ಭಾನುವಾರ, ಮೇ 9, 2021
20 °C

ಅಗ್ನಿ ಅನಾಹುತ: 17 ಆಟೊ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಚ್‌ಬಿಆರ್ ಲೇಔಟ್ ಒಂದನೇ ಹಂತದ ಕಾಚರಕನಹಳ್ಳಿಯಲ್ಲಿರುವ `ಚಾಮುಂಡಿ ಮೋಟಾರ್ಸ್‌' ಹೆಸರಿನ ಆಟೊ ಸರ್ವಿಸ್ ಸೆಂಟರ್‌ನಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅನಾಹುತದಲ್ಲಿ 17 ಆಟೊಗಳು ಸುಟ್ಟು ಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.ಎರಡು ಅಂತಸ್ತುಗಳಲ್ಲಿರುವ ಆ ಸರ್ವಿಸ್ ಸೆಂಟರ್ ಕಟ್ಟಡದಲ್ಲಿ ಸಂಜೆ ಐದು ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ವಲ್ಪ ಸಮಯದಲ್ಲೇ ಬೆಂಕಿಯ ಪ್ರಮಾಣ ಹೆಚ್ಚಾಗಿ, ಒಳ ಭಾಗದಿಂದ ಹೊಗೆ ಬರುತ್ತಿದ್ದನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.12 ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಿಸಿದರು. ಆದರೆ, ಕಟ್ಟಡದಲ್ಲಿದ್ದ ತೈಲೋತ್ಪನ್ನಗಳ ಬ್ಯಾರಲ್‌ಗಳು, ಆಟೊಗಳ ಗ್ಯಾಸ್ ಸಿಲಿಂಡರ್‌ಗಳು ಹಾಗೂ ವಾಹನಗಳ ಬ್ಯಾಟರಿಗಳಿಗೂ ಬೆಂಕಿ ಹೊತ್ತಿಕೊಂಡಿತು. ಇದರಿಂದಾಗಿ ಸಿಬ್ಬಂದಿಗೆ ಕಟ್ಟಡದ ಸಮೀಪಕ್ಕೆ ತೆರಳಿ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ. ಹೆಚ್ಚಿನ ಸಿಬ್ಬಂದಿ ಹಾಗೂ ಅಗ್ನಿನಂದಕ ವಾಹನಗಳನ್ನು ಕರೆಸಿಕೊಂಡು ಮೂರು ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ರಾತ್ರಿ ಎಂಟು ಗಂಟೆ ಸುಮಾರಿಗೆ ಬೆಂಕಿ ನಂದಿಸಿದರು.`ಮಗಳು ಬೃಂದಾ ಓಡಿ ಬಂದು ಆಟೊ ಸರ್ವಿಸ್ ಸೆಂಟರ್‌ನ ಒಳ ಭಾಗದಿಂದ ಹೊಗೆ ಬರುತ್ತಿದೆ ಎಂದು ಹೇಳಿದಳು. ನೋಡಿದಾಗ ಸರ್ವಿಸ್ ಸೆಂಟರ್‌ನ ಬಳಿ ದಟ್ಟ ಹೊಗೆ ಆವರಿಸಿತ್ತು. ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಿದೆ' ಎಂದು ಸ್ಥಳೀಯರಾದ ಸುರೇಂದ್ರ ಹೇಳಿದರು. ಹೇಮಂತ್‌ಕುಮಾರ್ ಎಂಬುವರು ಆ ಸರ್ವಿಸ್ ಸೆಂಟರ್‌ನ ಮಾಲೀಕರು ಎಂದು ಗೊತ್ತಾಗಿದೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕಾಡುಗೊಂಡನಹಳ್ಳಿ ಪೊಲೀಸರು ತಿಳಿಸಿದ್ದಾರೆ.ರಕ್ಷಣಾ ಕ್ರಮ ಕೈಗೊಂಡಿರಲಿಲ್ಲ: `ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಈ ಅವಘಡ ಸಂಭವಿಸಿರಬಹುದು. ಅಗ್ನಿ ಅನಾಹುತ ತಡೆಗೆ ಸೂಕ್ತ ರಕ್ಷಣಾ ಕ್ರಮಗಳನ್ನು ಕೈಗೊಂಡಿರಲಿಲ್ಲ' ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಉಪ ನಿರ್ದೇಶಕ ಡಿ.ರಶೀದ್ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.