರಹಿತ  ‘101’ ದೂರವಾಣಿ ಸಂಖ್ಯೆ ಇದೆ. ಇದಕ್ಕೆ ಪ್ರತಿದಿನ ನೂರಾರು ಕರೆಗಳು ಬರುತ್ತಿವೆ. ಇದರಲ್ಲಿ ಹೆಚ್ಚಿನವುಗಳು ಕಿಡಿಗೇಡಿಗಳು ವಿಕೃತ ಮನರಂಜನೆಗಾಗಿ ಮಾಡುವ ಬೋಗಸ್‌ ಕರೆಗಳು’ ಎನ್ನುತ್ತಾರೆ ತುರ್ತುಕರೆ ಸ್ವೀಕರಿಸುವ ವಿಭಾಗದ ರಮೇಶ ಹರನಾಳ ಹಾಗೂ ಕಲ್ಯಾಣ್‌ ರಾವ್‌. ಜನರೂ ಜಾಗೃತರಾಗಬೇಕು ಎಂದು ಸಿಬ್ಬಂದಿ ಮನವಿ ಮಾಡಿದ್ದಾರೆ.ಮಾಲಾ ಮಾಲ್!

15 ಮೀಟರ್‌ಗಿಂತ ಎತ್ತರ ಇದ್ದರೆ ಬಹುಮಹಡಿ ಕಟ್ಟಡ. ಕಡಿಮೆ ಇದ್ದರೂ  ಅಗ್ನಿಶಾಮಕ ಇಲಾಖೆ ನಿಗದಿ ಪಡಿಸಿದ ದುರಂತ ನಿರ್ವಹಣ ಸೌಲಭ್ಯ ಹೊಂದಿರಬೇಕು. ಈ ಬಗ್ಗೆ ಇಲಾಖೆಯಿಂದ ನಿರಕ್ಷೇಪಣಾ ಪತ್ರ, ನಿಗದಿತ ಪ್ರಮಾಣ ಪತ್ರ ಪಡೆದಿರಬೇಕು. ಆದರೆ ಗುಲ್ಬರ್ಗದಲ್ಲಿ 30ಕ್ಕೂ ಅಧಿಕ ಬಹುಮಹಡಿ ಕಟ್ಟಡಗಳು, ಮಾಲ್‌ಗಳು  ನಿಯಮ ಪಾಲಿಸಿಲ್ಲ. ಇಲಾಖೆ ಕಾನೂನು ರೀತ್ಯ ಕ್ರಮಕ್ಕೆ ಸಿದ್ಧವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.